ತುಮಕೂರು: ಇಂದಿನ ತಂತ್ರಜ್ಞಾನ ಯುಗದಲ್ಲಿ ರಂಗಭೂಮಿ ಕಲೆ ಜೀವಂತವಾಗಿರಬೇಕಾದರೆ ಹವ್ಯಾಸಿ ರಂಗಭೂಮಿಗೆ ಪ್ರೋತ್ಸಾಹ ಅವಶ್ಯಕವಾಗಿದೆ ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾಶ್ರೀ ಡಾ. ಲಕ್ಷ್ಮಣ್‌ದಾಸ್ ಹೇಳಿದರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕಮನೆ ವತಿಯಿಂದ ನಡೆದ ಎರಡು ದಿನಗಳ ಹಾಸ್ಯ ನಾಟಕೋತ್ಸವ ಉದ್ಘಾಟಸಿ ಮಾತನಾಡಿ, ನಾಟಕ ನೋಡುವ ಹವ್ಯಾಸ ಯುವ ಸಮೂಹಕ್ಕೆ ಬೆಳೆಸಬೇಕು. ನಾಟಕೋತ್ಸವದಲ್ಲಿ ಪ್ರದರ್ಶನವಾಗುತ್ತಿರುವ ನಾಟಕಗಳು ಪ್ರಸಿದ್ಧಿ ಪಡೆದಿರುವ ನಾಟಕಗಳಾಗಿವೆ. 1993ರಲ್ಲಿ ಪ್ರಾರಂಭಗೊಂಡ ಕೃಷ್ಣಸಂಧಾನ ನಾಟಕ ಇಂದಿಗೂ ಜನರಿಗೆ ಹಾಸ್ಯ ಉಣ ಬಣಿಸುತ್ತಿರುವುದು ಸಂತಸದ ವಿಚಾರ ಎಂದರು.
ನಾಟಕಮನೆ ಉಳಿಯಲಿ: ಈ ನಾಟಕ ಸಿನಿಮಾವಾದರೂ ಯಶಸ್ವಿಯಾಗಲಿಲ್ಲ. ಆದರೆ ನಾಟಕ ಇಂದಿಗೂ ಜೀವಂತವಾಗಿರುವುದಕ್ಕೆ ಕಲಾವಿದರು ಕಾರಣ. ರಂಗಕಲೆಗೆ ಭೂಮಿಯೊಂದಿಗೆ ನಂಟು ಬೆಳೆದಿರುವುದಕ್ಕೆ ಅದರಿಂದ ಸಿಗುವ ಮನೋಲ್ಲಾಸ, ಜೀವನೋತ್ಸಾಹ ಕಾರಣ. ನಗರದಲ್ಲಿ ರಂಗ ಚಟುವಟಿಕೆ ಉಳಿಸಿಕೊಳ್ಳಲು ನಾಟಕಮನೆ ಉಳಿಯಬೇಕು ಹಾಗೂ ಬೆಳೆಯಬೇಕು ಎಂದು ಹೇಳಿದರು.
ನಾಟಕೋತ್ಸವ ಹಾಗೂ ರಂಗಕಲೆ ಬಗ್ಗೆ ನೇತ್ರ ತಜ್ಞ ಡಾ.ದಿನೇಶ್‌ಕುಮಾರ್, ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಮಾತನಾಡಿದರು. ರಂಗಕರ್ಮಿ ತುಮಕೂರು ಶಿವಕುಮಾರ್, ಕನ್ನಡ ಮತ್ತು ಸಂಸ್ಕ ೃತಿ ಇಲಾಖೆ ಉಪ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ನಾಟಕಮನೆ ಮಹಾಲಿಂಗು, ಜನಪದ ಕಲಾವಿದರಾದ ಚಿತ್ರದುರ್ಗ ರಾಜಣ್ಣ, ಮೆಳೇಹಳ್ಳಿ ದೇವರಾಜು ಇತರರಿದ್ದರು.
ಪ್ರೇಕ್ಷಕರಿಗೆ ಮನೋರಂಜನೆ: ನಾಟಕೋತ್ಸವ ಮೊದಲನೇ ದಿನ ಪ್ರದರ್ಶನಗೊಂಡ ಕೃಷ್ಣಸಂಧಾನ ನಾಟಕವನ್ನು ನೂರಾರು ಪ್ರೇಕ್ಷಕರು ವೀಕ್ಷಿಸಿದರು. ಗ್ರಾಮೀಣ ಪ್ರದೇಶದಲ್ಲಿ ಮಹಾಭಾರತ ನಾಟಕ ಕಲಿಯುವಾಗ ಉಂಟಾಗುವ ಹಾಸ್ಯದ ರಂಜನೆ ನಾಟಕದ ತಿರುಳಾಗಿತ್ತು. ನಾಟಕಮನೆ ಪ್ರಯೋಗಿಸಿದ ಕೃಷ್ಣಸಂಧಾನ ಹಾಗೂ ಗರ್ಗಂಟಪ್ಪನ ಮಗ ಪರ್ಗಂಟ ಹಾಸ್ಯ ನಾಟಕಗಳು ರಂಗಾಸಕ್ತ ಪ್ರೇಕ್ಷಕರಿಗೆ ಮನೋರಂಜನೆ ನೀಡಿದವು.