ಬೆಂಗಳೂರು: ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮುಳುಗಿ ಹೋಗಿರುವ ಇಂದಿನ ಯುವ ಪೀಳಿಗೆಗೆ ತಮ್ಮ ಕುಟುಂಬದ ಹಿರಿಯ ಸಾಧಕರ ಸಾಧನೆ ಬಗ್ಗೆ ಅರಿವಿಲ್ಲದಿರುವುದು ಬೇಸರದ ಸಂಗತಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ನಾಡೋಜ ಎಂ.ಎಚ್.ಕೃಷ್ಣಯ್ಯ ಅಭಿಪ್ರಾಯಪಟ್ಟರು.
ಎಚ್‌ಎಎಲ್ ಕೇಂದ್ರೀಯ ಕನ್ನಡ ಸಂಘ, ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕ ರಾ.ನಂ.ಚಂದ್ರಶೇಖರ ಅವರ “ವಿಮಾನ ಮಾನ’, ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಂಪ್ಯೂಟರ್ ಮತ್ತು ಮೊಬೈಲ್‌ನಲ್ಲಿ ಮುಳುಗಿ ಹೋಗಿರುವ ಹಲವು ಮಕ್ಕಳಿಗೆ ತಮ್ಮ ಪೋಷಕರು ಎಷ್ಟೇ ಸಾಧನೆ ಮಾಡಿದರು.ಅವರ ಸಾಧನೆಯ ಬಗ್ಗೆ ಅರಿವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಎಚ್.ಎ.ಎಲ್‌ನಲ್ಲಿ ಕೆಲಸ ಮಾಡಿರುವ ಹಲವು ದಿಗ್ಗಜರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೂಡುಗೆ ನೀಡಿದ್ದಾರೆ.ಆದರೆ ಅವರ ಕುಟುಂಬದವರಿಗೆ ಈಗ ಅವರ ಸಾಧನೆ ಬಗ್ಗೆ ಮಾಹಿತಿಯೇ ಇಲ್ಲ.ಇದು ಸಾಧಕರ ಬಗ್ಗೆ ಮಾಹಿತಿ ಪಡೆಯಲು ಹೋದ ಲೇಖಕ ರಾ.ನಂ.ಚಂದ್ರಶೇಖರ ಅವರಿಗೆ ಅನುಭವವಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯದ ಜೊತೆಗೆ ನೆಲೆ, ಜಲದ ವಿಚಾರದಲ್ಲೂ ಎಚ್.ಎ.ಎಲ್ ನೌಕರರು ಹೋರಾಟ ಮಾಡಿದ್ದಾರೆ.ಅಂತವರ ಹೆಸರಿನಲ್ಲಿ “ವಿಮಾನ ಮಾನ’, ಪುಸ್ತಕ ಹೊರ ತಂದಿರುವುದು ಖುಷಿ ಪಡುವ ವಿಚಾರವಾಗಿದೆ. ವಿಜ್ಞಾನ-ತಂತ್ರಜ್ಞಾನದ ಸಂವೇದನೆ ಕೃತಿಯಲ್ಲಿ ಅಡಕವಾಗಿದೆ ಎಂದು ತಿಳಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, “ವಿಮಾನ ಮಾನ’, ಶ್ರೇಷ್ಠ ಕೃತಿಯಾಗಿ ಹೊರಹೊಮ್ಮಿದೆ. ಕನ್ನಡ ಸಾಹಿತ್ಯ ಲೋಕದ ಹಲವು ಸಾಧಕರು ಅಲ್ಲಿ ಕೆಲಸ ಮಾಡಿರುವುದು ಈ ಪುಸ್ತಕ ಓದಿನಿಂದ ತಿಳಿಯುತ್ತದೆ. ಇಂತಹ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲಿ ಎಂದು ಆಶಿಸಿದರು.
ಇದೇ ವೇಳೆ ಎಚ್.ಎ.ಎಲ್ ನಲ್ಲಿ ಸೇವೆ ಸಲ್ಲಿಸಿದ ಸಾಹಿತಿ ಈಶ್ವರ ಚಂದ್ರ, ಕೆ.ಎ.ಭಗವಾನ್, ಪತ್ರಕರ್ತ ಚಿರಂಜೀವಿ, ವಿಜ್ಞಾನ ಬರಹಗಾರ ಸುಧೀಂದ್ರ ಹಾಲೊಡ್ಡೇರಿ, ಲೇಖಕಿ ನೇಮಿಚಂದ್ರಮ್ಮ, ರಾಮನ್‌ತಳಿ ಸುಧಾಕರನ್ ಅವರನ್ನು ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಎಂ.ಎ.ಗೋಪಾಲಸ್ವಾಮಿ, ಲೇಖಕ ರಾ.ನಂ.ಚಂದ್ರಶೇಖರ, ಎಚ್.ಎ.ಎಲ್.ಸಿಇಒ ಡಿ.ದೀಪಕ್ ಸೇರಿದಂತೆ ಮತ್ತಿತರರು ಇದ್ದರು.