Advertisement

6 ತಿಂಗಳಾದ್ರೂ ಮುಗಿಯಲ್ಲ ಯರಗೋಳ್‌ ಯೋಜನೆ

04:06 PM Nov 20, 2019 | Suhan S |

ಬಂಗಾರಪೇಟೆ: ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ಕುಡಿಯುವ ನೀರು ಕಲ್ಪಿಸುವ ಯರಗೋಳ್‌ ಅಣೆಕಟ್ಟು ಕಾಮಗಾರಿ ಮತ್ತೆ ಆಮೆ ವೇಗ ಪಡೆದುಕೊಂಡಿದ್ದು, ನಿರ್ದಿಷ್ಟ ಸಮಯಕ್ಕೆ ಮುಗಿಯುವ ಲಕ್ಷಣಗಳನ್ನು ಕಾಣುತ್ತಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಕಳೆದ ಉಗಾದಿ ಹಬ್ಬಕ್ಕೆ ಉದ್ಘಾಟನೆ ಮಾಡುವ ಸಂಕಲ್ಪ ಮಾಡಿದ್ದರೂ ನಿರ್ದಿಷ್ಟ ಸಮಯಕ್ಕೆ ಪೂರ್ಣಗೊಳಿಸಲು ಆಗಿಲ್ಲ.

Advertisement

ನೀರಾವರಿ ಹೋರಾಟಗಾರರು ಮತ್ತು ಜನಪ್ರತಿನಿಧಿಗಳ 10 ವರ್ಷಗಳ ಹೋರಾಟದಿಂದ ಈ ಯೋಜನೆಗೆ ಚಾಲನೆ ಸಿಕ್ಕಿದ್ದು, 88 ಕೋಟಿ ರೂ. ಅನುದಾನವೂ ಬಿಡುಗಡೆಯಾಗಿದೆ. ಹೈದ್ರಾಬಾದ್‌ನ ರಾಮ್‌ಕೀ ಸಂಸ್ಥೆಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಕಳೆದ ಮೈತ್ರಿ ಸರ್ಕಾರದ ಮೇಲೆ ಒತ್ತಡ ತಂದು ಜಿಲ್ಲೆಯ ಜನಪ್ರತಿನಿಧಿಗಳು ಕಾಮಗಾರಿಗೆ ವೇಗ ತಂದಿದ್ದರು.

ಸಮ್ಮಿಶ್ರ ಸರ್ಕಾರದಲ್ಲಿ ಸ್ವೀಕರ್‌ ಆಗಿದ್ದ ಶ್ರೀನಿವಾಸಪುರ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌, ಯರಗೋಳ್‌ ಕಾಮಗಾರಿ ವೇಗ ಹೆಚ್ಚಿಸಲು ಮುಂಚೂಣಿಯಲ್ಲಿದ್ದರು. ನಂತರ ಅಧಿಕಾರ ಕಳೆದುಕೊಂಡ ಮೇಲೆ ಕಾಮಗಾರಿ ವೇಗ ಕಡಿಮೆಯಾಗಿದೆ. ಜನವರಿ, 2019ಕ್ಕೆ ಉದ್ಘಾಟನೆ ಮಾಡಲಾಗುವುದು ಎಂದರು. ನಂತರ ಉಗಾದಿಗೆ ಮುಂದೂಡಿದರು. ಈಗ ಮತ್ತೆ 2020ರ ಜನವರಿಗೆ ಉದ್ಘಾಟಿಸುವುದಾಗಿ ಹೇಳುತ್ತಾರೆ. ಆದರೆ, ಇಲ್ಲಿ ಡ್ಯಾಂನ ತಡೆಗೋಡೆಗೆ ಕಾಂಕ್ರೀಟ್‌ ಹಾಕುವುದು, ಕಚೇರಿಗಳ ನಿರ್ಮಾಣ, ಸಣ್ಣಪುಟ್ಟ ಕಟ್ಟಡ ಕಾಮಗಾರಿಗಳು ಬಾಕಿ ಇದ್ದು, ಪೂರ್ಣಗೊಳ್ಳಲು ಇನ್ನೂ 6 ತಿಂಗಳಾದ್ರೂ ಬೇಕು ಎಂದು ಎಂಜಿನಿಯರ್‌ಗಳೇ ಹೇಳುತ್ತಿದ್ದಾರೆ.

ಯೋಜನೆ ಬಗ್ಗೆ ಚಕಾರವಿಲ್ಲ: ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಬಿಜೆಪಿ ಒಬ್ಬ ಶಾಸಕರು ಇಲ್ಲ. ಈಗ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವ ಕಾರಣ ಯರಗೋಳ್‌ ಯೋಜನೆ ಬಗ್ಗೆ ಶಾಸಕರು ಗಮನ ಹರಿಸುವುದನ್ನೇ ಬಿಟ್ಟಿದ್ದಾರೆ. ಪ್ರತಿ ತಿಂಗಳಿಗೊಮ್ಮೆ ಬರುತ್ತಿದ್ದ ಜಿಲ್ಲೆ ನಾಲ್ಕೈದು ಶಾಸಕರು ಈಗ ನಾಪತ್ತೆಯಾಗಿದ್ದಾರೆ!. ಇದರಿಂದ ಯರಗೋಳ್‌ ಅಣೆಕಟ್ಟು ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.

ಸದ್ಯಕ್ಕೆ ಯರಗೋಳ್‌ ಅಣೆಕಟ್ಟು ನಿರ್ಮಾಣ ಶೇ.75 ಮುಗಿದಿದೆ. ಅಣೆಕಟ್ಟುಗೆ ಹೊಸ ರೂಪ ಬಂದಿದೆ. 100 ಅಡಿಗಳ ಎತ್ತರದ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಅಲ್ಪಸ್ವಲ್ಪ ಮಳೆ ನೀರು ಈಗಾಗಲೇ ಶೇಖರಣೆಯಾಗಿದೆ. 2006ರಲ್ಲಿ ಶಂಕುಸ್ಥಾಪನೆಯಾದ ಯರಗೋಳ್‌ ಅಣೆಕಟ್ಟು ನಿರ್ಮಾಣವು 12 ವರ್ಷಗಳಿಂದಲೂ ನಡೆಯುತ್ತಿದೆ. ಯರಗೋಳ್‌ ಡ್ಯಾಂನ್ನು 2019 ಯುಗಾದಿ ಹಬ್ಬದ ವೇಳೆಗೆ ಸಂಪೂರ್ಣ ನಿರ್ಮಾಣ ಮಾಡುವಂತೆ ಡೆಡ್‌ಲೈನ್‌ ನೀಡಿದ್ದರಿಂದ ಕಾಮಗಾರಿ ವೇಗದಲ್ಲಿ ನಡೆಯಿತು ಅನಂತರ ನಿಧಾನವಾಗಿದೆ.

Advertisement

ವಿವಿಧ ಕಾಮಗಾರಿಗಳ ವೆಚ್ಚ: ಒಟ್ಟು 240 ಕೋಟಿ ರೂ. ಅನುದಾನದಲ್ಲಿ ಪೈಪ್‌ಲೈನ್‌ಗೆ 80 ಕೋಟಿ ರೂ., ಅಣೆಕಟ್ಟು ಮತ್ತು ಸೇವಾ ರಸ್ತೆ ನಿರ್ಮಾಣಕ್ಕೆ 88 ಕೋಟಿ ರೂ. ಮತ್ತು ಅಣೆಕಟ್ಟಿನಿಂದ ನೀರು ಸರಬರಾಜು ಮಾಡಲು ಯಂತ್ರೋಪಕರಣಗಳ ಅಳವಡಿಕೆಗೆ 72 ಕೋಟಿ ರೂ. ಮಂಜೂರಾಗಿದೆ. ಬಂಗಾರಪೇಟೆ, ಮಾಲೂರು ಮತ್ತು ಕೋಲಾರ ನಗರಕ್ಕೆ, 45 ಗ್ರಾಮಗಳಿಗೆ ಕುಡಿಯುವ ಪೂರೈಕೆ ಮಾಡಲು ಯೋಜನೆ ಸಿದ್ಧಪಡಿಸಲಾಗಿದ್ದು, ಕುಡಿಯುವ ನೀರು ಸರಬರಾಜಿಗೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯು ಕ್ರಮಕೈಗೊಳ್ಳಲಿದೆ.

ಎರಡು ವರ್ಷಕ್ಕೆ ಆಗುವಷ್ಟು ಕುಡಿವ ನೀರು: ಬಂಗಾರಪೇಟೆ, ಮಾಲೂರು ಮತ್ತು ಕೋಲಾರ ಮಾರ್ಗ ಮಧ್ಯೆ ಬರುವ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಅದಕ್ಕೆ ಸಂಬಂಧಪಟ್ಟ ಗ್ರಾಪಂಗಳು ವಿಶೇಷ ಅನುದಾನದಲ್ಲಿ ಕಾಮಗಾರಿ ಮಾಡಿಕೊಂಡು ನೀರಿನ ಸಂಪರ್ಕ ಪಡೆಯಬೇಕು. ಯರಗೋಳ್‌ ಡ್ಯಾಂನಲ್ಲಿ 500 ಎಂಸಿಎಫ್ಟಿ ನೀರು ಸಂಗ್ರಹಣೆಯಾಗಲಿದೆ. ಡ್ಯಾಂ ತುಂಬಿ ಹರಿದರೆ 375 ಎಕರೆ ಭೂ ಪ್ರದೇಶ ಮುಳುಗಡೆಯಾಗಲಿದೆ. ಒಮ್ಮೆ ತುಂಬಿದರೆ ಕನಿಷ್ಠ ಎರಡು ವರ್ಷ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ.ಡ್ಯಾಂ ನಿರ್ಮಾಣಕ್ಕೆ 375 ಎಕರೆ ಜಾಗ ವಶಪಡಿಸಿಕೊಳ್ಳಲಾಗಿದೆ.

ರೈತರಿಂದ 95, ಅರಣ್ಯ ಇಲಾಖೆಯಿಂದ 154, ಸರ್ಕಾರಿ ಭೂ 126 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ರೈತರಿಗೆ 5.19 ಕೋಟಿ ರೂ. ಪರಿಹಾರ ನೀಡಲಾಗಿದೆ. ಯರಗೋಳ್‌ ಅಣೆಕಟ್ಟನ್ನು ಎರಡು ಬೆಟ್ಟಗಳ ಮಧ್ಯೆ ನಿರ್ಮಾಣ ಮಾಡಲಾಗುತ್ತಿದೆ. 414 ಮೀಟರ್‌ ಉದ್ದ, 30 ಮೀಟರ್‌ ಎತ್ತರ ಇದೆ. ಡ್ಯಾಂ ನಿರ್ಮಾಣದ ವೇಳೆಗೆ ನೀರು ಪೂರೈಕೆಗೆ ಅಗತ್ಯವಾದ ತಾಂತ್ರಿಕತೆ ಅಳವಡಿಸಲಾಗುವುದು ಎಂದು ಆಧಿಕಾರಿಗಳು ತಿಳಿಸಿದ್ದಾರೆ.

 

-ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next