Advertisement

ಮತ್ತೆ ಗೊಂದಲಕ್ಕೆ ಸಿಲುಕಿದ ಜಿಪಂ ಕಟ್ಟಡ

12:02 PM Sep 17, 2019 | Suhan S |

ಹಾವೇರಿ: ಕ‌ಟ್ಟಡಕ್ಕೆ ರಾಜಕೀಯ ನಾಯಕರ ಹೆಸರಿಡುವ ವಿಚಾರ ಗೊಂದಲದಲ್ಲಿ ಸಿಲುಕಿ ಸುದ್ದಿಯಾಗಿದ್ದ ಜಿಲ್ಲಾ ಪಂಚಾಯಿತಿಯ ನೂತನ ಆಡಳಿತ ಭವನ, ಈಗ ಉದ್ಘಾಟನೆ ವಿಚಾರದಲ್ಲಿ ಮತ್ತೆ ಗೊಂದಲಕ್ಕೆ ಸಿಲುಕಿ ಸುದ್ದಿಯಾಗಿದೆ.

Advertisement

ಜಿಲ್ಲಾ ಪಂಚಾಯಿತಿಯ ನೂತನ ಆಡಳಿತ ಭವನ ಅಧಿಕೃತವಾಗಿ ಉದ್ಘಾಟನೆ ಆಗಿದೆಯೋ ಇಲ್ಲವೋ ಎಂಬುದು ಈಗ ಸೃಷ್ಟಿಯಾಗಿರುವ ಹೊಸ ಗೊಂದಲ. ಸೆ. 19ರಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಂದ ಆಡಳಿತ ಭವನ ಉದ್ಘಾಟನೆಗೆ ಸಿದ್ಧತೆ ನಡೆದಿರುವ ಹಿನ್ನೆಲೆಯಲ್ಲಿ ಈ ಗೊಂದಲ ಶುರುವಾಗಿದೆ.

ಜಿಪಂ ಆಡಳಿತ ಭವನದ ನೂತನ ಕಟ್ಟಡವನ್ನು 2018ರ ವಿಧಾನಸಭೆ ಚುನಾವಣೆಗೂ ಮುನ್ನ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರಕ್ಕೆ ಬಂದಾಗ ಮುನ್ಸಿಪಲ್ ಮೈದಾನದಲ್ಲಿ ನಡೆದ ವಿವಿಧ 36 ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಯ ಶಿಲಾನ್ಯಾಸ ಸಂದರ್ಭದಲ್ಲಿಯೇ ಜಿಪಂ ಆಡಳಿತ ಭವನದ ಶಿಲಾನ್ಯಾಸ ಫಲಕವನ್ನಿಟ್ಟು ಉದ್ಘಾಟನೆ ಮಾಡಲಾಗಿದೆ. ಒಮ್ಮೆ ಮುಖ್ಯಮಂತ್ರಿಯವರಿಂದ ಉದ್ಘಾಟನೆ ಆದ ಮೇಲೆ ಮುಗಿಯಿತು. ಮತ್ತೆ ಉದ್ಘಾಟನೆ ಮಾಡುವುದು ಆಭಾಸ ಎನಿಸುತ್ತದೆ ಎಂಬುದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಅವರ ವಾದ.

ಪ್ರತಿವಾದ: ಜಿಪಂ ಆಡಳಿತ ಭವನ ಕಟ್ಟಡ ಉದ್ಘಾಟನೆ ಆಗಿರುವ ಬಗ್ಗೆ ಜಿಪಂ ಸದಸ್ಯರಿಗೂ ಮಾಹಿತಿ ಇಲ್ಲ. ಸದಸ್ಯರನ್ನು ಆಹ್ವಾನಿಸುವ ಯಾವ ಶಿಷ್ಟಾಚಾರವೂ ಪಾಲನೆ ಆಗಿಲ್ಲ. ಅಂದಿನ ಆಮಂತ್ರಣ ಪತ್ರಿಕೆಯಲ್ಲಿ ಕಟ್ಟಡ ಉದ್ಘಾಟನೆಯ ಉಲ್ಲೇಖವೂ ಇರಲಿಲ್ಲ. ಜಿಪಂ ಇಂಜಿನಿಯರಿಂಗ್‌ ಅಭಿಯಂತರು ಸಹ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ ಎಂದು ಹಿರಿಯ ಅಧಿಕಾರಿಗಳ ಸಭೆಯಲ್ಲಿಯೇ ಸ್ಪಷ್ಟಪಡಿಸಿದ್ದಾರೆ. ಕೇವಲ ಒಂದು ವಾರದ ಹಿಂದಷ್ಟೇ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದಾರೆಂಬ ಬರಹ ಇರುವ ಶಿಲಾಫಲಕವನ್ನು ಆಡಳಿತ ಭವನ ಕಟ್ಟಡಕ್ಕೆ ಅಳವಡಿಸಲಾಗಿದೆ. ಫಲಕ ಅಳವಡಿಸುವುದನ್ನೂ ಸದಸ್ಯರ ಗಮನಕ್ಕೆ ತಂದಿಲ್ಲ. ಅಷ್ಟಕ್ಕೂ ನೂತನ ಕಟ್ಟಡವನ್ನು ಜಿಪಂಗೆ ಇವತ್ತಷ್ಟೇ ಹಸ್ತಾಂತರಿಸಲಾಗಿದೆ. ಹೀಗಾಗಿ ಜಿಪಂ ಆಡಳಿತ ಭವನದ ಕಟ್ಟಡ ಅಧಿಕೃತವಾಗಿ ಉದ್ಘಾಟನೆಯಾಗಿಲ್ಲ. ಆದ್ದರಿಂದ ಈಗ ಉದ್ಘಾಟನೆ ಮಾಡಲಾಗುತ್ತಿದೆ ಎಂಬುದು ಜಿಪಂನ ಹಾಲಿ ಅಧ್ಯಕ್ಷ ಎಸ್‌.ಕೆ. ಕರಿಯಣ್ಣನವರ ಅವರ ಪ್ರತಿವಾದ. ಹಾಲಿ ಮತ್ತು ಮಾಜಿ ಅಧ್ಯಕ್ಷರ ನಡುವಿನ ಈ ಜಟಾಪಟಿ ಮತ್ತೆ ಜಿಪಂ ಆಡಳಿತ ಭವನ ಕಟ್ಟಡ ಗೊಂದಲಕ್ಕೆ ಸಿಲುಕಿ ರಾಜಕೀಯ ಚರ್ಚೆಗೆ ಇಂಬು ನೀಡಿದೆ.

 

Advertisement

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next