Advertisement

ವೃತ್ತಿ ರಂಗಭೂಮಿ ರಂಗಾಯಣ ಕನಸು ನನಸು

04:28 PM Apr 08, 2022 | Team Udayavani |

ದಾವಣಗೆರೆ: ವೃತ್ತಿ ರಂಗಭೂಮಿಯ ತವರೂರು ದಾವಣಗೆರೆಯಲ್ಲಿ ಕೊನೆಗೂ ವೃತ್ತಿ ರಂಗಭೂಮಿ ರಂಗಾಯಣದ ಪ್ರಾರಂಭಕ್ಕೆ ಅಂಕ ಸಜ್ಜಾಗಿದೆ.

Advertisement

ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ವೃತ್ತಿ ರಂಗಭೂಮಿಯ ತವರೂರು ಎಂಬ ಖ್ಯಾತಿ ಹೊಂದಿದೆ. ದಾವಣಗೆರೆಗೆ ಬಂದಂತಹ ನಾಟಕ ಕ್ಯಾಂಪ್‌ ಬರಿಗೈಲಿಯಲ್ಲಿ ಹೋದ ಉದಾಹರಣೆಯೇ ಇಲ್ಲ. ಬೇರೆ ಕಡೆ ನಷ್ಟ ಅನುಭವಿಸಿ ದಾವಣಗೆರೆಗೆ ಬಂದ ಅನೇಕ ಕಂಪನಿಗಳು ನಷ್ಟ ಸರಿದೂಗಿಸಿಕೊಂಡು ಲಾಭ ಗಳಿಸಿದ ಉದಾಹರಣೆಗಳಿವೆ. ಹಾಗಾಗಿಯೇ ವೃತ್ತಿ ರಂಗಭೂಮಿ ಕಂಪನಿ, ಕಲಾವಿದರಿಗೆ ದಾವಣಗೆರೆ ತವರೂರು.

ಈಗಲೂ ದಾವಣಗೆರೆಯಲ್ಲಿ ಕ್ಯಾಂಪ್‌ ಮಾಡಿದ ಕಲಾವಿದರಿಗೆ ಊಟೋಪಚಾರ ಮಾಡುವುದು ಇದೆ. ನಾಟಕ ಕಲಾವಿದರ ಪೋಷಣೆ ಮಾತ್ರವಲ್ಲ ಇಲ್ಲಿನವರೇ ಅನೇಕ ಡ್ರಾಮಾ ಕಂಪನಿ ಕಟ್ಟಿ ನೂರಾರು ಕಲಾವಿದರಿಗೆ ಅವಕಾಶ ಮತ್ತು ಜೀವನ ಅಂಕ ಮುಂದುವರೆಸಲು ನೆರವಾಗುತ್ತಿದ್ದಾರೆ. ವೃತ್ತಿ ರಂಗಭೂಮಿ ಮಾತ್ರವಲ್ಲ, ಪ್ರತಿಮಾ ಸಭಾದಂತಹ ಹವ್ಯಾಸಿ ನಾಟಕ ಕಲಾವಿದರು ಇಲ್ಲಿದ್ದಾರೆ. ಖ್ಯಾತ ರಂಗ ನಿರ್ದೇಶಕ ಬಿ.ವಿ. ಕಾರಂತ್‌ ಸಾರಥ್ಯದಲ್ಲಿ ನಾಟಕ ಕುರಿತಾದ ವಿಚಾರ ಸಂಕಿರಣ, ನಾಟಕ ಪ್ರದರ್ಶನ ನಡೆದಿವೆ. ರಾಜ್‌ಕುಮಾರ್‌ ಅವರೇ ಉದ್ಘಾಟಿಸಿದ ವೃತ್ತಿ ರಂಗಭೂಮಿ ಕಲಾವಿದರ ಸಂಘ ದಾವಣಗೆರೆಯಲ್ಲಿದೆ. ವೃತ್ತಿ ರಂಗಭೂಮಿಯ ಉಸಿರಾಗಿರುವ ದಾವಣಗೆರೆಯಲ್ಲಿ ಮತ್ತೆ ವೃತ್ತಿ ರಂಗಭೂಮಿಯ ಗತವೈಭವ ಮರು ಸ್ಥಾಪನೆಯ ನಿರಂತರ ಪ್ರಯತ್ನ ನಡೆದೇ ಇತ್ತು. ಕೆಲವೊಂದು ಪ್ರಯತ್ನ ಯಶ ಕಾಣಲಿಲ್ಲ.

ಕೊನೆಗೂ 2018ರಲ್ಲಿ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ದಾವಣಗೆರೆ ಸಮೀಪದ ಕೊಂಡಜ್ಜಿಯಲ್ಲಿ ವೃತ್ತಿ ರಂಗಭೂಮಿ ಶಾಲೆ ಪ್ರಾರಂಭದ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಿದರು. ಆದರೆ ವಿವಿಧ ಕಾರಣದಿಂದ ವೃತ್ತಿ ರಂಗಭೂಮಿ ಶಾಲೆ ಕಾರ್ಯಗತ ವಿಳಂಬ ಆಯಿತು. ಸಿದ್ದರಾಮಯ್ಯ ಸರ್ಕಾರದ ಅವಧಿಯೂ ಮುಗಿಯಿತು. ಹಾಗಾಗಿ ರಂಗಭೂಮಿ ಶಾಲೆ ನಿರೀಕ್ಷಿತ ವೇಗ ಪಡೆಯಲಿಲ್ಲ.

2019ರ ಜು. 19 ರಂದು ಹಿರಿಯ ಕಲಾವಿದ ಗಂಗಾಧರಸ್ವಾಮಿ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಕ ಮಾಡಲಾಯಿತು. 2020 ರ ಸೆ. 5 ರಂದು ಕಿರುತೆರೆ, ಹಿರಿತೆರೆಯ ಹಿರಿಯ ಕಲಾವಿದ ಯಶವಂತ ಸರದೇಶಪಾಂಡೆ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು. ಮಹಾಮಾರಿ ಕೊರೊನಾ, ಸರ್ಕಾರದ ಉದಾಸೀನತೆ ಹೀಗೆ ಹಲವು ಕಾರಣದಿಂದ ವೃತ್ತಿ ರಂಗಭೂಮಿ ಶಾಲೆ ಆರಂಭವಾಗಲಿಲ್ಲ. ಕೊನೆಗೂ ರಂಗಭೂಮಿ ಶಾಲೆಯ ಪ್ರಾರಂಭಕ್ಕೆ ಮುಹೂರ್ತ ಕೂಡಿ ಬಂದಿದೆ. ವೃತ್ತಿ ರಂಗಭೂಮಿ ಶಾಲೆಯ ಹೆಸರನ್ನು ವೃತ್ತಿ ರಂಗಭೂಮಿ ರಂಗಾಯಣ ಎಂಬುದಾಗಿ ಬದಲಾಯಿಸಲಾಗಿದೆ. ಏ. 11 ರಂದು ವೃತ್ತಿ ರಂಗಭೂಮಿ ರಂಗಾಯಣ ಉದ್ಘಾಟನೆಗೊಳ್ಳಲಿದೆ.

Advertisement

ವೃತ್ತಿ ರಂಗಭೂಮಿಯ ಇತಿಹಾಸ, ಅಗತ್ಯತೆ, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಂಗಾಯಣದಪಾತ್ರ ಪ್ರಮುಖದ್ದಾಗಿದೆ. ನಾಡಿನ ಸಂಸ್ಕೃತಿಯ ಪ್ರತೀಕವಾದ ವೃತ್ತಿ ರಂಗಭೂಮಿಯ ಪುನರುಜ್ಜೀವನಕ್ಕೆ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ವೇದಿಕೆಯಾಗಲಿ ಎಂಬುದು ರಂಗಾಸಕ್ತರ ಆಶಯ.

ಪ್ರಾರಂಭದಲ್ಲಿ ಘೋಷಣೆಯಾಗಿದ್ದ ವೃತ್ತಿ ರಂಗಭೂಮಿ ಶಾಲೆಯ ಹೆಸರನ್ನ ಸರ್ಕಾರ ಈಚೆಗೆ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ಎಂಬುದಾಗಿ ಬದಲಾಯಿಸಿ 10 ಎಕರೆ ಜಾಗ ಮಂಜೂರು ಮಾಡಿದೆ. ಏ. 11ರಂದು ದಾವಣಗೆರೆಯ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ತಾತ್ಕಾಲಿಕವಾಗಿ ಉದ್ಘಾಟನೆಯಾಗಲಿದೆ. ಮುಂದಿನ ದಿನಗಳಲ್ಲಿ 10 ಎಕರೆ ಜಾಗದಲ್ಲಿ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ಪ್ರಾರಂಭಿಸಿ, ವೃತ್ತಿ ರಂಗಭೂಮಿಯ ಗತವೈಭವ ಮರು ಸ್ಥಾಪಿಸುವ ಮಹತ್ತರ ಕಾರ್ಯ ಕೈಗೆತ್ತಿಗೊಳ್ಳಲಾಗುವುದು. – ರವಿಚಂದ್ರ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

-ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next