Advertisement

ಯುವಕನ ರುಂಡ ಬೇರ್ಪಡಿಸಿ ಭೀಕರ ಹತ್ಯೆ

11:41 AM May 05, 2018 | |

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಗಂಗಮ್ಮನಗುಡಿಯ ರಾಮಚಂದ್ರಪುರ ಬಸ್‌ ನಿಲ್ದಾಣ ಬಳಿ ಐದಾರು ಮಂದಿ ದುಷ್ಕರ್ಮಿಗಳು ಗುರುವಾರ ರಾತ್ರಿ ಯುವಕನೊಬ್ಬನ ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಹತ್ಯೆಗೈದಿದ್ದಾರೆ.

Advertisement

ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರ ನಿವಾಸಿ ಡೇವಿಡ್‌ (34) ಹತ್ಯೆಯಾದವ. ಈ ಸಂಬಂಧ ವಿದ್ಯಾರಣ್ಯಪುರ ನಿವಾಸಿ, ಆಟೋ ಚಾಲಕ ಪ್ರಸಾದ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಮತ್ತೂಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮಾತುಕತೆ ನಡೆಸಲೆಂದು ಡೇವಿಡ್‌ನ‌ನ್ನು ರಾಮಚಂದ್ರಪುರ ಬಸ್‌ ನಿಲ್ದಾಣದ ಬಳಿ ಕರೆದೊಯ್ದ ಪ್ರಸಾದ್‌ ಮತ್ತು ಸಹಚರರು, ಬರ್ಬರವಾಗಿ ಹತ್ಯೆಗೈದು ರುಂಡ ಒಂದೆಡೆ, ಮುಂಡ ಒಂದೆಡೆ ಎಸೆದು ಪರಾರಿಯಾಗಿದ್ದರು. ಈ ಸಂಬಂಧ ಇನ್ನು ಆರು ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡೇವಿಡ್‌ ಈ ಮೊದಲು ಎಚ್‌ಎಂಟಿ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್‌ ಚಾಲಕನಾಗಿದ್ದು, ಕಳೆದ ಕೆಲ ದಿನಗಳಿಂದ ಕೆಲಸ ಬಿಟ್ಟು ಖಾಸಗಿ ಕಾರು ಓಡಿಸುತ್ತಿದ್ದ. ಗುರುವಾರ ಸಂಜೆ ಸ್ನೇಹಿತರ ಒತ್ತಾಯದ ಮೇರೆಗೆ ಮದ್ಯ ಸೇವಿಸಲು ಬಂದಿದ್ದ ಆತ ರಾತ್ರಿ 9.30ರ ಸುಮಾರಿಗೆ ವಾಪಸ್‌ ಹೋಗುವಾಗ ಕರೆ ಮಾಡಿದ ಪ್ರಸಾದ್‌ ನಿನ್ನೊಂದಿಗೆ ಮಾತುಕತೆ ನಡೆಸಬೇಕು ಎಂದು ಹೇಳಿ ರಾಮಚಂದ್ರಪುರ ಬಸ್‌ ನಿಲ್ದಾಣದ ಬಳಿ ಕರೆಸಿಕೊಂಡಿದ್ದಾರೆ.

ರುಂಡ-ಮುಂಡ ಬೇರ್ಪಡಿಸಿದ ದುಷ್ಕರ್ಮಿಗಳು: ಜೋರಾಗಿ ಮಳೆ ಬರುತ್ತಿದ್ದುದರಿಂದ ಡೇವಿಡ್‌ ರಾಮಚಂದ್ರಪುರ ಬಸ್‌ ನಿಲ್ದಾಣ ಬಳಿ ಬೈಕ್‌ ನಿಲ್ಲಿಸುತ್ತಿದ್ದಂತೆ ಐದಾರು ಮಂದಿ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಆತನ ಮೇಲೆ ಹಲ್ಲೆ ನಡೆಸಿದರು.

Advertisement

ಅವರಿಂದ ತಪ್ಪಿಸಿಕೊಂಡು ಓಡಾಡಲು ಪ್ರಯತ್ನಿಸಿದರೂ ಅವಕಾಶ ನೀಡದ ದುಷ್ಕರ್ಮಿಗಳು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರಲ್ಲದೆ, ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಹತ್ಯೆಗೈದಿದ್ದಾರೆ. ಬಳಿಕ ರುಂಡವನ್ನು ಕೊಂಡೊಯ್ದು ಕೊಲೆಗೈದ ಸ್ಥಳದಿಂದ ಅರ್ಧ ಕಿಲೋ ಮೀಟರ್‌ ದೂರದಲ್ಲಿರುವ ಖಾಸಗಿ ಶಾಲೆಯ ಆವರಣದ ಧ್ವಜ ಸ್ತಂಭದ ಕೆಳಗೆ ಎಸೆದು ಪರಾರಿಯಾಗಿದ್ದರು.

ಇತ್ತ ಬಸ್‌ ನಿಲ್ದಾಣದ ಬಳಿ ರುಂಡವಿಲ್ಲದ ದೇಹ ಬಿದ್ದಿರುವುದನ್ನು ಕಂಡ ಸ್ಥಳೀಯರು ಗಂಗಮ್ಮನಗುಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ರಾತ್ರಿಯೆಲ್ಲ ರುಂಡಕ್ಕಾಗಿ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಶುಕ್ರವಾರ ಬೆಳಗ್ಗೆ ಶಾಲೆ ಆವರಣದಲ್ಲಿ ರುಂಡ ಪತ್ತೆಯಾಗಿದ್ದು, ನಂತರ ಕೊಲೆಯಾದವ ಡೇವಿಡ್‌ ಎಂಬುದು ಗೊತ್ತಾಗಿದೆ.

ಘಟನಾ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಆದರೆ. ಮದ್ಯ ಸೇವಿಸಿದ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನಾಧಿರಿಸಿ ಆರು ಮಂದಿಯನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಅಧಿಕಾರಿ ವಿವರಿಸಿದ್ದಾರೆ.

ಯುವತಿಯ ವಿಚಾರಕ್ಕೆ ಜಗಳ: ಯುವತಿಯ ವಿಚಾರಕ್ಕೆ ಸಂಬಂಧಿಸಿದಂತೆ 15 ದಿನಗಳ ಹಿಂದೆ ಡೇವಿಡ್‌ ಹಾಗೂ ಪ್ರಸಾದ್‌ ಸಹಚರರ ನಡುವೆ ಜಗಳವಾಗಿತ್ತು. ಆದರೆ, ಆ ಯುವತಿ ಯಾರು? ಆಕೆಗೂ ಡೇವಿಡ್‌ಗೂ ಏನು ಸಂಬಂಧ ಎಂದು ಗೊತ್ತಾಗಿಲ್ಲ. ವಿಚಾರಣೆ ಬಳಿಕ ತಿಳಿಯಲಿದೆ.

ಅಲ್ಲದೆ, ಆ್ಯಂಬುಲೆನ್ಸ್‌ ಚಾಲಕನಾಗಿದ್ದ ಡೇವಿಡ್‌ ಕೆಲ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಎಂಬ ಮಾಹಿತಿಯಿದೆ. 2006ರಲ್ಲಿ ಈತನ ವಿರುದ್ಧ ವಿದ್ಯಾರಣ್ಯಪುರದಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಜತೆಗೆ ಕಾಂಗ್ರೆಸ್‌ನ ಕಾರ್ಯಕರ್ತ ಎಂಬ ಮಾಹಿತಿಯಿದೆ. ಹೀಗಾಗಿ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next