Advertisement
ಇರ್ಕಿಗದ್ದೆ ಶೀನ ನಾಯ್ಕ ಅವರ ಪುತ್ರ ವಿವೇಕಾನಂದ (28) ಸೆ. 16ರ ಮಧ್ಯಾಹ್ನ ಕಂಬಕ್ಕಾಗಿ ಮರವೊಂದನ್ನು ಕಡಿದು ತರಲೆಂದು ಹೋಗಿದ್ದು, ದಾರಿ ತಪ್ಪಿ ಅರಣ್ಯದಲ್ಲಿ ಕಾಣೆಯಾಗಿದ್ದರು. ಇಂದು ಮನೆಯಿಂದ 4 ಕಿ.ಮೀ. ದೂರದ ಕಬ್ಬಿನಾಲೆಯ ಕಾಡಿನ ಸಮೀಪ ಪತ್ತೆಯಾಗಿದ್ದಾರೆ. ಅವರೊಂದಿಗೆ ತೆರಳಿದ್ದ ನಾಯಿ ಜತೆಗೇ ಇದ್ದು ಸ್ವಾಮಿನಿಷ್ಠೆ ಮೆರೆದಿದೆ.
ಸೆ. 16ರ ಮಧ್ಯಾಹ್ನ ವಿವೇಕಾನಂದ ಕಾಡಿಗೆ ಹೋಗಿದ್ದರು. ಜತೆಗೆ 2 ಸಾಕುನಾಯಿಗಳೂ ಹೋಗಿದ್ದವು. ಅದರಲ್ಲೊಂದು ಮರಳಿತ್ತು. ಮನೆಯವರಿಗೆ ಆತ ಕಾಡಿಗೆ ತೆರಳಿದ್ದು ಗೊತ್ತಿರಲಿಲ್ಲ. ಹಳೆಯ ಮಾಳಿಗೆ ಮನೆಯಾಗಿದ್ದರಿಂದ ಮಧ್ಯಾಹ್ನ ಊಟ ಮಾಡಿ ಮಹಡಿಯಲ್ಲಿ ಮಲಗಿರಬಹುದು ಅಂದು ಕೊಂಡಿದ್ದರು. ಸಂಜೆಯಾದಾಗ ಆತ ಕಾಣಿಸದ ಕಾರಣ ಆತಂಕಗೊಂಡ ಮನೆಯವರು ಅಕ್ಕಪಕ್ಕದವರಿಗೆ ಸುದ್ದಿ ತಿಳಿಸಿ ಹುಡುಕಾಟ ಆರಂಭಿಸಿದರು. ರಾತ್ರಿ 12ರ ವರೆಗೂ ಕಾಡಿನಲ್ಲಿ ನೂರಾರು ಜನ ಹುಡುಕಾಡಿದರು. ರವಿವಾರ ಅಮಾಸೆಬೈಲು ಪೊಲೀಸರು, ಅರಣ್ಯ ಇಲಾಖೆಯವರು ಸೇರಿ 200 ಜನ ಹುಡುಕಾಡಿದರು. ಬಳಿಕ ಶುಕ್ರವಾರದವರೆಗೆ ಪ್ರತೀ ದಿನ ನೂರಕ್ಕೂ ಮಿಕ್ಕಿ ಜನ ಹುಡುಕಾಡಿದರೂ ಪ್ರಯೋಜನ ಆಗಿರಲಿಲ್ಲ. 8ನೇ ದಿನ ಪ್ರತ್ಯಕ್ಷ: 8ನೇ ದಿನವಾದ ಶನಿವಾರ ಮನೆಯಿಂದ 4 ಕಿ.ಮೀ. ದೂರದ ಕಾಡಿನ ಅಂಚಿನಲ್ಲಿದ್ದ ಕಬ್ಬಿನಾಲೆ ಜಗನ್ನಾಥ ಶೆಟ್ಟಿಗಾರ್ ಅವರ ಮನೆಯ ಬಳಿ ಕಾಡಿನಿಂದ ಇಳಿದು ಬರುತ್ತಿರುವ ಯುವಕನ್ನು ನೋಡಿದ ಮನೆಯವರು ಒಳಗೆ ಕರೆದೊಯ್ದು ಉಪಚರಿಸಿ ಊರಿನವರಿಗೆ ಮಾಹಿತಿ ನೀಡಿದರು. ಆಗ ಆತನೇ ವಿವೇಕಾನಂದ ಎಂಬ ವಿಚಾರ ತಿಳಿಯಿತು. ಆಹಾರವಿಲ್ಲದೆ ತೀವ್ರ ಬಳಲಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದ್ದು, ಯಾವುದೇ ಆತಂಕವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ.
Related Articles
ಯುವಕ ನಾಪತ್ತೆಯಾಗಿರುವ ಪ್ರದೇಶ ದಟ್ಟ ಅಡವಿಯಾಗಿದ್ದು, ಚಿರತೆ, ಕಾಡು ಹಂದಿ, ಕಾಡು ಕೋಣದಂತಹ ಕಾಡು ಪ್ರಾಣಿಗಳು ಇವೆ. ರಾತ್ರಿ ವೇಳೆಯಲ್ಲಿ ಒಬ್ಬನೇ ಸಂಚರಿಸುವುದು ಅಸಾಧ್ಯ. ಆದರೆ ಜತೆಗಿದ್ದ ಶ್ವಾನವು ತನಗೆ ಯಾವುದೇ ಆಹಾರವಿಲ್ಲದಿದ್ದರೂ ಎಡೆಬಿಡದೆ ಒಡೆಯನ ಜತೆಗಿದ್ದು ರಕ್ಷಿಸಿತು ಎನ್ನಲಾಗಿದೆ.
ಕೊನೆಗೆ ಅಡವಿಯಂಚಿನ ತೊಂಬಟ್ಟು ಗಾಳಿಗುಡ್ಡೆಯ ಶ್ರೀ ಈಶ್ವರ ದೇವಸ್ಥಾನದ ಬಳಿಗೆ ಬಂದ ವಿವೇಕಾನಂದ ಅವರಿಗೆ ತಾನು ಇರುವ ಜಾಗದ ಬಗ್ಗೆ ಅರಿವಿಗೆ ಬಂದಿತು. ಬಳಿಕ ಸ್ಥಳೀಯರು ಮನೆಯ ದಾರಿ ತೋರಿಸಿದರು. ನನ್ನೂರಿನ ಮಹಾಗಣಪತಿಯನ್ನು ಪ್ರಾರ್ಥಿಸಿದೆ. ಹಾಗಾಗಿ ಸುರಕ್ಷಿತವಾಗಿ ಮರಳಿದೆ ಎಂದು ವಿವೇಕಾನಂದ ಹೇಳಿದ್ದಾರೆ.
Advertisement
ಶಾಸಕರ ಭೇಟಿವಿವೇಕಾನಂದ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಶುಕ್ರವಾರ ಮಾಜಿ ಶಾಸಕ ಗೋಪಾಲ ಪೂಜಾರಿ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದರು. ಹೇಗಿದ್ದ ಇಷ್ಟು ದಿನ?
ವಿವೇಕಾನಂದನಿಗೆ ಸ್ವಲ್ಪ ಸಮಯದಿಂದ ಅನಾರೋಗ್ಯ ಸಮಸ್ಯೆಯೂ ಇದ್ದು, ಆದ್ದರಿಂದಲೇ ಕಾಡಿನಿಂದ ಮರಳಿ ಬರಲು ಆಗಿರಲಿಲ್ಲ. ಹಗಲೆಲ್ಲ ನಾಯಿಯೊಂದಿಗೆ ಕಾಡಿನೊಳಗೆ ಅಲೆಯುತ್ತಿದ್ದು ಸಂಜೆಯಾಗುತ್ತಿದ್ದಂತೆ, ಮರದ ಬುಡ ಅಥವಾ ಕಲ್ಲು ಬಂಡೆಯ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ನಾಯಿ ಜತೆಗೇ ಇರುತ್ತಿತ್ತು. ಕಾಡಿನ ಹಣ್ಣು-ಕಾಯಿಗಳನ್ನು ತಿನ್ನುತ್ತ, ತೊರೆಯ ನೀರನ್ನು ಕುಡಿಯುತ್ತಿದ್ದರು. ನಾಯಿಯೂ ಸಂಪೂರ್ಣ ಬಳಲಿದೆ. ವಿವೇಕಾನಂದ ಇನ್ನಷ್ಟೇ ಚೇತರಿಸಬೇಕಾಗಿರುವುದರಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.