Advertisement

ನೋಬೆಲ್‌ ಪ್ರಶಸ್ತಿ ಹುಟ್ಟಿಗೆ ಕಾರಣವಾದ ತಪ್ಪು ಮರಣ ವಾರ್ತೆ

12:33 AM Dec 04, 2021 | Team Udayavani |

ಇಂದು ನೋಬೆಲ್‌ ಪಾರಿತೋಷಕ ಜಗತ್ಪ್ರಸಿದ್ಧ ಪ್ರಶಸ್ತಿ. ಇದು ಹುಟ್ಟಿದ್ದು ಪತ್ರಿಕೆಯೊಂದು ನೆಗೆಟಿವ್‌ ಆಗಿ ಪ್ರಕಟಿಸಿದ ಒಂದು ಸುದ್ದಿಯಿಂದ.

Advertisement

ಪಾರಿತೋಷಕದ ಕೇಂದ್ರ ವ್ಯಕ್ತಿಯೇ ಆಲ್ಫ್ರೆಡ್ ನೋಬೆಲ್‌. ಈತ ಸಂಶೋಧಕ, ಉದ್ಯಮಿ, ವಿಜ್ಞಾನಿ, ಕವಿ, ನಾಟಕಕಾರ. ಆಲ್ಫ್ರೆಡ್ 1833ರ ಅ. 21ರಂದು ಸ್ವೀಡನ್‌ನ ಸ್ಟಾಕ್‌ ಹೋಮ್‌ನಲ್ಲಿ ಹುಟ್ಟಿದ. ಪ್ಯಾರಿಸ್‌ನ ಖಾಸಗಿ ಪ್ರಯೋಗಾಲಯದಲ್ಲಿ ಕೆಲಸ ಮಾಡುವಾಗ ಆತನಿಗೆ ನೈಟ್ರೋಗ್ಲಿಸೆರಿನ್‌ ಕುರಿತು ಆಸಕ್ತಿ ಬೆಳೆಯಿತು. ರಶ್ಯಾಕ್ಕೆ ತೆರಳಿ ತಂದೆ ಜತೆ ವ್ಯಾಪಾರ ಶುರುವಿಟ್ಟ. ಸ್ಫೋಟಕ ಪ್ರಕ್ರಿಯೆಗೆ ಡೈನಮೈಟ್‌ ಎಂದು ಹೆಸರಿಟ್ಟ. ಕೈಗಾರಿಕೆ ಕೈಹಿಡಿಯಿತು. 1863ರಲ್ಲಿ ಸ್ವೀಡನ್‌ಗೆ ಆಗ ಮಿಸಿದ ಆತ ಡೈನಮೆಟ್‌, ಡಿಟೋನೇಟರ್‌, ಸ್ಫೋಟಕ ತಂತು, ಶಕ್ತಿಶಾಲಿ ಗಿಲಿನೈಟ್‌ ಸಂಶೋಧನೆಯಲ್ಲಿ ಮುಂದುವರಿದ. ಪರೀಕ್ಷೆ ನಡೆ ಯುವಾಗ ಕೊನೆಯ ಸಹೋದರ ಇಮಿಲ್‌ ಸಹಿತ ಹಲವರು ಸತ್ತರು. ಈತನ ಸಂಶೋಧನೆಯನ್ನು ಐರೋಪ್ಯ ರಾಷ್ಟ್ರಗಳು ಗಣಿಗಾರಿಕೆಯಲ್ಲಿ ಉಪಯೋಗಿಸಿಕೊಂಡವು.

ಆಲ್ಫ್ರೆಡ್ ಮರಣ ಹೊಂದುವ 5 ವರ್ಷ ಮುನ್ನ 1888ರಲ್ಲಿ ಸಹೋದರ ಲುಡ್ವಿಗ್‌ ಮರಣ ಹೊಂದಿದ. ಫ್ರೆಂಚ್‌ ಪತ್ರಿಕೆ ಯೊಂದು ಆಲ್ಫ್ರೆಡ್ ನೇ ಸತ್ತ ಎಂದು ಭಾವಿಸಿ ನಿಧನ ವಾರ್ತೆ ಪ್ರಕಟಿಸಿತು. ತನ್ನನ್ನು ಜನರು ಹೇಗೆ ತಿಳಿದುಕೊಂಡಿದ್ದಾರೆಂದು ನೋಡುವ ಕುತೂಹಲ ಆತನಿಗೆ. “ದಿ ಮರ್ಚಂಟ್‌ ಆಫ್ ಡೆತ್‌ ಈಸ್‌ ಡೆಡ್‌’ (ಮರಣ ವ್ಯಾಪಾರಿಯ ನಿಧನ) ಎಂಬ ಶೀರ್ಷಿಕೆಯ ಸುದ್ದಿ ಓದಿದಾಗ ಆಲ್ಫ್ರೆಡ್ ಗೆ ಹೇಗಾಗಿರ ಬೇಡ? ಡೈನಮೈಟ್‌ ಸಂಶೋಧನೆ ನಡೆಸಿದ್ದು ನಿಜ. ಇದರಿಂದ ಸಾಕಷ್ಟು ಲೋಕೋಪಕಾರ ಆದದ್ದೂ ನಿಜ, ತೊಂದರೆ ಯಾದದ್ದೂ ನಿಜ. ಆದರೆ “ಸಾವಿನ ವ್ಯಾಪಾರಿ’ ಎಂಬ ನೆಗೆಟಿವ್‌ ತಲೆ ಬರೆಹ ಮಾತ್ರ ದುಃಖವಾಯಿತು. ತನ್ನ ಬಗೆಗಿದ್ದ ಅಹಂ ಮಾಯವಾಯಿತು. ಮುಂದೊಂದು ದಿನ ಮರಣ ಹೊಂದಿದ ಬಳಿಕ ತನ್ನ ಹೆಸರು ಶಾಶ್ವತವಾಗಿರ ಬೇಕೆಂದು ನಿರ್ಧರಿಸಿದ.

ಇದನ್ನೂ ಓದಿ:ತಂತ್ರಜ್ಞಾನ ಅಳವಡಿಕೆಯಲ್ಲಿ ನಾವು ದ್ವಿತೀಯ: ಪ್ರಧಾನಿ ಮೋದಿ

1895ರಲ್ಲಿ ತನ್ನ 355 ಪೇಟೆಂಟ್‌ಗಳಿಂದ ಬಂದ ಸಂಪಾದನೆಯನ್ನು ಒಟ್ಟು ಹಾಕಿ ಕಾರ್ಯಕ್ಷೇತ್ರವಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಫಿಸಿಯೋಲಾಜಿ/ಮೆಡಿಸಿನ್‌ ಮತ್ತು ಶಾಂತಿಗಾಗಿ ಕೆಲಸ ಮಾಡಿದ ಸಾಧಕರಿಗೆ ಪಾರಿತೋಷಕ ನೀಡಲು ವೀಲುನಾಮೆ ಬರೆದಿಟ್ಟ. ಇದಕ್ಕಾಗಿ ಬಿಟ್ಟು ಹೋದ ಮೊತ್ತ 31 ಮಿಲಿಯ ಸೆಕ್‌ (265 ಮಿಲಿಯ ಡಾಲರ್‌ಗೆ ಸಮ). ಆಲ್ಫ್ರೆಡ್ ಅವಿವಾಹಿತ. ಸಂಪತ್ತು ಕೈತಪ್ಪುವುದರಿಂದ ಒಡಹುಟ್ಟಿ ದವರಿಂದ ವಿವಾದವೂ ಉಂಟಾಯಿತು. 1901ರಲ್ಲಿ ನೋಬೆಲ್‌ ಪ್ರಶಸ್ತಿ ಪ್ರದಾನ ಆರಂಭಗೊಂಡು 2021ರ ವರೆಗೆ 943 ಸಾಧಕರು, 25 ಸಂಸ್ಥೆಗಳಿಗೆ ನೋಬೆಲ್‌ ಪಾರಿತೋಷಕ ನೀಡಲಾಗಿದೆ. ಪ್ರಶಸ್ತಿ ಆರಂಭವಾಗಿ 120 ವರ್ಷ (2 ಸಂವತ್ಸರ ಚಕ್ರ), ನೋಬೆಲ್‌ 1896ರ ಡಿ. 10ರಂದು ಮರಣ ಹೊಂದಿ 125 ವರ್ಷ ಕಳೆದಿವೆ.

Advertisement

ನೋಬೆಲ್‌ ಮಾದರಿ
ತಪ್ಪಾಗಿ ನಿಧನ ಸುದ್ದಿ ಪ್ರಕಟಿಸಿದ ಪತ್ರಿಕೆ ವಿರುದ್ಧ ನೋಬೆಲ್‌ ಗಲಾಟೆ ಮಾಡಲಿಲ್ಲ. ತನ್ನ ಬಗೆಗೆ ಜನರು ಆಡಿಕೊಳ್ಳುತ್ತಿದ್ದ ಬಗೆಗೆ ಬೇಸರವಾಗಿ ಮುಂದೆ ಹೀಗಾಗ ದಂತೆ ಎಚ್ಚರ ವಹಿಸಿದ. ಹಣವನ್ನು ಕೂಡಿಟ್ಟು ಜಿಪುಣ ತನದಲ್ಲೇ ಸಂತೃಪ್ತಿ ಹೊಂದಿ ನಿಧನ ಹೊಂದುವ ಜಿಪುಣಾಗ್ರೇಸರರೇ ಅಧಿಕವಾಗಿರುವ ಈ ಕಾಲಘಟ್ಟ ದಲ್ಲಿ ನೋಬೆಲ್‌ ಮಾದರಿಯಾಗಿ ಕಂಡುಬರುತ್ತಾನೆ.

ತಪ್ಪು ನಿಧನ ಸುದ್ದಿ ತರುವ ಫ‌ಜೀತಿ
ಯಾವುದೇ ಸುದ್ದಿ ತಪ್ಪಾಗಿ ಪ್ರಕಟವಾದರೆ ಮಾಧ್ಯಮ ಸಂಸ್ಥೆ ಸಾಕಷ್ಟು ಫ‌ಜೀತಿಗಳನ್ನು ಎದುರಿಸಬೇಕು. ಮರಣ ವಾರ್ತೆ ತಪ್ಪಾದರೆ ದುಪ್ಪಟ್ಟು ಫ‌ಜೀತಿಗಳನ್ನು ಎದುರಿಸಬೇಕು. ಶೃಂಗೇರಿಯಲ್ಲಿ ಒಬ್ಬ ಜಿಪುಣಾಗ್ರೇಸರರಿದ್ದರು. ಇವರಿಗೆ ಆಗದವರೊಬ್ಬರು ಇವರ ಹೆಸರಿನಲ್ಲಿ ವೈಕುಂಠ ಸಮಾ ರಾಧನೆಯ ಆಮಂತ್ರಣ ಪತ್ರಿಕೆಯನ್ನು ಅಚ್ಚು ಹಾಕಿಸಿ “ಮಹಾದಾನಿ ..ನಿಧನ’ ಎಂದು ಬರೆದು ಪೋಸ್ಟ್‌ ಮಾಡಿದರು. ಆಮಂತ್ರಣ ಪತ್ರಿಕೆಯನ್ನು ನೋಡಿದ ಸಂಪಾದಕ ಮಂಡಳಿ ಸತ್ಯವೆಂದು ತಿಳಿದು ಪ್ರಕಟಿಸಿತು. ಬಳಿಕ ವಿಷಾದ ಸೂಚಿಸುವ ಪರಿಸ್ಥಿತಿವರೆಗೆ ಹೋಯಿತು. ಆಗ ಪಟ್ಟ ಕಷ್ಟ ಏನೇ ಇರಲಿ, “ಉದಯವಾಣಿ’ಯಲ್ಲಿ ಸಂಪಾದಕೀಯ ಬಳಗದ ಮುಖ್ಯಸ್ಥ ರಾಗಿದ್ದ ಬನ್ನಂಜೆ ರಾಮಾಚಾರ್ಯ ಸಾರ್ವಜನಿಕ ಸಭೆಗಳಲ್ಲಿ ರಸವತ್ತಾಗಿ ಹಾಸ್ಯ ಪ್ರಧಾನವಾಗಿ ಬಣ್ಣಿಸುತ್ತಿದ್ದರು. ಇದು ಉದಯವಾಣಿಗೆ ಸೇರುವ ಮುನ್ನ ಅವರೇ ಕಂಡ ನೈಜ ಘಟನೆ.

ಮೈಸೂರಿನಲ್ಲಿ ಚೆನ್ನಯ್ಯ ಎಂಬ ಮಹನೀಯರೊ ಬ್ಬರಿದ್ದರು. ಇವರು ಸಾಹುಕಾರರಾಗಿ ದಾನಿಯಾಗಿದ್ದರೂ ಹಣ ಇಲ್ಲದ ಸಂದರ್ಭ ಯಾಚಕನೊಬ್ಬನಿಗೆ ಸಹಾಯ ಮಾಡಲು ಆಗುವುದಿಲ್ಲವೆಂದಿದ್ದರು. ಯಾಚಕನಿಗೆ ಸಿಟ್ಟು ಬಂದು ಇವರ ಮರಣ ಸುದ್ದಿಯನ್ನು ವಿಶ್ವ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿಸುವಂತೆ ಮಾಡಿದ. ಇದು ಕೋಲಾಹಲ ಸೃಷ್ಟಿಸಿತು. ಆಗ ಚಿತ್ರ ದುರ್ಗದಲ್ಲಿ ಎ. ಎಸ್‌. ನರಸಿಂಹ ಮೂರ್ತಿ (“ಉದಯವಾಣಿ’ ಸಂಪಾದಕರಾಗಿದ್ದ ಎನ್‌. ಗುರುರಾಜ್‌ ಅವರ ತಂದೆ) “ದಿ ಹಿಂದೂ’ ಮತ್ತು “ವಿಶ್ವ ಕರ್ನಾಟಕ’ದ ಜಿಲ್ಲಾ ವರದಿಗಾರರಾಗಿದ್ದರು. ಸಂಪಾದಕ ರಾಗಿದ್ದ ಎನ್‌.ಎಸ್‌. ವೆಂಕೋಬ ರಾವ್‌ ಅವರು ಮೂರ್ತಿ ಯವರಿಗೆ ತಿಳಿಸಿ ಪರಿಸ್ಥಿತಿ ನಿಯಂತ್ರಿಸಿದರು. ಒಮ್ಮೆ ಬದುಕಿರುವಾಗ ಸತ್ತ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದಾಗ ಆತ ಸಂಪಾದಕರೆದುರು ಹಾಜರಾಗಿ “ನಾನು ಜೀವಂತವಾಗಿದ್ದೇನೆ. ನೀವು ಹೇಗೆ ನಿಧನ ಸುದ್ದಿ ಹಾಕಿದಿರಿ? ನಾಳೆ ವಿಷಾದ ಸೂಚಿಸಬೇಕು’ ಎಂದು ಬೈದು ಹೇಳಿದ. ಮರುದಿನ “…ಮಹನೀಯರು ಸಾಯಲಿಲ್ಲ. ಬದುಕಿ ದ್ದಾರೆನ್ನುವುದಕ್ಕೆ ವಿಷಾದಿಸುತ್ತೇವೆ’ ಎಂದು ಪ್ರಕಟ ವಾಯಿತು. ಇದು ಬೀchi ಜೋಕ್‌.

ಪತ್ರಿಕೆಗಳಿಗೆ ಫ‌ಜೀತಿ, ವಾಟ್ಸ್‌ಆ್ಯಪ್‌ಗೆ?
ತಪ್ಪು ಸುದ್ದಿ ಹಾಕಿದಾಗ ಸಂಪಾದಕೀಯ ಮಂಡಳಿಯನ್ನು ಪ್ರಶ್ನಿಸಬಹುದು. ಸಾಯುವ ಮುನ್ನ ಸಾವಿನ ಸುದ್ದಿಯನ್ನು ವಾಟ್ಸ್‌ಆ್ಯಪ್‌ನಲ್ಲಿ ಬಿತ್ತರಿಸುವ, ಶ್ರದ್ಧಾಂಜಲಿಯನ್ನೂ ಸಲ್ಲಿಸುವ ಎಜುಕೇಟೆಡ್‌ಗಳಿಗೆ, ಫಾರ್ವರ್ಡ್‌ ತಜ್ಞರಿಗೆ ಹೇಗೆ ಉತ್ತರ ದಾಯಿತ್ವ ಹೇರಲು ಸಾಧ್ಯ?

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next