Advertisement

ಬೆಳ್ಳಾರೆ ಜ್ಞಾನಗಂಗಾದಲ್ಲಿ “ಕೀಟ ಪ್ರಪಂಚ’

10:53 PM Apr 09, 2019 | mahesh |

ಬೆಳ್ಳಾರೆ: ಕೀಟಗಳನ್ನು ಕಂಡರೆ ಓಡುವವರೇ ಹೆಚ್ಚು. ಅದೇನೋ ಕೀಟ ಹಾರಾಡಿ ಮೈಮೇಲೆ ಕೂತರೆ ಕಚ್ಚುತ್ತೋ ಏನೋ ಎಂದು ಕೀಟದ ಸಹವಾಸದಿಂದ ದೂರ ಹೋಗುವವರೂ ಇದ್ದಾರೆ. ಮಕ್ಕಳಂತೂ ಕೀಟ ಕಂಡರೆ ಕಿರುಚಾಡುತ್ತಾರೆ. ಆದರೆ ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್‌ ಸ್ಕೂಲ್‌ನ ಬೇಸಗೆ ಶಿಬಿರದಲ್ಲಿ ಇಂತಹ ವಿಸ್ಮಯಕಾರಿ ಕೀಟಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಕೀಟ ಪ್ರಪಂಚ ಕಾರ್ಯಕ್ರಮ ಆಯೋಜಿಸಲಾಗಿತ್ತು ಮಕ್ಕಳು ಹಲವು ಬಗೆಯ ಕೀಟಗಳನ್ನು ಹತ್ತಿರದಿಂದ ಕಂಡು, ಮಾಹಿತಿ ಪಡೆದು ಖುಷಿ ಪಟ್ಟರು.

Advertisement

ಕೀಟಗಳ ಅಸಾಮಾನ್ಯ ಶಕ್ತಿಯ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಲು ಮೂಡಿಗೆರೆಯ ತೋಟಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು 200ರಷ್ಟು ಪ್ರಭೇದಗಳ ಕೀಟಗಳೊಂದಿಗೆ ಬೇಸಗೆ ಶಿಬಿರಕ್ಕೆ ಬಂದಿದ್ದರು. ಮಕ್ಕಳು ಕೀಟಗಳನ್ನು ಮುಗಿಬಿದ್ದು ವೀಕ್ಷಿಸಿ, ಮಾಹಿತಿ ಸಂಗ್ರಹಿಸಿದರು.

ಅಪೂರ್ವ ಲೋಕ
ಕೀಟ ಜಗತ್ತಿನ ವೈವಿಧ್ಯ, ಅನನ್ಯತೆ, ವಿಶೇಷತೆಗಳನ್ನು ಶಿಬಿರಾರ್ಥಿಗಳು, ಹೆತ್ತವರು ಹಾಗೂ ಸಾರ್ವಜನಿಕರು ಕಣ್ತುಂಬಿಕೊಂಡರು. ಪರಿಸರ ಜೊತೆಗೆ ಜೀವಿಸುವ ಉಪಕಾರಿ ಕೀಟಗಳು, ಬೆಳೆ ಹಾನಿ ಕೀಟಗಳು, ಮನೆಯಲ್ಲಿರುವ ಕೀಟಗಳು, ಕಾಡಲ್ಲಿರುವ ಕೀಟಗಳು ಹೀಗೆ ನಾನಾ ಬಗೆಯ ಕೀಟಗಳು ಪ್ರದರ್ಶನದಲ್ಲಿ ಮಕ್ಕಳ ಗಮನ ಸೆಳೆದವು. ಜ್ಯುವೆಲ್‌ ಬೀಟೆಲ್‌, ಅಟಾಕ ಸೆಟ್ಲಾಸ್‌, ರೆಡ್‌ ಪಾಮ್‌ವೆಲ್‌, ಸ್ಟಿಕ್‌ ಇನ್ಸೆಕ್ಟಿವ್‌, ಲೀಫ್ ಇನ್ಸೆಕ್ಟಿವ್‌, ವೈಲ್ಡ್‌ ಸಿಲ್ಕ್, ಜೇನುಹುಳ, ಸ್ಟ್ಯಾಗ್‌ ಬೀಟೆಲ್‌, ಮಾಂಟಿಕ್‌ ಬೀಟೆಲ್‌, ಆ್ಯಂಟಿಕ್‌, ಸಿಕಾಡಾಸ್‌ ಹೀಗೆ ನೂರಾರು ಪ್ರಭೇದದ ಕೀಟಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ವಿಸ್ಮಯಕಾರಿ ಕೀಟ ಪ್ರಪಂಚದೊಳಗೆ ವಿದ್ಯಾರ್ಥಿಗಳು ಕೀಟಗಳ ವಿಶೇಷತೆ, ಅದರಿಂದಾಗುವ ಉಪಯುಕ್ತತೆ ಮತ್ತು ಅಪಾಯ ಹೇಗಿರುತ್ತದೆ ಎಂಬುದನ್ನು ತಿಳಿದು ಅಚ್ಚರಿಪಟ್ಟರು. ವಿರಳವಾಗಿರುವ ಜಿರಂಗಿ, ಬೋರಂಡಿಯಂತಹ ಕೀಟಗಳು, ರೈತರ ಬೆಳೆ ಹಾಳು ಮಾಡುವ ಕಾಯಿಕೊರಕ ಹುಳು ಮುಂತಾದ ಕೀಟಗಳು ಪ್ರದರ್ಶನಗೊಂಡವು. ಸಂಸ್ಥೆಯ ಪ್ರಾಂಶುಪಾಲೆ ದೇಚಮ್ಮ ಕೀಟ ಪ್ರಪಂಚ ಪ್ರದರ್ಶನ ಉದ್ಘಾಟಿಸಿದರು. ಸಂಚಾಲಕ ಎಂ.ಪಿ. ಉಮೇಶ್‌, ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ| ರೇವಣ್ಣ ಉಪಸ್ಥಿತರಿದ್ದರು.

ಮಕ್ಕಳಿಗೆ ಮಾಹಿತಿ ನೀಡಿ
ಕೀಟಗಳು 600 ಮಿಲಿಯನ್‌ ವರ್ಷಗಳಿಂದ ಜೀವಿಸುತ್ತಿವೆ. ಆಹಾರ ಸರಪಳಿಯ ಕೊಂಡಿಯಂತಿರುವ ಕೀಟಗಳಿಂದ ಪರಿಸರಕ್ಕೆ ಉಪಕಾರವಿದೆ ಎನ್ನುವುದನ್ನು ವಿದ್ಯಾರ್ಥಿಗಳಿಗೆ ತಿಳಿಹೇಳುವ ಅಗತ್ಯವಿದೆ. ಅಪಾಯದಲ್ಲಿರುವ ಕೀಟ ಪ್ರಪಂಚದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಅದನ್ನು ಉಳಿಸುವ ಕಾರ್ಯ ಆಗಬೇಕು.
ಡಾ| ರೇವಣ್ಣ, ಪ್ರಾಧ್ಯಾಪಕರು, ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯ

 ಕೀಟಪ್ರಪಂಚದ ಜ್ಞಾನ ಸಿಕ್ಕಿತು
ಕೀಟ ಪ್ರಪಂಚದ ವಿಸ್ಮಯ ಕಂಡು ದಂಗಾಯಿತು. ಕೀಟಗಳಿಂದ ನಮಗೆ ಎಷ್ಟು ಪ್ರಯೋಜನವಿದೆ ಎಂಬುವುದು ತಿಳಿಯಿತು. ಪರಿಸರಕ್ಕೆ ಉಪಕಾರಿಯಾದ ಕೀಟಗಳನ್ನು ಕೊಲ್ಲಬಾರದೆಂಬ ಅರಿವಾಯಿತು.
ಅಭಿಜ್ಞಾ, ಶಿಬಿರಾರ್ಥಿ

Advertisement
Advertisement

Udayavani is now on Telegram. Click here to join our channel and stay updated with the latest news.

Next