Advertisement

ನಿಜಕ್ಕೂ ತಲೆತಗ್ಗಿಸುವ ವಿಚಾರ, ಆರೋಗ್ಯ ಸೇವೆಯ ಘೋರ ವೈಫ‌ಲ್ಯ

01:10 PM Aug 14, 2017 | |

ಅಗತ್ಯ ಔಷಧಗಳನ್ನು ಒದಗಿಸಲು ಸ್ವಾತಂತ್ರ್ಯ ಲಭಿಸಿದ 70 ವರ್ಷಗಳ ಬಳಿಕವೂ ಪರದಾಡುತ್ತಿದ್ದೇವೆ ಎಂದರೆ ನಾವು ಸಾಧಿಸಿದ ಅಭಿವೃದ್ಧಿ ಯಾವುದು? 

Advertisement

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ತವರು ಕ್ಷೇತ್ರವೂ ಆಗಿರುವ ಗೋರಖ್‌ಪುರದ ಬಾಬಾ ರಾಘವ ದಾಸ್‌ ಮೆಡಿಕಲ್‌ ಕಾಲೇಜಿನ ಆಸ್ಪತ್ರೆಯಲ್ಲಿ ಕಳೆದ ಆರು ದಿನಗಳಲ್ಲಿ ಸುಮಾರು 70 ಮಕ್ಕಳು ಮೃತಪಟ್ಟಿರುವ ಘಟನೆ ಇಡೀ ದೇಶದ ಅಂತಃಕರಣವನ್ನು ಕಲಕಿದೆ. ಆಮ್ಲಜನಕದ ಜಾಡಿಗಳನ್ನು ಪೂರೈಸುವ ಖಾಸಗಿ ಸಂಸ್ಥೆ ಸುಮಾರು 70 ಲಕ್ಷ ಹಣ ಬಾಕಿಯಿದ್ದ ಕಾರಣ ಜಾಡಿಗಳ ಪೂರೈಕೆ ಸ್ಥಗಿತಗೊಳಿಸಿದೆ. ಹೀಗಾಗಿ ಸಮರ್ಪಕವಾಗಿ ಆಮ್ಲಜನಕ ಪೂರೈಕೆಯಾಗದೆ ಮಕ್ಕಳು ಉಸಿರುಕಟ್ಟಿ ಅಸುನೀಗಿವೆ ಎನ್ನುವುದು ಪ್ರಾಥಮಿಕವಾಗಿ ಕಂಡುಕೊಂಡಿರುವ ಕಾರಣ. ಸರಕಾರ ಇದನ್ನು ಅಲ್ಲಗಳೆದಿದ್ದು ಸಾವಿನ ನೈಜ ಕಾರಣವನ್ನು ಪತ್ತೆ ಹಚ್ಚಲು ತನಿಖೆಗೆ ಆದೇಶ ನೀಡಿದೆ. ಆಮ್ಲಜನಕ ಕೊರತೆಯಿಂದಲೇ ಮಕ್ಕಳು ಪ್ರಾಣ ಕಳೆದುಕೊಂಡಿವೆ ಎನ್ನುವುದೇ ನಿಜವಾಗಿದ್ದರೂ ಇದು ಒಂದು ಕಾರಣ ಮಾತ್ರ. ಗೋರಖ್‌ಪುರದ ಪರಿಸರ, ಆರ್ಥಿಕ ಸ್ಥಿತಿ, ನೈರ್ಮಲ್ಯ ಇತ್ಯಾದಿ ವಿಚಾರಗಳ ಹಿನ್ನೆಲೆಯಲ್ಲಿ ಹೇಳುವುದಾದರೆ ಮಕ್ಕಳ ಸಾವಿಗೆ ಹಲವು ಕಾರಣಗಳಿವೆ. ಇಷ್ಟಕ್ಕೂ ಈ ಪ್ರಮಾಣದಲ್ಲಿ ಮಕ್ಕಳು ಈ ಆಸ್ಪತ್ರೆಗೆ ದಾಖಲಾಗಿರುವುದೇಕೆ ಎನ್ನುವುದು ಕೇಳಬೇಕಾದ ಪ್ರಮುಖ ಪ್ರಶ್ನೆ. 

ಗೋರಖ್‌ಪುರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮಕ್ಕಳ ಪಾಲಿಗೆ ಯಮನಾಗಿರುವುದು ಜಪಾನೀಸ್‌ ಎನ್ಸೆಫ‌ಲಿಟಿಸ್‌ ಅಥವಾ ಮೆದುಳಿನ ಉರಿಯೂತ ಎನ್ನುವ ಸೊಳ್ಳೆಗಳಿಂದ ಹರಡುವ ಭೀಕರ ಕಾಯಿಲೆ. ಮೆದುಳನ್ನೇ ಬಾಧಿಸುವ ಈ ಕಾಯಿಲೆ ಕಳೆದ ನಾಲ್ಕು ದಶಕಗಳಲ್ಲಿ ಗೋರಖ್‌ಪುರದಲ್ಲಿ 25,000ಕ್ಕೂ ಹೆಚ್ಚು ಮಕ್ಕಳನ್ನು ಬಲಿತೆಗೆದುಕೊಂಡಿದೆ ಎಂದು ಸರಕಾರಿ ದಾಖಲೆಗಳು ಹೇಳುತ್ತಿವೆ. ಆದರೆ ಖಾಸಗಿ ಸಂಸ್ಥೆಯೊಂದರ ಪ್ರಕಾರ 50,000ಕ್ಕೂ ಹೆಚ್ಚು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಈ ವರ್ಷವೊಂದರಲ್ಲಿ ಇಷ್ಟರತನಕ 120 ಮಕ್ಕಳು ಸತ್ತಿದ್ದಾರೆ. 2005ರಲ್ಲಿ ಸುಮಾರು 1500 ಮಕ್ಕಳು ರೋಗಕ್ಕೆ ಬಲಿಯಾದಾಗ ಮೆದುಳಿನ ಉರಿಯೂತದ ಕುರಿತು ರಾಷ್ಟ್ರಮಟ್ಟದಲ್ಲಿ ವ್ಯಾಪಕ ಕಳವಳ ವ್ಯಕ್ತವಾಗಿತ್ತು. 

 ಬಡತನ, ಕಳಪೆ ಆರೋಗ್ಯ ಸೇವೆ, ಕೊಳಕು ಪರಿಸರ,ಭ್ರಷ್ಟಾಚಾರ ಇವೆಲ್ಲ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿರುವ ಗೋರಖಪುರದಲ್ಲಿ ಪ್ರಧಾನ ಲಕ್ಷಣಗಳು. ಗೋರಖಪುರದ ಸುತ್ತಮುತ್ತಲಿನ 300 ಕಿ. ಮೀ. ವ್ಯಾಪ್ತಿಗೆ ತಕ್ಕಮಟ್ಟಗೆ ಎಲ್ಲ ಸೌಲಭ್ಯಗಳಿರುವ ಸರಕಾರಿ ಆಸ್ಪತ್ರೆ ಎಂದಿರುವುದು ಇದೇ ಬಾಬಾ ರಾಘವ್‌ದಾಸ್‌ ಮೆಡಿಕಲ್‌ ಕಾಲೇಜ್‌ ಮಾತ್ರ. ಗೊಂಡ, ಬಸ್ತಿ, ಬಿಹಾರದ ಪೂರ್ವ ಜಿಲ್ಲೆಗಳು ಮತ್ತು ನೇಪಾಳದ ತೇರೈಯಿಂದೆಲ್ಲ ಜನರು ಈ ಆಸ್ಪತ್ರೆಗೆ ಬರುತ್ತಾರೆ. ಹೀಗಾಗಿ ಆಸ್ಪತ್ರೆಯಲ್ಲಿ ನಿತ್ಯ ರೋಗಿಗಳು ತುಂಬಿ ತುಳುಕುತ್ತಿದ್ದಾರೆ. ಸರಕಾರಿ ಆಸ್ಪತ್ರೆಯೊಂದರ ಮೇಲೆ ಈ ಪರಿಯ ಒತ್ತಡ ಬಿದ್ದರೆ ಏನಾಗುತ್ತದೋ ಅದೆಲ್ಲ ಈ ಆಸ್ಪತ್ರೆಯಲ್ಲಿ ಆಗುತ್ತಿದೆ. ಹೀಗಾಗಿ ಆಮ್ಲಜನಕ ಜಾಡಿಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದೇ ಮಕ್ಕಳು ಸಾಯಲು ಕಾರಣ ಎನ್ನುವುದು ಮೇಲ್ನೋಟಕ್ಕೆ ಮಾತ್ರ ಸರಿಯಾಗುತ್ತದೆ. ಘಟನೆಯ ಆಳಕ್ಕಿಳಿದಾಗ ಕಾಣಿಸುವುದು ವ್ಯವಸ್ಥೆಯ ದಿವ್ಯ ನಿರ್ಲಕ್ಷ್ಯ. ದೇಶದಲ್ಲಿ ಎಲ್ಲ ಸರಕಾರಿ ವ್ಯವಸ್ಥೆಗಳೂ ರೋಗಗಗ್ರಸ್ತವಾಗಿವೆ. ಅದರಲ್ಲೂ ಆರೋಗ್ಯ ಸೇವೆ ಘೋರ ವೈಫ‌ಲ್ಯವನ್ನು ಕಂಡಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಚಂದ್ರನ ಬಳಿಗೆ, ಮಂಗಳನಲ್ಲಿಗೆ ಹೋಗುವ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿರುವ ನಮಗೆ ಕಂದಮ್ಮಗಳು ಜೀವ ತಿನ್ನುವ ಒಂದು ಸಾಂಕ್ರಾಮಿಕ ರೋಗವನ್ನು ಹತೋಟಿಯಲ್ಲಿಡ್ಡಲು ಸಾಧ್ಯವಾಗಿಲ್ಲ ಎನ್ನುವುದು ನಿಜಕ್ಕೂ ತಲೆತಗ್ಗಿಸುವ ವಿಚಾರ. ಜನರಲ್ಲಿ ಸ್ವತ್ಛತೆಯ ಕುರಿತು ಅರಿವು ಮೂಡಿಸಿ , ರೋಗ ಲಕ್ಷಣ ಕಾಣಿಸಿಕೊಂಡಾಗಲೇ ಚಿಕಿತ್ಸೆ ದೊರೆಯುಂತೆ ಮಾಡಲು ಸಾಕಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜಿಲ್ಲಾ ಆಸ್ಪತ್ರೆಗಳನ್ನು ಪ್ರಾರಂಭಿಸಿ ಅಗತ್ಯ ಔಷಧಗಳನ್ನು ಒದಗಿಸಲು ಸ್ವಾತಂತ್ರ್ಯ ಲಭಿಸಿದ 70 ವರ್ಷಗಳ ಬಳಿಕವೂ ಪರದಾಡುತ್ತಿದ್ದೇವೆ ಎಂದರೆ ನಾವು ಸಾಧಿಸಿದ ಅಭಿವೃದ್ಧಿ ಯಾವುದು? 

Advertisement

Udayavani is now on Telegram. Click here to join our channel and stay updated with the latest news.

Next