ಬೆಂಗಳೂರು: ಕೃಷಿ ಚಟುವಟಿಕೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಯುವ ಪೀಳಿಗೆ ಹೆಚ್ಚು ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸಲಹೆ ನೀಡಿದ್ದಾರೆ.
ಉದ್ಯೋಗಕ್ಕಾಗಿ ಯುವಜನರು ಹಾಗೂ ರಾಜ್ಯ ಸರ್ಕಾರಿ ಗುತ್ತಿಗೆ ನೌಕರರ ಒಕ್ಕೂಟದಿಂದ ಭಾನುವಾರ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಆಯೋಗ ಮತ್ತು ಸೇವಾಭದ್ರತೆ ದುಂಡು ಮೇಜಿನ ಸಭೆ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮೂಲಕ ಯುವಕರು ಮತ್ತೆ ಹಳ್ಳಿಗಳಿಗೆ ವಾಪಾಸ್ ಆಗುವ ಪರಿಸ್ಥಿತಿ ನಿರ್ಮಾಣವಾಗಬೇಕು.
ಯುವಕರು ಕೃಷಿಗೆ ಮರಳಬೇಕು. ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರ ಕೊರತೆ ತಪ್ಪಿಸಬೇಕು ಎಂದರು. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ನಿರ್ಮಾಣವಾಗಬೇಕು. ಇದರಿಂದ ಯುವಕರಿಗೆ, ಮಹಿಳೆಯರಿಗೆ ಉದ್ಯೋಗ ಲಭಿಸುತ್ತದೆ. ಎಲ್ಲರಿಗೂ ಸರ್ಕಾರವೇ ಉದ್ಯೋಗ ನೀಡುವುದಕ್ಕೆ ಸಾಧ್ಯವಿಲ್ಲ. ಸಂಘ, ಸಂಸ್ಥೆಗಳು ಸ್ವಯಂ ಉದ್ಯೋಗ ಸೃಷ್ಟಿಗೆ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಸಾಮಾಜಿಕ ಹೋರಟಗಾರ ಹಾಗೂ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮs… ಮಾತನಾಡಿ, ಸಾಮಾಜಿಕ ಅಸಮಾತೋಲನ ಹೆಚ್ಚಾಗುತ್ತಿದ್ದು, ಶ್ರೀಮಂತರ ಮತ್ತು ಬಡವರ ನಡುವೆ ದೊಡ್ಡ ಕಂದಕ ನಿರ್ಮಾಣವಾಗುತ್ತಿದೆ. ಸಂಪತ್ತು ಕೆಲವೇ ಜನರ ಬಳಿ ಕ್ರೋಢೀಕೃತವಾಗುತ್ತಿದೆ.
ಯಾವುದೇ ಕಾರಣಕ್ಕೂ ಕೃಷಿ ಭೂಮಿ ಕೃಷಿಯೇತರ ಚಟುವಟಿಕೆಗೆ ಮತ್ತು ಅರಣ್ಯಭೂಮಿ ಅರಣ್ಯಯೇತರ ಉದ್ದೇಶಕ್ಕೆ ಬಳಕೆಯಾಗಬಾರದು ಎಂದು ಹೇಳಿದರು. ಸುಸ್ಥಿರ ಉದ್ಯೋಗ ಕೇಂದ್ರದ ನಿರ್ದೇಶಕ ಅಮಿತ್ ಬಾಸೂಲೆ, ಅಂಕಣಕಾರ ಕೆ.ಪಿ.ಸುರೇಶ್, ಕರ್ನಾಟಕ ರಾಜ್ಯ ಸರ್ಕಾರಿ ಗುತ್ತಿಗೆ ನೌಕರರ ಒಕ್ಕೂಟ ಅಧ್ಯಕ್ಷ ಡಾ.ವಾಸು, ಪ್ರೊ. ನಾಗೇಗೌಡ ಮೊದಲಾದವರು ಇದ್ದರು.