Advertisement

ಫೈಓವರ್‌ನಿಂದ ಜಿಗಿದು ಯುವಕ ಆತ್ಮಹತ್ಯೆ

12:56 AM May 11, 2019 | Team Udayavani |

ಬೆಂಗಳೂರು: ಗೊರಗುಂಟೆಪಾಳ್ಯ ಸಮೀಪದ ರಾಷ್ಟ್ರೀಯ ಹೆದ್ದಾರಿ ಫ್ಲೈಓವರ್‌ನಿಂದ ಜಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ನರಸಿಂಹಮೂರ್ತಿ (28) ಆತ್ಮಹತ್ಯೆ ಮಾಡಿಕೊಂಡವರು.

Advertisement

ಆಟೋಮೊಬೈಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನ ಬಂಡಿಗೆರೆ ಗ್ರಾಮದ ನರಸಿಂಹಮೂರ್ತಿ, ಕಾಮಾಕ್ಷಿಪಾಳ್ಯದಲ್ಲಿ ವಾಸವಿದ್ದರು. ಶುಕ್ರವಾರ ಬೆಳಗ್ಗೆ 7.30ರ ಸುಮಾರಿಗೆ ಪೀಣ್ಯದ ಟಿವಿಎಸ್‌ ಶೋ ರೂಂ ಮುಂಭಾಗದ ಫೈಓವರ್‌ನಿಂದ ಜಿಗಿದಿದ್ದು, ಕೆಳಗಡೆ ರಸ್ತೆಯಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ ಮುಂದೆ ಬಿದ್ದಿದ್ದಾರೆ.

ಮೇಲ್ಸೇತುವೆಯಿಂದ ವ್ಯಕ್ತಿ ಬೀಳುತ್ತಿರುವುದನ್ನು ಗಮನಿಸಿದ ಚಾಲಕ, ತಕ್ಷಣ ಬಸ್‌ ನಿಲ್ಲಿಸಿದ ಚಾಲಕ ಗಜೇಂದ್ರ ಹಾಗೂ ಕಂಡೆಕ್ಟರ್‌, ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದರೆ, ಸಕಾಲಕ್ಕೆ ಆ್ಯಂಬುಲೆನ್ಸ್‌ ಬಂದಿಲ್ಲ. ಹೀಗಾಗಿ ಬಸ್‌ನಲ್ಲಿಯೇ ಗಾಯಾಳುವನ್ನು ಕರೆದೊಯ್ದು ಸಮೀಪದ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ, ಚಿಕಿತ್ಸೆ ಫ‌ಲಿಸದೆ ನರಸಿಂಹಮೂರ್ತಿ ಮೃತಪಟ್ಟಿದ್ದಾರೆ. ಸಾಯುವ ಮುನ್ನ ತೊದಲುತ್ತಾ ಮಾತನಾಡಿದ ನರಸಿಂಹಮೂರ್ತಿ, ತಾನಾಗಿಯೇ ಮೇಲ್ಸೇತುವೆಯಿಂದ ಬಿದ್ದಿದ್ದಾಗಿ ಹೇಳಿದ್ದಾರೆ. ತಲೆ ಹಾಗೂ ಎದೆಗೆ ತೀವ್ರ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫ‌ಲಿಸದೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದರು.

ನರಸಿಂಹ ಮೂರ್ತಿ, ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿಯೇ ಮೇಲ್ಸೇತುವೆ ಹತ್ತಿರುವ ಸಾಧ್ಯತೆಯಿದ್ದು, ಸುಮಾರು 3 ಕಿ.ಮೀ. ನಡೆದು ಬಂದು ಟಿವಿಎಸ್‌ ಶೋ ರೂಂ ಬಳಿ ಸೇತುವೆಯಿಂದ ಹಾರಿದ್ದಾರೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

Advertisement

ಮಾನಸಿಕ ಖಿನ್ನತೆ ಕಾರಣವೇ?: ನರಸಿಂಹ ಮೂರ್ತಿಗೆ ಇಬ್ಬರು ಮಕ್ಕಳಿದ್ದು, ಎರಡು ತಿಂಗಳ ಹಿಂದಷ್ಟೇ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ಸಲುವಾಗಿ ಪತ್ನಿ ಊರಿಗೆ ತೆರಳಿರುವ ಕಾರಣ, ಮನೆಯಲ್ಲಿ ಒಬ್ಬರೇ ಇದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಜೇಬಿನಲ್ಲಿ ಡೆತ್‌ನೋಟ್‌ ಕೂಡ ದೊರೆತಿಲ್ಲ.

ಎರಡು ದಿನಗಳ ಹಿಂದೆ ನಗರದಲ್ಲಿಯೇ ಇರುವ ತನ್ನ ಮಾವನ ಬಳಿ ಹೋಗಿದ್ದ ನರಸಿಂಹ ಮೂರ್ತಿ, ಊರಿಗೆ ಹೋಗಲು ಹಣ ಕೇಳಿದ್ದು, ಮಾವ ನೀಡಿರಲಿಲ್ಲ. ಜತೆಗೆ, ಮನೆ ಮಾಲೀಕರ ಬಳಿಯೂ ಹಣ ಕೇಳಿದ್ದು, ಅವರೂ ಕೊಟ್ಟಿರಲಿಲ್ಲ. ಜತೆಗೆ ಮಾತಿನ ಚಕಮಕಿ ಕೂಡ ನಡೆದಿತ್ತು ಎನ್ನಲಾಗಿದೆ.

ಹೀಗಾಗಿ ನರಸಿಂಹ ಮೂರ್ತಿ ಗುರುವಾರ ಮನೆಗೆ ತೆರಳದೆ ಮೊಬೈಲ್‌ ಸ್ವಿಚ್‌ ಮಾಡಿಕೊಂಡಿದ್ದರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಮಾನಸಿಕ ಖಿನ್ನತೆಗೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದ್ದು, ಮರಣೋತ್ತರ ಪರೀಕ್ಷೆ ನಂತರ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈ ಕುರಿತು ಪೀಣ್ಯ ಪೊಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ವಿವರಿಸಿದರು.

ಮಗು ಸತ್ತಿದೆ ಎಂಬ ಸುಳ್ಳುಸುದ್ದಿ!: ಎರಡು ತಿಂಗಳ ಹಿಂದೆ ಜನಿಸಿರುವ ಗಂಡು ಮಗು ಮೃತಪಟ್ಟಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ನರಸಿಂಹಮೂರ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ವದಂತಿ, ಘಟನೆ ಬಳಿಕ ಹರಿದಾಡಿತ್ತು. ಆರಂಭದಲ್ಲಿ ಪೊಲೀಸರೂ ಹಾಗೇ ಅಂದುಕೊಂಡಿದ್ದರು. ಬಳಿಕ ಆಸ್ಪತ್ರೆ ಬಳಿ ಬಂದ ಸಂಬಂಧಿಕರು, ಮಗುವಿಗೆ ಏನೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಸಾವಿಗೆ ಏನು ಕಾರಣ ಎಂಬುದು ಗೊತ್ತಾಗಿಲ್ಲ ಎಂದು ನರಸಿಂಹ ಮೂರ್ತಿ ಸಹೋದರಿ ರತ್ಮಮ್ಮ ತಿಳಿಸಿದ್ದಾರೆ.

ಪರಿಹಾರವೇ ಯಕ್ಷಪ್ರಶ್ನೆ: ಮೇಲ್ಸೇತುವೆಗಳಲ್ಲಿ ಅಪಘಾತ ಸಂಭವಿಸಿ ಪ್ರಾಣಹಾನಿಯಾಗುವ ಘಟನೆಗಳಿಗೆ ಪರಿಹಾರವಿದೆ. ಅಪಘಾತ ನಿಯಂತ್ರಣಕ್ಕೆ ಅಧ್ಯಯನ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದು. ಈ ನಿಟ್ಟಿನಲ್ಲಿ ಇಲಾಖೆ ಕ್ರಮವಹಿಸಲಿದೆ. ಆದರೆ, ಮೇಲ್ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳಿಗೆ ಪರಿಹಾರ ಕಂಡು ಹಿಡಿಯುವುದು ಹೇಗೆ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next