Advertisement
ಆಂಧ್ರ ಪ್ರದೇಶದ ಮೂಲದಿಂದ ಬಂದಿರಬಹುದೆಂದು ಶಂಕಿಸಲಾಗಿರುವ ಈ ಹುಳುಗಳು ನೇರವಾಗಿ ಹಿಪ್ಪುನೇರಳೆ ಬೆಳೆಯನ್ನು ಆವರಿಸಿಕೊಂಡಿವೆ. ಎಲೆಯ ತುದಿಯಿಂದ ತಿನ್ನಲಾರಂಭಿಸಿ ಕೊನೆಗೆ ಇಡೀ ಎಲೆಯನ್ನೇ ಆಪೋಷನ ತೆಗೆದುಕೊಳ್ಳುತ್ತಿವೆ. ಇದರಿಂದ ಹಿಪ್ಪುನೇರಳೆ ಬೆಳೆ ಇಳುವರಿ ಕುಂಠಿತಗೊಳ್ಳುವ ಹಾಗೂ ಬೆಳೆ ನಷ್ಟಕ್ಕೊಳಗಾಗುವ ಆತಂಕವನ್ನು ಬೆಳೆಗಾರರು ಎದುರಿಸುತ್ತಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಶೇ.10ರಷ್ಟು ಬೆಳೆ ಹುಳುಗಳ ಬಾಧೆಗೆ ತುತ್ತಾಗಿದ್ದು, ಮಳವಳ್ಳಿ ಹಾಗೂ ಮದ್ದೂರು ಪ್ರಮಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ.
Related Articles
Advertisement
ಇಳುವರಿ ಕುಂಠಿತಗೊಳ್ಳುವ ಆತಂಕ: ಸಾಮಾನ್ಯವಾಗಿ ಒಂದು ಎಕರೆ ಹಿಪ್ಪುನೇರಳೆ ತೋಟದಲ್ಲಿ ರೈತರು ಸುಮಾರು 125 ರಿಂದ 150 ರೇಷ್ಮೆ ಮೊಟ್ಟೆಗಳನ್ನು ಮೇಯಿಸಿ ರೇಷ್ಮೆ ಗೂಡಿನ ಇಳುವರಿ ತೆಗೆಯುತ್ತಿದ್ದರು. ಹುಳು ಬಾಧೆಯಿಂದ ಎಲೆಗಳು ಸತ್ವಹೀನವಾಗುತ್ತಿರುವುದು ರೇಷ್ಮೆ ಹುಳುಗಳ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇಳುವರಿ ಕುಂಠಿತಗೊಳ್ಳುವ ಆತಂಕ ಬೆಳೆಗಾರರದ್ದಾಗಿದೆ.
ಹುಳುಗಳ ಕಾಟ ತೀವ್ರವಾಗಿ ಹರಡಿದಲ್ಲಿ ಶೇ.50 ರಿಂದ 60ರಷ್ಟು ಇಳುವರಿ ಕಡಿಮೆಯಾಗಿ ನಷ್ಟ ಉಂಟಾಗಲಿದೆ. ರೈತರು ರೇಷ್ಮೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅಧಿಕಾರಿಗಳು ಔಷಧ ಸಿಂಪಡಣೆ ಮಾಡುವಂತೆ ಸೂಚಿಸಿದ್ದರೂ ಅದರಿಂದ ಪ್ರಯೋಜನವಾಗಿಲ್ಲ.
ಎಲೆಗಳ ಹಿಂದೆ ಹುಳುಗಳು: ಹಿಪ್ಪುನೇರಳೆ ಬೆಳೆಯನ್ನು ಬಾಧಿಸುತ್ತಿರುವ ಉದ್ದನೆಯ ಹುಳುಗಳು ಎಲೆಗಳ ಹಿಂಭಾಗದಲ್ಲಿ ಅಡಗಿರುತ್ತವೆ. ಇವು ಮೇಲ್ಭಾಗದಿಂದ ಅಷ್ಟಾಗಿ ಕಾಣುವುದಿಲ್ಲ. ಔಷಧ ಸಿಂಪರಣೆ ಮಾಡಿದರೂ ಅದರ ಪ್ರಭಾವ ಹುಳುಗಳ ಮೇಲೆ ಬೀಳುವುದು ಕಡಿಮೆ. ಹುಳುಗಳು ತಿಂದಿರುವ ಎಲೆಗಳನ್ನು ಹಾಗೂ ಹುಳುಗಳನ್ನು ಸಂಗ್ರಹ ಮಾಡಿ ಸುಟ್ಟು ಹಾಕುವಂತೆ ರೇಷ್ಮೆ ಇಲಾಖೆ ಅಧಿಕಾರಿಗಳು ಬೆಳೆಗಾರರಿಗೆ ಸಲಹೆ ನೀಡುತ್ತಿದ್ದಾರೆ.
ವಿಜ್ಞಾನಿಗಳ ಸಲಹೆಗೆ ನಿರ್ಧಾರ: ಹಿಪ್ಪುನೇರಳೆ ಬೆಳೆಯನ್ನು ಬಾಧಿಸುತ್ತಿರುವ ಹುಳುಗಳ ನಿಯಂತ್ರಣದ ಬಗ್ಗೆ ವಿಜ್ಞಾನಿಗಳ ಸಲಹೆ ಪಡೆಯಲು ರೇಷ್ಮೆ ಇಲಾಖೆ ಉಪ ನಿರ್ದೇಶಕರು ಮುಂದಾಗಿದ್ದಾರೆ. ಅದರಂತೆ ಮೈಸೂರಿನ ಸಿಎಸ್‌ಆರ್ ಅಂಡ್ ಟಿಐ ವಿಜ್ಞಾನಿಗಳನ್ನು ಹುಳುಗಳು ಹರಡಿರುವ ಪ್ರದೇಶಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿ ನಂತರ ಅವರ ಸಲಹೆ ಮೇರೆಗೆ ನಿಯಂತ್ರಣ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದಾರೆ.
ನಿಯಂತ್ರಣ ಹೇಗೆ? ವ್ಯಾಪಕವಾಗಿ ಹಿಪ್ಪುನೇರಳೆ ಬೆಳೆಗೆ ಹರಡುತ್ತಿರುವ ಹುಳುಗಳನ್ನು ನಿಯಂತ್ರಿಸಲು 1 ಅಥವಾ 2 ಮಿಲಿ ರೋಗರ್ ಮತ್ತು ನುವಾನ್ ಕ್ರಿಮಿನಾಶಕವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಂಜೆ 6 ಅಥವಾ 7 ಗಂಟೆಯ ನಂತರ ಹಿಪ್ಪುನೇರಳೆ ಬೆಳೆಗೆ ಸಿಂಪಡಣೆ ಮಾಡಬೇಕು. ಹುಳುಗಳು ಎಲೆಯ ಕೆಳಗೆ ಅಡಗಿರುತ್ತವೆ. ಅದೇ ಜಾಗಕ್ಕೆ ಸಿಂಪಡಣೆ ಮಾಡುವುದರಿಂದ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಈ ಔಷಧದ ಪ್ರಭಾವ ಎಲೆಗಳ ಮೇಲೆ ಹದಿನೈದು ದಿನಗಳವರೆಗೆ ಇರುತ್ತದೆ. ಆ ಅವಧಿಯಲ್ಲಿ ಯಾವುದೇ ಕಾರಣಕ್ಕು ರೇಷ್ಮೆ ಹುಳುಗಳಿಗೆ ಸೊಪ್ಪು ನೀಡಬಾರದು.
ಹೆಚ್ಚುತ್ತಿರುವ ಹಿಪ್ಪುನೇರಳೆ ಬೆಳೆ ವಿಸ್ತೀರ್ಣ : ಜಿಲ್ಲೆಯಲ್ಲಿ ಹಿಪ್ಪುನೇರಳೆ ಬೆಳೆಯ ವಿಸ್ತೀರ್ಣ ಹೆಚ್ಚಾಗುತ್ತಿದೆ. 2017-18ನೇ ಸಾಲಿನಲ್ಲಿ 15,472.30 ಹೆಕ್ಟೇರ್ ಪ್ರದೇಶವಿದ್ದರೆ, 2018-19ನೇ ಸಾಲಿನಲ್ಲಿ 15,985.79 ಹೆಕ್ಟೇರ್‌ಗೆ ಏರಿಕೆಯಾಗಿದೆ. ಮದ್ದೂರು ಹಾಗೂ ಮಳವಳ್ಳಿಯಲ್ಲಿ ಹಿಪ್ಪುನೇರಳೆ ಬೆಳೆ ವಿಸ್ತೀರ್ಣ ಅಧಿಕವಾಗಿದೆ. ಹಿಪ್ಪುನೇರಳೆ ಬೆಳೆ ನೀರಾವರಿ ಆಶ್ರಿತ ಪ್ರದೇಶದಲ್ಲಿ ಮಾತ್ರವಿರುವುದು ಕಂಡುಬಂದಿದೆ.
● ಮಂಡ್ಯ ಮಂಜುನಾಥ್