Advertisement

ನಗರದಲ್ಲಿ ಅವಾಂತರ ಸೃಷ್ಟಿಸಿದ ವರ್ಷಧಾರೆ

12:42 PM Sep 26, 2018 | Team Udayavani |

ಬೆಂಗಳೂರು: ನಗರದಲ್ಲಿ ಸೋಮವಾರದ ಮಳೆ ಸೃಷ್ಟಿಸಿದ ಅವಾಂತರದ ಬಿಸಿ ಮಂಗಳವಾರ ಕೂಡ ತಟ್ಟಿತು. ಕೆಲವು ತಗ್ಗುಪ್ರದೇಶಗಳಲ್ಲಿ ಬೆಳಗಿನಜಾವ ಕೂಡ ನೀರಿನ ಪ್ರಮಾಣ ತಗ್ಗಿರಲಿಲ್ಲ. ಪರಿಣಾಮ ಕೆಲಸಕ್ಕೆ ತೆರಳಲು ಜನ ಪರದಾಡಿದರು. 

Advertisement

ಬಿಳೇಕಹಳ್ಳಿ, ಹೆಬ್ಟಾಳ ಮೆಲ್ಸೇತುವೆ, ರಾಜಾಜಿನಗರ, ಮಲ್ಲೇಶ್ವರ ಸೇರಿದಂತೆ ಮತ್ತಿತರ ಪ್ರದೇಶಗಳ ಆಯ್ದ ಭಾಗಗಳು ಜಲಾವೃತಗೊಂಡು, ಬೆಳಗ್ಗೆ ರಸ್ತೆಗಿಳಿದ ಜನರ ಓಟಕ್ಕೆ ಬ್ರೇಕ್‌ ಹಾಕಿತು. ಕೆಲವೆಡೆ ಮನೆಯಿಂದ ಹೊರಬರಲಿಕ್ಕೆ ಆಗಲಿಲ್ಲ. ಇನ್ನು ಹಲವೆಡೆ ಸಂಚಾರ ದಟ್ಟಣೆಯಿಂದ ಜನ ಗಂಟೆಗಟ್ಟಲೆ ರಸ್ತೆಯಲ್ಲಿ ಕಾಲಕಳೆದರು.

ಬಿಳೇಕಹಳ್ಳಿಯ ವಂದನ ಓನೆಕ್ಸ್‌ ಅಪಾರ್ಟ್‌ಮೆಂಟ್‌ ಅಕ್ಷರಶಃ ದ್ವೀಪವಾಗಿ ಮಾರ್ಪಟ್ಟಿತು. ನೆಲಮಹಡಿಯಲ್ಲಿದ್ದ ವಾಹನಗಳು ನೀರಿನಲ್ಲಿ ತೇಲಾಡಿದವು. ಮನೆ ನಲ್ಲಿಯಲ್ಲಿ ಕೊಳಚೆ ನೀರು ಬರುತ್ತಿದೆ. ಆಫೀಸ್‌ಗೆ ಹೋಗೋಕೆ ಆಗುತ್ತಿಲ್ಲ, ಮಕ್ಕಳನ್ನು ಶಾಲೆಗೆ ಕಳಿಸೋಕೆ ಆಗುತ್ತಿಲ್ಲ. ಒಂದು ಕಿ.ಮೀ. ದೂರದ ನೀರೆಲ್ಲವೂ ಅಪಾರ್ಟ್‌ಮೆಂಟ್‌ಗೆ ಬರುತ್ತಿದೆ ಎಂದು ಅಪಾರ್ಟ್‌ಮೆಂಟ್‌ ನಿವಾಸಿ ಚೌಧರಿ ಆಕ್ರೋಶ ವ್ಯಕ್ತಪಡಿಸಿದರು. 

ಇನ್ನು ಹೆಬ್ಟಾಳ ಮೇಲ್ಸೇತುವೆ ಕಳಗೆ ನೀರು ನಿಂತು ಮುಖ್ಯರಸ್ತೆ ಸಂಪೂರ್ಣ ಜಲಾವೃತಗೊಂಡಿತು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಕಡೆಯಿಂದ ಹೆಬ್ಟಾಳದ ಕಡೆ ಹೋಗಲು ಸಾರ್ವಜನಿಕರು ಹರಸಾಹಸಪಟ್ಟರು. ಗಂಟೆಗಟ್ಟಲೆ ಈ ಮಾರ್ಗದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ವಿವಿಧ ಅಂಡರ್‌ಪಾಸ್‌ಗಳಲ್ಲಿ ಮೊಣಕಾಲುವರೆಗೂ ನೀರು ನಿಂತಿದ್ದರಿಂದ ವಾಹನ ಸಂಚಾರ ಕೆಲವೆಡೆ ನಿರ್ಬಂಧಿಸಲಾಗಿತ್ತು. ನವರಂಗ್‌ ಬಳಿ ಪಾದಚಾರಿ ಮಾರ್ಗ ಕುಸಿದ ಬಗ್ಗೆ ವರದಿಯಾಗಿದೆ. ಬೊಮ್ಮನಹಳ್ಳಿ ವ್ಯಾಪ್ತಿಯ ಅನುಗ್ರಹ ಲೇಔಟ್‌ 1ನೇ ಹಂತದಲ್ಲಿ ಮನೆಗಳಿಗೆ ನೀರುಗಿದ್ದ ಹಿನ್ನೆಲೆ ಅಲ್ಲಿನ ನಿವಾಸಿಗಳು ಆತಂಕದಲ್ಲಿ ರಾತ್ರಿ ಕಳೆದರು. 

Advertisement

ತಿಂಗಳಾಂತ್ಯದವರೆಗೆ ಮಳೆ?: ಈ ಮಧ್ಯೆ ಮಂಗಳವಾರ ಮಳೆ ಅಬ್ಬರಿಸಿದ್ದು, ತಿಂಗಳಾಂತ್ಯದವರೆಗೂ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಟ್ರಫ್ ಮತ್ತು ಚಂಡಮಾರುತದ ಪರಿಚಲನೆ ಕಂಡುಬಂದ ಹಿನ್ನೆಲೆಯಲ್ಲಿ ಮಳೆಯಾಗುತ್ತಿದ್ದು, ಇನ್ನೂ ಎರಡು-ಮೂರು ದಿನಗಳು ಇದು ಮುಂದುವರಿಯಲಿದೆ. ಮಂಗಳವಾರ ಬೆಳಿಗ್ಗೆ 25.4 ಮಿ.ಮೀ. ಮಳೆ ದಾಖಲಾಗಿದ್ದು, ಇಡೀ ತಿಂಗಳಲ್ಲಿ 193 ಮಿ.ಮೀ.ಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇನ್ನು ಮಂಗಳವಾರ ಸಂಜೆ ಕಗ್ಗಲಿಪುರದಲ್ಲಿ 32 ಮಿ.ಮೀ., ದೊಡ್ಡಗುಬ್ಬಿಯಲ್ಲಿ 11 ಮಿ.ಮೀ., ಎಚ್‌. ಗೊಲ್ಲಹಳ್ಳಿ, ಬೆಟ್ಟ ಹಲಸೂರಿನಲ್ಲಿ 8 ಮಿ.ಮೀ., ಸೀಗೇಹಳ್ಳಿಯಲ್ಲಿ 6 ಮಿ.ಮೀ., ದೊಡ್ಡಜಾಲದಲ್ಲಿ 5 ಮಿ.ಮೀ., ಚಿಕ್ಕನಹಳ್ಳಿಯಲ್ಲಿ 4 ಮಿ.ಮೀ., ಬಸವೇಶ್ವರನಗರ, ಯಕಹಂಕ, ಮಾರೇನಹಳ್ಳಿಯಲ್ಲಿ 3 ಮಿ.ಮೀ. ಮಳೆ ಬಿದ್ದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next