ಮೊದಲೇ ತರ್ಲೆ ಮಾಡುವಂಥ ವಯಸ್ಸು, ಕಿತಾಪತಿ ಮಾಡುವ ಮನಸ್ಸು ನನ್ನದು. ಸುಮ್ಮನಿರಲಾಗದೆ, ಟೇಬಲ್ ಮೇಲಿದ್ದ “ಹೈಡ್ರೋಕ್ಲೋರಿಕ್ ಆ್ಯಸಿಡ್’ ಬಾಟಲಿ ನೋಡಲು ಹೋಗಿ ಆ ಗ್ಲಾಸನ್ನು ಎತ್ತಿ ಹಿಡಿದೆ. ಎಲ್ಲಿ, ಏನು ಮಿಸ್ಟೇಕ್ ಆಯ್ತೋ ಗೊತ್ತಿಲ್ಲ: ಅದು ಕೈ ಬೆರಳ ಮೇಲೆ ಚೆಲ್ಲಿಬಿಟ್ಟಿತು….
ಬಾಲ್ಯದಲ್ಲಿ ಕಳೆದ ದಿನಗಳು, ಘಟನೆಗಳು, ನಾವು ಮಾಡಿಕೊಂಡ ಅವಘಡಗಳು, ಸದಾ ನನೆನಪಾಗುತ್ತಿರುತ್ತವೆ. ಹೀಗೆ ನನ್ನ ಬಾಲ್ಯದಲ್ಲಿ ನಡೆದ ಒಂದು ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ನಾನು ಪ್ರೌಢ ಶಿಕ್ಷಣ ಪೂರೈಸಿದ್ದು ಗದಗದ ಸಿ.ಎಸ್ ಪಾಟೀಲ್ ಬಾಲಕರ ಪ್ರೌಢ ಶಾಲೆಯಲ್ಲಿ. ಹೈಸ್ಕೂಲ್ ಎಂದರೆ ಕೇಳಬೇಕೆ? ತರ್ಲೆ, ತಮಾಷೆ, ಕೀಟಲೆ, ಗಲಾಟೆ, ಇವೆಲ್ಲವೂ ಪ್ರೌಢಶಾಲಾ ಹಂತದ ವಿದ್ಯಾರ್ಥಿ ಜೀವನದಲ್ಲಿ ತುಸು ಹೆಚ್ಚೇ ಇರಬೇಕಲ್ಲವೆ? ನನ್ನ ವಿದ್ಯಾರ್ಥಿ ಜೀವನವೂ ಹಾಗೇ ಇತ್ತು.
ಅವರು ಎತ್ತರದ ಆಸಾಮಿ. ಬಿದಿರು ಗೊಂಬೆಗೆ ಬಟ್ಟೆ ತೊಡಿಸಿದಂತೆ ಭಾಸವಾಗುವ ದೇಹ, ಮೃದು ಸ್ವಭಾವದ ಮಾತು, ಆಂಗ್ಲ ಮತ್ತು ಕನ್ನಡ ಮಿಶ್ರಿತ ಭಾಷೆ, ಸ್ವಲ್ಪ ಮರೆವು, ಹಳೇ ಸ್ಕೂಟರ್‌ನಲ್ಲಿ ಬರುತ್ತಿದ್ದ ಅವರು ನಮ್ಮೆಲ್ಲರ ಅಚ್ಚುಮೆಚ್ಚಿನ ಗುರುಗಳಾದ ಎಂ.ಆರ್ ಲಮಾಣಿ ಮಾಸ್ಟರ್. ಆಗ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿತ್ತು. ಒಂದು ದಿನ ಶಾಲಾ ಅವಧಿ ಮುಗಿದಿದ್ದರೂ ಪ್ರಯೋಗಾಲಯದಲ್ಲಿ ಮಗ್ನರಾಗಿದ್ದ ಲಮಾಣಿ ಮಾಸ್ಟರ್, ಬಣ್ಣ ಬಣ್ಣದ ಕೆಮಿಕಲ್ಸ್‌ಗಳನ್ನು ಮುಂದಿಟ್ಟುಕೊಂಡು ಏನೋ ಬರೆಯುತ್ತ ಕುಳಿತಿದ್ದರು. ಕೆಲ ವಿಜ್ಞಾನದ ಸಂದೇಹಗಳನ್ನು ಕೇಳಲು ನಾನು ಪ್ರಯೋಗಾಲಯಕ್ಕೆ ಹೋದೆ.
ಮೊದಲೇ ಬ್ಯುಸಿಯಾಗಿದ್ದ ಗುರುಗಳಿಗೆ ನಾನು ಮನಸ್ಸಿಗೆ ಬಂದಂತೆ, ಅದೇನು? ಇದೇನು? ಯಾವುದನ್ನು ಯಾವುದಕ್ಕೆ ಪ್ರಯೋಗಿಸಿದರೆ, ಮಿಶ್ರಣ ಮಾಡಿದರೆ ಏನಾಗುತ್ತದೆ? ಎಂದು ಮನಸ್ಸಿನಲ್ಲಿ ಹರಿದಾಡುತ್ತಿದ್ದ ಪ್ರಶ್ನೆಗಳನ್ನು ಕೇಳುತ್ತ ಅವರ ತಲೆ ಬಿಸಿ ಮಾಡುತ್ತ ನಿಂತೆ. ತಕ್ಷಣ ಅವರಿಗೆ ಒಂದು ಫೋನ್ ಕರೆ ಬಂತು. ಅವರು ಮಾತನಾಡುತ್ತ ಹೊರನಡೆದರು. ಮೊದಲೇ ತರ್ಲೆಯ ವಯಸ್ಸು, ಕಿತಾಪತಿ ಮಾಡುವ ಮನಸ್ಸು ನನ್ನದು. ಸುಮ್ಮನಿರಲಾಗದೆ ಟೇಬಲ್ ಮೇಲಿದ್ದ “ಹೈಡ್ರೋಕ್ಲೋರಿಕ್ ಆ್ಯಸಿಡ್’ ಬಾಟಲಿ ನೋಡಲು ಹೋಗಿ ಆ ಗ್ಲಾಸನ್ನು ಎತ್ತಿ ಹಿಡಿದೆ. ಎಲ್ಲಿ, ಏನು ಮಿಸ್ಟೇಕ್ ಆಯ್ತೋ ಗೊತ್ತಿಲ್ಲ: ಅದು ಕೈ ಬೆರಳ ಮೇಲೆ ಚೆಲ್ಲಿಬಿಟ್ಟಿತು. ನಾನು ಅಸಾಧ್ಯ ನೋವನ್ನು ತಾಳಲಾರದೆ “ಸರ್, ಸರ್’ ಎಂದು ಜೋರಾಗಿ ಕಿರುಚಿದೆ.
ತಕ್ಷಣ ಓಡಿ ಬಂದ ಲಮಾಣಿ ಸರ್, ಪ್ರಥಮ ಚಿಕಿತ್ಸೆಯ ಪೆಟ್ಟಿಗೆಯಿಂದ ಹತ್ತಿತೆಗೆದು ಅದನ್ನು ಆ್ಯಸಿಡ್ ಬಿದ್ದಿದ್ದ ಜಾಗದ ಮೇಲಿಟ್ಟರು. ನಂತರ ಬ್ಯಾಂಡೇಜ್ ಸುತ್ತಿ ನನ್ನನ್ನು ಸಂತೈಸಿದರು. ಸ್ಕೂಟರ್ ಮೇಲೆ ಕೂರಿಸಿಕೊಂಡು ಅಲ್ಲೇ ಹತ್ತಿರವಿದ್ದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿ ಅಥವಾ ಕಪಿಚೇಷ್ಟೆ ಮಾಡಿ ವಿದ್ಯಾರ್ಥಿಯೊಬ್ಬ ಗಾಯ ಮಾಡಿಕೊಂಡ ಎಂದು ಯೋಚಿಸದೆ, ತಪ್ಪು ಮಾಡಿದ್ದಕ್ಕೆ ಒಂದು ಚೂರೂ ಗದರದೆ, ತಮ್ಮ ಕೈ ಮೇಲೆಯೇ ಆ್ಯಸಿಡ್ ಚೆಲ್ಲಿದ ಹಾಗೆ ಸಂಕಟಪಡುತ್ತಾ ಅವರು ನನ್ನನ್ನು ಉಪಚರಿಸಿದ ರೀತಿ ಅವರ ಮೇಲಿನ ಪ್ರೀತಿ, ಗೌರವವನ್ನು ಮತ್ತಷ್ಟು ಹೆಚ್ಚಿಸಿತು.
ಆ ಎಡವಟ್ಟಿನಿಂದ ಮಾಡಿಕೊಂಡ ಗಾಯದ ಗುರುತು ಪ್ರತಿದಿನವೂ ಲಮಾಣಿ ಸರ್ ನೆನಪು ತರಿಸುತ್ತದೆ.
ಪ್ರಶಾಂತ್ ಶಂಕ್ರಪ್ಪ ಮೇಟಿ,