ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ತಂದೆ ಹಾಗೂ ಆತನ ಮಗ ಚಾಕುವಿನಿಂದ ಇರಿದು ಕೊಲೆಮಾಡಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮುನಿರಾಜು (26) ಕೊಲೆಯಾದವರು. ಮುನಿರಾಜು ಅವರನ್ನು ಚಾಕುವಿನಿಂದ ಇರಿದು ಕೊಲೆಗೈದ ಆರೋಪಿಗಳಾದ ಮುನಿಸ್ವಾಮಿ ಹಾಗೂ ಅವರ ಮಗ ಪರಾರಿಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.
ಟ್ರಕ್ ಚಾಲಕನಾಗಿದ್ದ, ಕೋಗಿಲು ಕ್ರಾಸ್ ಸಮೀಪದ ಶ್ರೀನಿವಾಸಪುರ ನಿವಾಸಿಯಾದ ಮುನಿರಾಜು, ಮುನಿಸ್ವಾಮಿ ಅವರ ದೂರದ ಸಂಬಂಧಿ. ಭಾನುವಾರ ರಾತ್ರಿ 8.15ರ ಸುಮಾರಿಗೆ ಮುನಿರಾಜು, ಮುನಿಸ್ವಾಮಿ ಅವರ ಮನೆಯ ಮುಂಭಾಗ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಹಳೆಯ ಜಗಳ, ಕ್ಷುಲ್ಲಕ ಕಾರಣಕ್ಕೆ ಇಬ್ಬರಿಗೂ ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಈ ವೇಳೆ ಮುನಿಸ್ವಾಮಿ ಹಾಗೂ ಅವರ ಮಗ ಚಾಕುವಿನಿಂದ, ಮುನಿರಾಜು ಎದೆಭಾಗಕ್ಕೆ ಎರಡು ಮೂರು ಬಾರಿ ಇರಿದು ಕತ್ತು ಕುಯ್ದು ಸ್ಥಳದಿಂದ ಪರಾರಿಯಾಗಿದ್ದಾರೆ.
ಕೂಡಲೇ ಸ್ಥಳೀಯರು ಮುನಿರಾಜುನನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮುನಿಸ್ವಾಮಿ ಮನೆಯ ಮುಂದಿನ ರಸ್ತೆಯಲ್ಲಿ ಮುನಿರಾಜು ವೇಗವಾಗಿ ಟ್ರಕ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದ.
ಜತೆಗೆ, ಆಸ್ತಿ ವಿಚಾರಕ್ಕೂ ವೈಷಮ್ಯವಿತ್ತು ಎನ್ನಲಾಗಿದೆ. ಮನೆ ಮುಂದೆ ಟ್ರಕ್ ವೇಗವಾಗಿ ಚಲಾಯಿಸುವ ವಿಷಯಕ್ಕೆ ಜಗಳದಲ್ಲಿ ಕೊಲೆನಡೆದಿರುವುದ ಸಾಧ್ಯತೆಯಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು, ಆರೋಪಿಗಳನ್ನು ಬಂಧಿಸಲು ಕ್ರಮವಹಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.