Advertisement
ಕಾವಲ್‌ಭೈರಸಂದ್ರ ನಿವಾಸಿ ಮೊಹಮ್ಮದ್ ತನ್ವೀರ್ (23) ಎಂಬ ಯುವಕನ ಮೇಲೆ ಏ.9ರಂದು ರಾತ್ರಿ ಪಿಎಸ್‌ಐ ಸಂತೋಷ್ ಹಾಗೂ ಪೇದೆ ಅಯ್ಯಪ್ಪ ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಸದ್ಯ, ಮೊಹಮದ್ ತನ್ವೀರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
Related Articles
Advertisement
ಔಷಧಿ ತರಲು ಹೋದವನಿಗೆ ಹಿಡಿದು ಹೊಡೆದ ಪೊಲೀಸ್!: ಕಾವಲ್ ಭೈರಸಂದ್ರದ ರತನ್ ಸಿಂಗ್ ಲೇಔಟ್ ನಿವಾಸಿಯಾದ ಮೊಹಮದ್ ತನ್ವೀರ್ ಏ.9 ರಂದು ರಾತ್ರಿ ನೆರೆಮನೆಯ ನಿವಾಸಿಗೆ ಅಗತ್ಯವಿದ್ದ ಔಷಧಿ ತರುವ ಸಲುವಾಗಿ ಸ್ನೇಹಿತನ ಜತೆ ಬೈಕ್‌ನಲ್ಲಿ 1.45ರ ಸುಮಾರಿಗೆ ಸುಮಾರಿಗೆ ಹೊರಗಡೆ ಬಂದಿದ್ದರು.
ಈ ವೇಳೆ, ಗಸ್ತಿನಲ್ಲಿದ್ದ ಪೇದೆ ಅಯ್ಯಪ್ಪ ಅವರನ್ನು ತಡೆದಿದ್ದರು. ಬಳಿಕ ಕ್ಷುಲ್ಲಕ ಕಾರಣಕ್ಕೆ ಅಯ್ಯಪ್ಪ, ತನ್ವೀರ್ ಮೇಲೆ ಹಲ್ಲೆ ನಡೆಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಹೊಯ್ಸಳ ವಾಹನದಲ್ಲಿ ಆಗಮಿಸಿದ ಪಿಎಸ್‌ಐ ಸಂತೋಷ್ ಹಾಗೂ ಇತರೆ ಸಿಬ್ಬಂದಿ ಕೂಡ ತನ್ವೀರ್‌ನನ್ನು ಠಾಣೆಗೆ ಕರೆದೊಯ್ದು ಲಾಠಿ ಹಾಗೂ ಪೈಪ್‌ನಿಂದ ಹಲ್ಲೆ ನಡೆಸಿದ್ದರು ಎಂಬ ಆರೋಪವಿದೆ.
ಕ್ರಮ ಜರುಗಿಸಲು ಆಯುಕ್ತರಿಗೆ ದೂರು: ಮಾರನೇ ದಿನ ತನ್ವೀರ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಹಲವು ದಿನಗಳ ಬಳಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಪೊಲೀಸರು ನಡೆಸಿದ ಹಲ್ಲೆಯ ಕುರಿತು ಕ್ರಮ ಜರುಗಿಸುವಂತೆ ತನ್ವೀರ್ ಸಹೋದರ ಮೊಹಮದ್ ಮುಸಾವೀರ್ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರಿಗೆ ದೂರು ನೀಡಿದ್ದರು.
ಈ ಬೆನ್ನಲ್ಲೇ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಮೂರ್ತಿಗೆ ಆಯುಕ್ತರು ಸೂಚನೆ ನೀಡಿದ್ದರು. ಡಿಸಿಪಿ ನೀಡಿದ ವರದಿ ಆಧರಿಸಿ ಇಬ್ಬರನ್ನೂ ಅಮಾನತುಗೊಳಿಸಿದ್ದು ತನಿಖೆ ಮುಂದುವರಿದಿದೆ ಎಂದು ಅಧಿಕಾರಿ ಹೇಳಿದರು.