ಮೈಸೂರು: ನಾಡಹಬ್ಬ, ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಗಾಗಿ ಕಾಡಿನಿಂದ ಕರೆತಂದಿರುವ ಅಂಬಾರಿ ಆನೆ ಅರ್ಜುನ ನೇತೃತ್ವದ ಗಜಪಡೆಗೆ ಅರಣ್ಯ ಸಚಿವ ಆರ್.ಶಂಕರ್ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು.
ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ಬಿಡಾರ ಹೂಡಿರುವ ದಸರಾ ಗಜಪಡೆಗೆ ಅರ್ಚಕರು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ ಬಳಿಕ, ಅರಣ್ಯ ಸಚಿವ ಆರ್.ಶಂಕರ್ ಆನೆಗಳಿಗೆ ಪೂಜೆ ಮಾಡಿ, ಬೆಲ್ಲ, ಕಾಯಿ, ಹಣ್ಣುಗಳು, ಕಬ್ಬು ತಿನ್ನಿಸಿದರು.
ಕಿಟ್ ವಿತರಣೆ: ಅರಣ್ಯ ಇಲಾಖೆಯಿಂದ ದಸರಾ ಗಜಪಡೆಯ ಮಾವುತರು, ಕಾವಾಡಿಗಳಿಗೆ ನೀಡಲಾಗುವ ದಿನಬಳಕೆ ವಸ್ತುಗಳಾದ ಖಾಕಿ ಸಮವಸ್ತ್ರ, ಛತ್ರಿ, ಜರ್ಕಿನ್, ಟೋಪಿ, ಟಿ-ಶರ್ಟ್, ಶೂ, ನೀರಿನ ಬಾಟಲಿ ಒಳಗೊಂಡ ಕಿಟ್ ವಿತರಿಸಲಾಯಿತು. ಬಳಿಕ ಸಚಿವ ಆರ್.ಶಂಕರ್ ಮತ್ತು ಅವರ ಪತ್ನಿ ಮಾವುತರು, ಕಾವಾಡಿಗಳು ಮತ್ತವರ ಕುಟುಂಬದವರಿಗೆ ಉಪಾಹಾರ ಬಡಿಸಿದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿ.ಜಯರಾಮ್, ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಜಗತ್‌ರಾಮ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಚಳಾಪುರೆ, ಸಿಸಿಎಫ್ ವೆಂಕಟೇಶನ್, ಡಿಸಿಎಫ್ ಶ್ರೀಧರ್, ಆನೆ ವೈದ್ಯ ಡಾ.ನಾಗರಾಜ್ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನಾಡಹಬ್ಬ ದಸರೆಯಲ್ಲಿ ಪಾಲ್ಗೊಳ್ಳಲು ಪ್ರತಿ ವರ್ಷದಂತೆ ಬಂದಿರುವ ಆನೆಗಳಿಗೆ ಹಣ್ಣು-ಬೆಲ್ಲ ತಿನ್ನಿಸಿದ್ದೇವೆ. ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲಿರುವ ಅರ್ಜುನ ಸೇರಿದಂತೆ ಎಲ್ಲ ಆನೆಗಳು ಗಮನ ಸೆಳೆಯಲಿವೆ. ಈ ಬಾರಿಯೂ ಅರ್ಜುನನೇ ಅಂಬಾರಿ ಹೊರಲಿದ್ದಾನೆ.
-ಆರ್.ಶಂಕರ್, ಅರಣ್ಯ ಸಚಿವ