Advertisement

ಮೈತ್ರಿಗೆ ವರ್ಷ: ಜಿಲ್ಲೆಗಿಲ್ಲ ಹರ್ಷ

10:31 AM Jul 01, 2019 | Suhan S |

ಕೊಪ್ಪಳ: ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆಯಾಗಿ ವರ್ಷ ಪೂರೈಸಿದೆ. ಆದರೆ ಕೊಪ್ಪಳ ಜಿಲ್ಲೆಗೆ ಹೇಳಿಕೊಳ್ಳುವಂತಹ ಯೋಜನೆಗಳೇ ಜಾರಿಯಾಗಿಲ್ಲ. ಆಟಿಕೆ ಸಾಮಗ್ರಿ ಘಟಕದ ನೆಪ ತೋರಿಸಿ, ಇಸ್ರೇಲ್ ಮಾದರಿಯ ಕೃಷಿ ಕನಸು ಬಿತ್ತಿದ್ದರೂ ಅದರ ಸುದ್ದಿನೇ ಇಲ್ಲ. ಇನ್ನೂ ಸರ್ಕಾರದ ಮುಂದಿರುವ ನೀರಾವರಿ ಯೋಜನೆ, ಸಮಾನಾಂತರ ಜಲಾಶಯದ ಪ್ರಸ್ತಾವನೆಗೆ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ.

Advertisement

ಹೌದು. ಕೊಪ್ಪಳ ಜಿಲ್ಲೆ ಮೊದಲೇ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಹೈಕ ಭಾಗಕ್ಕೆ ಕೋಟಿ ಕೋಟಿ ಅನುದಾನ ಕೊಡುತ್ತಿದೆ ಎನ್ನುವ ಮಾತು ಲೆಕ್ಕಪತ್ರಕ್ಕೆ ಸೀಮಿತವಾಗಿದೆ ಎನ್ನುವ ಆಪಾದನೆ ಮಧ್ಯದಲ್ಲೂ ಅಭಿವೃದ್ಧಿ ಮಾಡುತ್ತಿದ್ದೇವೆ ಎನ್ನುವ ಸರ್ಕಾರದ ಮಾತುಗಳು ಕಾರ್ಯರೂಪಕ್ಕೆ ಬರುತ್ತಿಲ್ಲ.

ಅದರಲ್ಲೂ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಜಿಲ್ಲೆಯಲ್ಲಿ ಮಹತ್ವದ ಯೋಜನೆಗಳೇ ಘೋಷಣೆಯಾಗಿಲ್ಲ. ನೀರಾವರಿ ಯೋಜನೆಗಳಿಗೆ ಮಹತ್ವವನ್ನೆ ಕೊಡುತ್ತಿಲ್ಲ. ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮೊದಲ ಬಜೆಟ್‌ನಲ್ಲಿ ಜಿಲ್ಲೆಗೆ ಆಟಿಕೆ ಸಾಮಗ್ರಿ ಘಟಕದ ಕ್ಲಸ್ಟರ್‌ ಮಾಡುವ ಮಾತನ್ನಾಡಿದ್ದರು. ಆದರೆ ವರ್ಷ ಕಳೆದರೂ ಅದರ ಪ್ರಸ್ತಾಪವೇ ಇಲ್ಲ. ಜಿಲ್ಲೆಯಲ್ಲಿ ಏಲ್ಲಿಯೂ ಅದನ್ನು ಆರಂಭಿಸಿಲ್ಲ. ಇನ್ನೂ 2ನೇ ಬಜೆಟ್ ಅವಧಿಯಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಗೆ 200 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಆ ಹಣ ಇನ್ನೂ ತಾಂತ್ರಿಕ ವಿಭಾಗದಲ್ಲೇ ಹೊರಳಾಡುತ್ತಿದೆ. ಸಾವಿರಾರು ಕೋಟಿ ಯೋಜನೆಗೆ 200 ಕೋಟಿ ರೂ. ಕೊಟ್ಟು ಯೋಜನೆ ಜೀವಂತ ಇಟ್ಟಿದ್ದು ಬಿಟ್ಟರೆ ಜಿಲ್ಲೆಗೆ ಮತ್ತ್ಯಾವ ಭರವಸೆಗಳು ಸಿಕ್ಕಿಲ್ಲ. ಕೃಷ್ಣಾ ಬಿ ಸ್ಕಿಂ ಜಾರಿಗಾಗಿ ಜಿಲ್ಲೆಯಲ್ಲಿ ಹಗಲಿರುಳು ಹೋರಾಟ ನಡೆದಿದೆ.

ನೀರಾವರಿ ಬಗ್ಗೆ ರಾಜಕಾರಣಿಗಳಿಗೆ ಆಸಕ್ತಿ ಕಡಿಮೆಯಾಗಿದೆ. ಚುನಾವಣೆ ಬಂದಾಗ ಮಾತ್ರ ನೀರಾವರಿ ಮಾತನ್ನೆತ್ತುತ್ತಾರೆ. ಇನ್ನೂ ತುಂಗಭದ್ರೆ ಜಿಲ್ಲೆಯಲ್ಲೇ ಹರಿದರೂ ನಮಗೆ ಕುಡಿಯಲು ನೀರಿಲ್ಲ. ಪ್ರತಿ ವರ್ಷ 320ಕ್ಕೂ ಹೆಚ್ಚು ಹಳ್ಳಿಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. 2008-09ರಲ್ಲಿ ಮಾಡಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳೇ ಆಮೆಗತಿಯಲ್ಲಿ ಸಾಗಿದೆ. ನೀರಿನ ಸಮಸ್ಯೆ ಗಂಭೀರವಾಗಿದೆ. ಹೈಕ ಮಂಡಳಿಯಿಂದ ಜಿಲ್ಲೆಗೆ ಬರುವ ಅನುದಾನದಲ್ಲೇ ಕೆಲವೊಂದು ಕಾಮಗಾರಿ ನಡೆದಿದ್ದು ಬಿಟ್ಟರೆ ಮತ್ತೆ ಹೇಳಿಕೊಳ್ಳುವಂತ ಮಹತ್ವದ ಯೋಜನೆಗಳಿಲ್ಲ. ಜಿಲ್ಲೆಯಲ್ಲಿ ಇಂಜನಿಯರಿಂಗ್‌ ಕಾಲೇಜು ಮಾತ್ರ ವೇಗದ ಗತಿಯಲ್ಲಿ ಕಾಮಗಾರಿ ನಡೆಸಿದೆ. ಉಳಿದ ಯಾವುದೇ ಯೋಜನೆ ಪ್ರಗತಿಯಲ್ಲಿ ವೇಗವನ್ನೇ ಕಳೆದುಕೊಂಡಿವೆ.

ವರ್ಷದಲ್ಲೇ ಇಬ್ಬರಿಗೆ ಉಸ್ತುವಾರಿ ಸ್ಥಾನ!:
ಮೈತ್ರಿ ಸರ್ಕಾರ ರಚನೆಯಾದ ನಾಲ್ಕೈದು ತಿಂಗಳು ಗತಿಸಿದರೂ ಜಿಲ್ಲೆಗೆ ಉಸ್ತುವಾರಿ ಸಚಿವರನ್ನೇ ನೇಮಿಸಿರಲಿಲ್ಲ. ಜನರ ಟೀಕಾ ಪ್ರಹಾರದ ಬಳಿಕ ‌ ಆರ್‌. ಶಂಕರ್‌ ಅವರನ್ನು ನಿಯೋಜಿಸಿತ್ತು. ಅವರು ಕೆಲವು ತಿಂಗಳಲ್ಲೇ ಸಚಿವ ಸ್ಥಾನ ಕಳೆದುಕೊಂಡಿದ್ದರಿಂದ ಮತ್ತೆ ಉಸ್ತುವಾರಿ ಖಾಲಿಯಾಯಿತು. ಆಗ ಲೋಕಸಭಾ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಮತ್ತೆ ಉಸ್ತುವಾರಿ ನಾಯಕರೇ ಇಲ್ಲದಂತಾಯಿತು. ಚುನಾವಣೆ ಬಳಿಕ ಈಗಷ್ಟೇ ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಅವರನ್ನು ನಿಯೋಜಿಸಿದೆ. ಅವರು ಜಿಲ್ಲೆಗೆ ಆಗಮಿಸಿ ಸಭೆ ನಡೆಸುತ್ತಿದ್ದಂತೆ ಗಿರೀಶ್‌ ಕಾರ್ನಾಡರು ನಿಧನರಾದ ಹಿನ್ನೆಲೆಯಲ್ಲಿ ಸಭೆ ಮೊಟಕುಗೊಳಿದರು. ಅವರಿನ್ನು ಜಿಲ್ಲೆಯ ಪ್ರಗತಿ ಸಭೆಯನ್ನೇ ನಡೆಸಿಲ್ಲ. ಹಾಗಾಗಿ ಕೊಪ್ಪಳ ಜಿಲ್ಲೆ ವರ್ಷದಿಂದಲೂ ಅನಾಥ ಭಾವನೆ ಅನುಭವಿಸುತ್ತಿದೆ.
ಹೂಳಿಗೆ ಸಿಗುತ್ತಿಲ್ಲ ಪರಿಹಾರ:

ತುಂಗಭದ್ರಾ ಜಲಾಶಯದಲ್ಲಿ ಪ್ರತಿ ವರ್ಷ 05. ಟಿಎಂಸಿ ಅಡಿ ಹೂಳು ಸಂಗ್ರಹವಾಗುತ್ತಿದೆ ಎಂದು ತಾಂತ್ರಿಕ ವರದಿಯೇ ಹೇಳುತ್ತಿದೆ. ಇದು ಸರ್ಕಾರದ ಗಮನಕ್ಕೂ ಇದೆ. ಆದರೂ ಡ್ಯಾಂನಲ್ಲಿನ 33 ಟಿಎಂಸಿ ಹೂಳು ತೆಗೆಯುವ, ಪರಿಹಾರ ಹುಡುಕುವ ಕೆಲಸ ಮಾಡುತ್ತಿಲ್ಲ. ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಗ್ಲೋಬಲ್ ಟೆಂಡರ್‌ ಕರೆದು ಕೈ ಚೆಲ್ಲಿ, ಹೂಳೆತ್ತುವ ಬದಲು ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಿಸುವ ಮಾತನ್ನಾಡಿತು. ಆ ಪ್ರಸ್ತಾವನೆ ಮೈತ್ರಿ ಸರ್ಕಾರದ ಮುಂದಿದ್ದರೂ ಕೈಗೆತ್ತಿಕೊಳ್ಳುತ್ತಿಲ್ಲ. ಈ ಬಗ್ಗೆ ಮಾತೆತ್ತಿದರೆ ಅಂತರಾಜ್ಯ ಸಮಸ್ಯೆ ಎಂದು ಹೇಳುತ್ತಲೇ ಕಾಲಹರಣ ಮಾಡುತ್ತಿದೆ. ಇನ್ನೂ ಜಿಂಕೆ ವನ ಸ್ಥಾಪನೆಯ ಪ್ರಸ್ತಾವನೆ ಸೇರಿದಂತೆ ಹಲವು ಪ್ರಸ್ತಾವನೆಗಳು ಸರ್ಕಾರದ ಕಚೇರಿಯಲ್ಲಿ ಕೊಳೆಯುತ್ತಾ ಬಿದ್ದಿವೆ. ಒಟ್ಟಿನಲ್ಲಿ ಈ ಮೈತ್ರಿ ಸರ್ಕಾರದಲ್ಲಿ ಕೊಪ್ಪಳ ಜಿಲ್ಲೆಗೆ ಹರ್ಷಕ್ಕಿಂತ ಬೇಸರವೇ ಹೆಚ್ಚು ಸಿಕ್ಕಿದೆ. ಬೆರಳೆಣಿಕೆ ಜಿಲ್ಲೆಗಳಿಗೆ ಸಿಎಂ ಅನುದಾನದ ಹೊಳೆಯನ್ನೆ ಹರಿಸಿದ್ದಾರೆ. ಹಿಂದುಳಿದ ಜಿಲ್ಲೆಗಳ ಕಡೆಗಣನೆ ಮಾಡಲಾಗುತ್ತಿದೆ ಎನ್ನುವ ಆಪಾದನೆ ಜಿಲ್ಲೆಯಲ್ಲಿ ಸರ್ವೆ ಸಾಮಾನ್ಯವಾಗಿದೆ.
Advertisement

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next