Advertisement
ಯಶಸ್ಸು! ಮಾನವ ಜನಾಂಗವನ್ನು ಈ ಪದ ಯಾವ ಮಟ್ಟಕ್ಕೆ ಆವರಿಸಿಕೊಂಡುಬಿಟ್ಟಿದೆಯೆಂದರೆ, “ಒಂದು ತಿಂಗಳಲ್ಲಿ ಯಶಸ್ವಿಯಾಗುವುದು ಹೇಗೆ?’, “ಯೂ ಕ್ಯಾನ್ ಡೂ ಇಟ್’ “ಯಶಸ್ಸಿಗೆ 8 ಸೂತ್ರಗಳು’ ಎಂಬ ಶಿರೋನಾಮೆಯಲ್ಲಿ ಲಕ್ಷಾಂತರ ಪುಸ್ತಕಗಳು ಜಗತ್ತಿನಾದ್ಯಂತ ಪ್ರಕಟವಾಗುತ್ತವೆ. ಕೋಟ್ಯಂತರ ಪ್ರತಿಗಳು ಮಾರಾಟವಾಗುತ್ತದೆ. ಇಂಥ ಪುಸ್ತಕಗಳನ್ನು ಪ್ರಕಟಿಸಿಯೇ ಬದುಕು ಸಾಗಿಸುತ್ತಿರುವ ಪ್ರಕಾಶಕರಿದ್ದಾರೆ, ಲೇಖಕರಿದ್ದಾರೆ. ಪ್ರೇರಣಾದಾಯಕ ಭಾಷಣಗಳಲ್ಲಿ, ಕಾರ್ಪೊರೇಟ್ ಕಥೆಗಳಲ್ಲಿ, ಟ್ವೀಟುಗಳಲ್ಲಿ, ಕೋಟುಗಳಲ್ಲಿ, ಲೇಖನಗಳಲ್ಲಿ, ಗಾದೆ ಮಾತುಗಳಲ್ಲಿ, ಗೆಳೆಯರ ನಡುವಿನ ಹರಟೆಗಳಲ್ಲಿ, ಗುರುಗಳ ಪ್ರವಚನಗಳಲ್ಲಿ, ಶಾಲೆಯಲ್ಲಿ, ಕಚೇರಿಗಳಲ್ಲಿ…”ಯಶಸ್ಸು’ ಎನ್ನುವ ಪದ ಯಾವ ಮಟ್ಟಕ್ಕೆ ಹಾಸುಹೊಕ್ಕಾಗಿದೆಯೆಂದರೆ ಕಷ್ಟಪಟ್ಟವನಿಗೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬ ಖಚಿತತೆಯನ್ನೂ ಈ ಪದದ ಸುತ್ತಲಿನ ಕಥೆಗಳು ಹೇಳುತ್ತವೆ.
Related Articles
Advertisement
“ಕಠಿಣ ಪರಿಶ್ರಮದಿಂದಲೇ ಯಶಸ್ಸು’ ಎನ್ನುವ ವ್ಯಾಖ್ಯಾನಕ್ಕೆ ಗಂಟುಬಿದ್ದು ನಾವು ಶ್ರಮಪಡುತ್ತಲೇ ಹೋಗುತ್ತೇವೆ. ಅದು ದಕ್ಕದೇ ಹೋದಾಗ ಒತ್ತಡ, ಕೀಳರಿಮೆ ಹೆಚ್ಚಾಗುತ್ತಲೇ ಹೋಗುತ್ತದೆ. ಇದೆಲ್ಲದರ ಅರ್ಥವಿಷ್ಟೆ, ನಾವೆಲ್ಲ ಇಂದು ಶ್ರಮಪಡುತ್ತಿರುವುದು ನೇರವಾಗಿ ಹಣಕ್ಕೆ ಅಥವಾ ಉನ್ನತ ಸ್ಥಾನಗಳಿಗಲ್ಲ, ಬದಲಾಗಿ, ಅದು ತಂದುಕೊಡಬಹುದಾದ ಗೌರವಕ್ಕೆ ಮತ್ತು ಆ ಸ್ಥಾನಮಾನ ಇರುವವರು ಗಳಿಸುವಂಥ “ಪ್ರೀತಿ’ಯನ್ನು ಪಡೆಯುವುದಕ್ಕೆ. ಇಂದಿನ ಈ ಜಗತ್ತಿನಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ ನಿಜ. ಆದರೆ ಎಲ್ಲರಿಗೂ ಹಣ-ಖ್ಯಾತಿ ಗಳಿಸಲು, ಉನ್ನತ ಸ್ಥಾನಮಾನಕ್ಕೇರಲು ಸಾಧ್ಯವಿಲ್ಲ. ಕೆಲವೇ ಕೆಲವರಿಗೆ ಮಾತ್ರ ಈ ಸೌಭಾಗ್ಯ ದೊರೆಯುತ್ತದೆ. ಹಾಗೆಂದು, ಮೇಲಕ್ಕೇರಿದವನು ಎಲ್ಲರಿಗಿಂತ ಹೆಚ್ಚು ಶ್ರಮಪಟ್ಟನೆಂದೋ ಅಥವಾ ಕೆಳಕ್ಕಿರುವವನು ಕಡಿಮೆ ಶ್ರಮಪಟ್ಟನೆಂದೋ ಇದರರ್ಥವಲ್ಲ.
ಇಲ್ಲಿ ನಾವು ಲಕ್ ಅಥವಾ ಅದೃಷ್ಟದಾಟವನ್ನು ಕಡೆಗಣಿಸುತ್ತಿದ್ದೇವೆ. ಒಬ್ಬ ಕ್ರೀಡಾಪಟುವಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಂಥ ಎಲ್ಲಾ ರೀತಿಯ ಪ್ರತಿಭೆಯಿರಬಹುದು. ಅಂತಾರಾಷ್ಟ್ರೀಯ ಕ್ರೀಡಾಪಟುಗಳಷ್ಟೇ ಅಥವಾ ಅವರೆಲ್ಲರಿಗಿಂತಲೂ ಅವನು ಹೆಚ್ಚು ಪರಿಶ್ರಮಪಡುತ್ತಿರಬಹುದು. ಆದರೆ, ಆಯ್ಕೆಯ ಸಮಯದಲ್ಲಿ ಅವನು ಕಳಪೆ ಪ್ರದರ್ಶನ ನೀಡಿ, ಯಶಸ್ಸಿನಿಂದ ವಂಚಿತನಾಗಬಹುದು, ಯಾವುದೋ ದುರ್ಘಟನೆ ಅವನ ಮುಖ್ಯ ಅಂಗಾಗಳನ್ನೇ ಕಸಿದುಹಾಕಬಹುದು. ಹಾಗೆಂದು ಅವನು ಸೋಲಿಗೆ ಅರ್ಹ ಎಂದರ್ಥವೇನು? ಅವನ ವೈಫಲ್ಯಕ್ಕೆ ಅವನೇ ಕಾರಣನೇನು? ಸೋತವನಿಗೆ ಲಕ್ ಎಷ್ಟು ಕೈಕೊಟ್ಟಿರುತ್ತದೋ, ಗೆದ್ದವನಿಗೆ ಲಕ್ ಅಷ್ಟೇ ಕೈಗೂಡಿರುತ್ತದೆ.
ಚಿಕ್ಕ ಗ್ಯಾರೇಜ್ ಒಂದರಲ್ಲಿ ಬಿಲ್‌ಗೇಟ್ಸ್ ತಮ್ಮ ಮೈಕ್ರೋಸಾಫ್ಟ್ ಕಂಪೆನಿ ಆರಂಭಿಸಿದರು, ನಂತರ ಅವರು ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಯಾದರು. ದೃಢ ಮನಸ್ಸು, ಒಳ್ಳೆಯ ಐಡಿಯಾ ಇದ್ದರೆ ನೀವು ಮತ್ತೂಬ್ಬ ಬಿಲ್‌ಗೇಟ್ಸ್ ಆಗಬಹುದು ಎನ್ನುವುದು ಈ ಆಧುನಿಕ ಯುಗದ ವಾದ. ಆದರೆ ಜಗತ್ತಿನಲ್ಲಿಂದು ಅದ್ಭುತ ಐಡಿಯಾಗಳನ್ನು ಹೊತ್ತ ಅಗಣಿತ ಕಂಪನಿಗಳಿವೆ. ಅವು ಎಲ್ಲೂ ಸಲ್ಲದೇ ವಿಫಲವಾಗಿ ಬಾಗಿಲು ಹಾಕುತ್ತಿವೆ. ಆದರೆ ನಮಗೆ ಕಾಣಿಸುವುದು ಒಬ್ಬ ಸಫಲ ಬಿಲ್‌ಗೇಟ್ಸ್ ಅಷ್ಟೇ ಹೊರತು, ಅಷ್ಟೇ ಪ್ರತಿಭೆಯಿರುವ ಕೋಟ್ಯಂತರ ವಿಫಲ ಜನರಲ್ಲ.
ಶತಮಾನಗಳ ಹಿಂದೆ ಒಬ್ಬ ವ್ಯಕ್ತಿ ಬಡವನಾಗಿದ್ದರೆ ಆ ಸ್ಥಿತಿಗೆ ಅವನೇ ಪೂರ್ಣಜವಾಬ್ದಾರನೆಂದು ಜನ ಪಟ್ಟಕಟ್ಟುತ್ತಿರಲಿಲ್ಲ. ಅವನನ್ನು “ದುರ್ದೈವಿ’ ಎನ್ನುತ್ತಿದ್ದರಷ್ಟೆ. ಅದೃಷ್ಟದೇವತೆ ಅವನ ಜೊತೆಗಿಲ್ಲ ಎಂದೂ ಭಾವಿಸುತ್ತಿದ್ದರು. ಅದೃಷ್ಟ-ದುರಾದೃಷ್ಟ ಎನ್ನುವುದನ್ನು ಇಂದು ನಂಬುವವರೇ ಇಲ್ಲದಾಗಿದೆ. ಹೀಗಾಗಿ, ಒಬ್ಬನ ಕೆಟ್ಟ ಪರಿಸ್ಥಿತಿಯನ್ನು ನಾವು ಅವನ ವೈಫಲ್ಯವೆಂದೇ ಪರಿಗಣಿಸುತ್ತೇವೆ. ತನ್ನ ಸೋಲಿಗೆ ತಾನೇ ಕಾರಣ ಎಂದು ವ್ಯಕ್ತಿಯೊಬ್ಬ ಭಾವಿಸಲಾರಂಭಿಸಿದರೆ, ತಾನು ಯಾವುದಕ್ಕೂ ಪ್ರಯೋಜನ ವಿಲ್ಲದವನು ಎಂಬ ಖನ್ನತೆ ಅವನಲ್ಲಿ ಮನೆಮಾಡುತ್ತದೆ. ಈ ಎಲ್ಲಾ ಕಾರಣಕ್ಕಾಗಿಯೇ, ಅತ್ಯಾಧುನಿಕ ತಂತ್ರಜ್ಞಾನದ ಈ ಯುಗದಲ್ಲಿಯೇ ಒತ್ತಡ, ಖನ್ನತೆ, ಆತ್ಮಹತ್ಯೆಗಳ ಸಂಖ್ಯೆ ಹೆಚ್ಚು!
ಹಾಗಿದ್ದರೆ, ಯಶಸ್ವಿಯಾಗಲು ಯಾರೂ ಪ್ರಯತ್ನಿಸಬಾರದೇ? ಪ್ರಯತ್ನಿಸಬಾರದು, ಕಠಿಣ ಪರಿಶ್ರಮ ಪಡಬಾರದು ಎಂದು ನಾನಿಲ್ಲಿ ಹೇಳುತ್ತಿಲ್ಲ. ಹಣ-ಅಂತಸ್ತು-ಉನ್ನತ ಸ್ಥಾನ ದಕ್ಕಿದರೆ ಒಳ್ಳೆಯದೇ. ಆದರೆ ಒಬ್ಬ ವ್ಯಕ್ತಿಯ ಯಶಸ್ಸಿನಲ್ಲಿ ಕೇವಲ ಅವನ ಕಠಿಣ ಪರಿಶ್ರಮವಷ್ಟೇ ಅಲ್ಲ, ಲಕ್ ಕೂಡ ಕೆಲಸ ಮಾಡಿರುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಇದರ ಜೊತೆಗೇ ಒಬ್ಬ ವ್ಯಕ್ತಿ ಹಣ-ಅಂತಸ್ತು ಗಳಿಸಲು ವಿಫಲನಾದರೆ, ಉನ್ನತ ಹುದ್ದೆ ಗಳಿಸದೇ ಇದ್ದರೆ ಅವನನ್ನು ಕೀಳಾಗಿ ಕಾಣುವುದನ್ನು ನಿಲ್ಲಿಸಬೇಕು. ಗೌರವಾದರಕ್ಕೆ ಬಾಸ್ ಅಷ್ಟೇ ಅಲ್ಲ, ಕಚೇರಿಯ ಜವಾನನೂ ಅರ್ಹ ಎಂಬ ಭಾವನೆ ನಮ್ಮಲ್ಲಿ ಬೆಳೆಯಬೇಕು.
ಎರಡನೆಯದಾಗಿ, ಯಶಸ್ಸಿಗೆ ನಮ್ಮದೇ ಆದ ವ್ಯಾಖ್ಯಾನವನ್ನು ಕೊಟ್ಟುಕೊಳ್ಳೋಣ. ಔದ್ಯೋಗಿಕ ಬಂಡವಾಳಶಾಹಿ ಪ್ರಪಂಚ ಯಾವುದನ್ನು ಯಶಸ್ಸು ಅನ್ನುತ್ತದೋ ಅದರ ಹೊರತಾಗಿಯೂ ಯಶಸ್ಸು ಎನ್ನುವುದು ಇದೆ. ಒಬ್ಬ ಒಳ್ಳೆಯ ಅಪ್ಪನಾಗಿ, ಒಬ್ಬ ಸಮಾಜಮುಖೀ ವ್ಯಕ್ತಿಯಾಗಿ, ಅದ್ಭುತ ಪ್ರೇಮಿಯಾಗಿ, ಪ್ರಾಮಾಣಿಕ ಸ್ನೇಹಿತನಾಗಿ, ಜೀವನದ ಚಿಕ್ಕ ಪುಟ್ಟ ರಸಾಸ್ವಾದಗಳನ್ನು ಅನುಭವಿಸುವ ಚೈತನ್ಯವಾಗಿ ನೀವು ಯಶಸ್ವಿಯಾಗಬಹುದು. ನಮ್ಮ ಬ್ಯುಸಿನೆಸ್ ಕಾರ್ಡ್‌ಗಳ ಮೇಲೆ, ನಮ್ಮ ರೆಸ್ಯೂಮ್‌ಗಳ ಮೇಲೆ ಕಾಣಿಸಿಕೊಳ್ಳುವ ಅಂಶಗಳಷ್ಟೇ ನಾವಲ್ಲ. ನಮ್ಮ ಸಂಬಳ, ನಮ್ಮ ಕಾರು, ನಮ್ಮ ವಾಚು ನಾವಲ್ಲ. ಅದರ ಹೊರತಾಗಿಯೂ ನಾವಿದ್ದೇವೆ, ಆ ನಾವನ್ನು ಮರೆಯದಿರೋಣ.
ಎಲೆನಾ ಸ್ಯಾಂಟರೆಲಿಮನಃಶಾಸ್ತ್ರಜ್ಞರು, ಉದ್ಯಮಿ