ಬಾದಾಮಿ: ಹಂಸನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಬೇಡರಬೂದಿಹಾಳ, ಹಂಸನೂರ ಮತ್ತು ರಾಘಾಪುರದಲ್ಲಿ ದನದ ಕೊಟ್ಟಿಗೆ ನಿರ್ಮಾಣ ಮಾಡಿ ನಾಲ್ಕು ವರ್ಷ ಕಳೆದರೂ ಪೂರ್ಣ ಅನುದಾನ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮ ಪಂಚಾಯತ ವತಿಯಿಂದ ದನದ ಕೊಟ್ಟಿಗೆ ನಿರ್ಮಾಣ ಮಾಡಲು ಎಸ್‌ಸಿ, ಎಸ್‌ಟಿ ಜನಾಂಗದವರಿಗೆ 35 ಸಾವಿರ ರೂ.ಮತ್ತು ಸಾಮಾನ್ಯ ವರ್ಗದವರಿಗೆ 16 ಸಾವಿರ ರೂ. ಅನುದಾನವನ್ನು ಫಲಾನುಭವಿಗಳಿಗೆ ನೀಡುವುದಾಗಿ ಪಿಡಿಒ ಹೇಳಿದ್ದರು.
ಬೇಡರ ಬೂದಿಹಾಳ, ಹಂಸನೂರ ಮತ್ತು ರಾಘಾಪುರ ಗ್ರಾಮದ ಭರಮಪ್ಪ ಡೊಂಕನ್ನವರ, ಫಕೀರಪ್ಪ ಬಾಲಪ್ಪ ಲಕಮಾಪುರ, ಕರಿಬಸಪ್ಪ ಹೊಸಕೇರಿ, ರಂಗಪ್ಪ ಕೆಲೂಡೆಪ್ಪ ಹೂಲಗೇರಿ, ಶಾಂತವ್ವ ಗುರುನಾಥ ಡೊಂಕನ್ನವರ, ನಿಂಗಪ್ಪ ಮಲ್ಲಪ್ಪ ಕೋಟಿ, ಹೊಳೆಯಪ್ಪ ಹನಮಪ್ಪ ಮಾದರ, ನೀಲವ್ವ ಶಂಕ್ರಪ್ಪ ಮುಕ್ಕನ್ನವರ, ಹವಳೆವ್ವ ಅಖಂಡಪ್ಪ ಮಾದರ ಸೇರಿದಂತೆ
ಗ್ರಾಪಂ ವ್ಯಾಪ್ತಿಯ 3 ಗ್ರಾಮಗಳ ಸುಮಾರು 22 ಜನ ರೈತರು ದನದ ಕೊಟ್ಟಿಗೆ ತಮ್ಮ ಸ್ವಂತ ಹಣದಿಂದ ಸಾಲ ಸೂಲ ಮಾಡಿ ನಿರ್ಮಿಸಿಕೊಂಡಿದ್ದಾರೆ. ಆದರೆ ಇದರ ಹಣ ಅವರ ಖಾತೆಗೆ ಜಮಾ ಮಾಡಬೇಕಾಗಿತ್ತು. ಇದರಲ್ಲಿ ಕೇವಲ 9 ಸಾವಿರ ರೂ.ಹಣವನ್ನು ಮಾತ್ರ ಕಳೆದ ಎರಡು ವರ್ಷಗಳ ಹಿಂದೆ ಖಾತೆಗೆ ಜಮಾ ಮಾಡಿದ್ದಾರೆ. ಉಳಿದ ಹಣ ಸುಮಾರು ನಾಲ್ಕು ವರ್ಷವಾದರೂ ಇದುವರೆಗೂ ಬಂದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳು ಗ್ರಾಪಂ ಕಚೇರಿಗೆ ದಿನನಿತ್ಯ ಅಲೆದಾಡುತ್ತಿದ್ದಾರೆ.
ಪಿಡಿಒ ಅರಳಿಮಟ್ಟಿ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಹಣ ಮಾತ್ರ ಇದುವರೆಗೂ ನೀಡಿಲ್ಲ. ಸಂಬಂಧಿಸಿದ ಮೇಲಧಿಕಾರಿಗಳು ತುರ್ತು ಗಮನಹರಿಸಿ, ಶೀಘ್ರವೇ ಫಲಾನುಭವಿಗಳಿಗೆ ಉಳಿದ ಹಣ ಖಾತೆಗೆ ಜಮಾ ಮಾಡಬೇಕೆಂದು ಫಲಾನುಭವಿಗಳು ಆಗ್ರಹಿಸಿದ್ದಾರೆ.