ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಜೂನ್ 18ರಂದು ವಿಧಾನಸೌಧ ಆವರಣದಲ್ಲಿ 1,500 ಯೋಗಪಟುಗಳ ಸಾಮೂಹಿಕ ಶೀರ್ಷಾಸನ ಆಯೋಜನೆ ಮೂಲಕ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲು ಉದ್ದೇಶಿಸಲಾಗಿದೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಆಯುಷ್ ನಿರ್ದೇಶನಾಲಯ ಹಮ್ಮಿಕೊಂಡ ಈ ಸಾಮೂಹಿಕ ಶೀರ್ಷಾಸನದಲ್ಲಿ ನಟ ಉಪೇಂದ್ರ ರಾಯಭಾರಿಯಾಗಿದ್ದಾರೆ. ಆರೋಗ್ಯ ಸಚಿವ ರಮೇಶ್‌ಕುಮಾರ್, ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಇದಕ್ಕೂ ಮುನ್ನ ರಾಜಭವನದಿಂದ ವಿಧಾನಸೌಧದ ಗಾಂಧಿಪ್ರತಿಮೆವರೆಗೆ ಯೋಗಥಾನ್ ನಡೆಯಲಿದೆ. ಇದರಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಗ್ಗೆ 7ಕ್ಕೆ ಯೋಗಥಾನ್‌ಗೆ ಚಾಲನೆ ದೊರೆಯಲಿದೆ. ನಂತರ 8 ಗಂಟೆಗೆ ಸಾಮೂಹಿಕ ಯೋಗಾಸನ ಪ್ರದರ್ಶನ ನಡೆಯಲಿದೆ. ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳು ಭಾಗವಹಿಸುವ ಮೂಲಕ ಜಾಗೃತಿ ಮೂಡಿಸಲಿದ್ದಾರೆ.
ಇನ್ನು ಜೂನ್ 21ರಂದು ಬೆಳಗ್ಗೆ 6.30ಕ್ಕೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ 3ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಚಾಲನೆ ನೀಡಲಿದ್ದಾರೆ. ಸುಮಾರು ಐದು ಸಾವಿರ ಯೋಗಪಟುಗಳು ಏಕಕಾಲದಲ್ಲಿ ಪ್ರದರ್ಶನ ನೀಡಲಿದ್ದಾರೆ. ಸಚಿವರು, ಶಾಸಕರು, ಶ್ವಾಸ ಸಂಸ್ಥೆ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಯೋಗ ಗಂಗೋತ್ರಿ ಸರ್ಕಾರೇತರ ಸಂಸ್ಥೆಗಳು, ಆರ್ಟ್ ಆಫ್ ಲಿವಿಂಗ್, ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಈಗಾಗಲೇ ಲೋಕಾರ್ಪಣೆಗೊಂಡ ಯೋಗ ಪೋರ್ಟಲ್ (//202.138.105.9/ayush)ಗೆ ಉತ್ತಮ ಸ್ಪಂದನೆ ದೊರಕಿದ್ದು, ಪ್ರಸಕ್ತ ಸಾಲಿನಲ್ಲಿ ರಾಜ್ಯಾದ್ಯಂತ ಈ ಪೋರ್ಟಲ್ ಮೂಲಕ ಹತ್ತು ಸಾವಿರಕ್ಕೂ ಅಧಿಕ ಜನರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಈ ಮಧ್ಯೆ ಯೋಗ ಕುರಿತು ಜಾಗೃತಿ ಮೂಡಿಸಲು ಶಾಲಾ ಮಕ್ಕಳು ಸೇರಿದಂತೆ ಜೂನ್ 20ರವರೆಗೆ ನಿತ್ಯ ಒಂದು ಗಂಟೆ ಜಿಲ್ಲಾ/ ತಾಲ್ಲೂಕು ಮತ್ತು ಗ್ರಾ.ಪಂ.ಮಟ್ಟದಲ್ಲಿ ಟಿಒಟಿ ಯೋಗ ಶಿಕ್ಷಣ ತರಬೇತಿ ನೀಡಲಾಗುತ್ತಿದೆ ಎಂದು ಆಯುಷ್ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.