Advertisement

ಯುವ ಕಲಾವಿದೆಯಿಂದ ಪ್ರಧಾನಿಗೆ ಕಲಾಕೃತಿ

03:50 AM Mar 31, 2017 | |

ಯಾವ ಶಿಲೆಯಲ್ಲಿ ಯಾವ ವಿಗ್ರಹ ಅಡಗಿದೆ… ಯಾವ ಮರದ ಕಾಂಡದಲ್ಲಿ ಯಾವ ಗೊಂಬೆಯಾಗುವುದೆಂದು ಕಂಡವರಾರು…? ಕಲಾವಿದನ ಚಾಣ, ಸುತ್ತಿಗೆಯಾಚೆ ಗುಹ್ಯವಾಗಿರುವ ಕಲಾಕೃತಿಗಳು ಬಾಹ್ಯಕ್ಕೆ ಬಂದು ಬಹುರೂಪಿಗಳಾಗುತ್ತವೆ. ಮಂಗಳೂರಿನ ಕಲಾವಿದೆ ತರುಣಿಯೊಬ್ಬಳು ತನ್ನ ಕಲಾಛಾಪನ್ನು ಕೋಡಿಕಲ್‌ನಿಂದ ದಿಲ್ಲಿಯವರೆಗೆ ಪಸರಿಸಿ ಪ್ರಧಾನಿ ಮೋದಿಯವರಿಗೆ ತನ್ನ ಕಲಾ ಕೊಡುಗೆಯನ್ನು ನೀಡಿರುವರು. ಮಂಗಳೂರಿನ ಯುವ ಕಲಾವಿದೆ ಸುಪ್ರಭಾ ಅವರು ತನ್ನ ವರ್ಣ ಬದುಕಿನ ಬಾಗಿಲನ್ನು ತೆರೆದು 10 ವರ್ಷಗಳಾಗಿದ್ದು ಪ್ರಬುದ್ಧತೆಯ ಮೆಟ್ಟಿಲುಗಳನ್ನೇರುತ್ತಲೇ ಇದ್ದಾರೆ. ಛಲ ಬಿಡದ ಪ್ರಯತ್ನದಿಂದ ತನ್ನೊಳಗಿನ ಭವಿಷ್ಯದ ಕಲಾವಿದೆಯನ್ನು ಬಾನಂಚಿನಲ್ಲಿ ನಿರೀಕ್ಷಿಸುತ್ತಿದ್ದಾರೆ. ಮಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವಾಗಲೇ ಚಿತ್ರ ವರ್ಣದಲ್ಲಿ ಆಸಕ್ತಿ ಇದ್ದಿರುವ ಕಾರಣ ಕೆನರಾ ಶಿಕ್ಷಣ ಸಂಸ್ಥೆಯ ಕಲಾಶಿಕ್ಷಕರಾದ ಪೆರ್ಮುದೆ ಮೋಹನ್‌ ಕುಮಾರ್‌ ಅವರು ಇವರ ಕಲಾಪ್ರತಿಭೆಯನ್ನು ಗುರುತಿಸಿರುತ್ತಾರೆ. ಆಮೇಲೆ ಹಿರಿಯ ಕಲಾವಿದ ಪುರುಷೋತ್ತಮ ಕಾರಂತರವರಿಂದ ಮತ್ತು ದಯಾನಂದರವರಲ್ಲಿ ಕಲೆಯ ಬಗ್ಗೆ ತರಬೇತಿ ಮತ್ತು ಮಾರ್ಗದರ್ಶನ ಪಡೆದುಕೊಂಡು ಅಕ್ರಿಲಿಕ್‌, ಚಾರ್ಕೋಲ್‌, ಜಲವರ್ಣ, ತೈಲವರ್ಣದಂತಹ ವಿವಿಧ ಮಾಧ್ಯಮಗಳಲ್ಲಿ ಕಲಾಕೃತಿಗಳನ್ನು ರಚಿಸುತ್ತಾ ಬಂದಿದ್ದು ಸಮೂಹ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಪ್ರಾಥಮಿಕ ಹಾಗೂ ಹೈಸ್ಕೂಲ್‌ ಶಿಕ್ಷಣ ಪಡೆಯುತ್ತಿರುವಾಗಲೇ ಚಿತ್ರಕಲಾ ಸ್ಪರ್ಧೆ ಹಾಗೂ ಶಿಬಿರಗಳಲ್ಲಿ ಭಾಗವಹಿಸುವ ಮಹೋನ್ನತ ಹವ್ಯಾಸವನ್ನು ಇಟ್ಟುಕೊಂಡಿ ರುವ ಇವರು ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯ, ಬಹುಮಾನದ ಮಾನದಂಡ ಮುಖ್ಯವಲ್ಲ ಎಂಬುದನ್ನೇ ತನ್ನ ವರ್ಣ ಪ್ರತಿಭೆಗೆ ಪ್ರಭೆಯಾಗಿ ಅಳವಡಿಸಿ ಕೊಂಡಿರುವ ಕಾರಣ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಕಷ್ಟು ಕಲಿತಿದ್ದೇನೆ ಎನ್ನುತ್ತಿದ್ದಾರೆ. 

Advertisement

ನಿಸರ್ಗದ ಸುಂದರ ದೃಶ್ಯಗಳನ್ನು ಚಿತ್ರಿಸುತ್ತಿದ್ದ ಇವರಿಗೆ ತಂದೆಯ ಛಾಯಾಚಿತ್ರ ಕ್ಷೇತ್ರವೂ ಪೂರಕವಾಗಿದ್ದಿತ್ತೆನ್ನಬಹುದು. ಸುಪ್ರಭಾಳ ತಂದೆ ಮಂಗಳೂರಿನ ಕಲ್ಪಿತಾ ಸ್ಟುಡಿಯೋದ ಮಾಲಕರಾಗಿರುವ ಕರುಣಾಕರ ಕಾನಂಗಿಯವರು ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದವರು. 

ಇದೀಗ ಸುಪ್ರಭಾ ಅವರು ಬೆಂಗಳೂರಿನ ಆರ್‌. ವಿ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕೆಮಿಕಲ್‌ ಎಂಜಿನಿಯರಿಂಗ್‌ ಮೂರನೇ ವರ್ಷದ ವ್ಯಾಸಂಗ ಪಡೆಯುತ್ತಿದ್ದು ಶಿಕ್ಷಣದ ಜತೆಗೆ ಎನ್‌ಸಿಸಿಯಲ್ಲಿ ಕ್ರಿಯಾಶೀಲರಾಗಿರುತ್ತಾರೆ. ಮೊನ್ನೆ ಜನವರಿ 26ರ ಗಣರಾಜ್ಯೋತ್ಸವ ಪೆರೇಡ್‌ಗೆ ಕಾಲೇಜಿನ ಎನ್‌ಸಿಸಿ ವತಿಯಿಂದ ದಿಲ್ಲಿಗೆ ಹೋಗಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಇವರು ಚಿತ್ರಿಸಿರುವ ಮೋದಿಯವರ ಚಾರ್ಕೋಲ್‌ ಕಲಾಕೃತಿಯನ್ನು ಅವರಿಗೆ ನೀಡಿರುವರು. ಮೋದಿಯವರು ಈ ಕಲಾಕೃತಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಾಶಯಗಳೊಂದಿಗೆ ಸುಪ್ರಭಾರವರ ಕಲಾಪ್ರತಿಭೆಯನ್ನು ಅಭಿನಂದಿಸಿರುವರು. ಭವಿಷ್ಯದಲ್ಲಿ ಯಾವುದೇ ಉನ್ನತ ವೃತ್ತಿ ಲಭಿಸಿದರೂ ಚಿತ್ರಕಲೆಯ ನನ್ನ ಹವ್ಯಾಸವನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡು ಕಲಾಕೃತಿ ನಿರ್ಮಾಣದಲ್ಲಿ ಸಿಗುವ ತೃಪ್ತಿ ಸಂತಸವನ್ನು ಶಾಶ್ವತವಾಗಿ ಉಳಿಸಿಕೊಂಡಿರುತ್ತೇನೆ ಎಂಬ ಇವರ ಮಾತನ್ನು ಮೆಚ್ಚಲೇಬೇಕು. 

ದಿನೇಶ್‌ ಹೊಳ್ಳ

Advertisement

Udayavani is now on Telegram. Click here to join our channel and stay updated with the latest news.

Next