ನವದೆಹಲಿ/ಜೈಪುರ್:ಭಾರತದ ಮೇಲೆ ಆಕ್ರಮಣ ಮಾಡಲು ಸಂಚು ನಡೆಸುವ ಹಾಗೂ ಗಡಿನುಸುಳುವ ಉಗ್ರರನ್ನು ಸದೆಬಡಿಯಲಾಗುತ್ತಿದೆ. ಇದರಿಂದಾಗಿ ದೇಶದ ಹಿತಾಸಕ್ತಿ ವಿಚಾರದಲ್ಲಿ ಭಾರತ ಎಂದಿಗೂ ಯಾವುದೇ ಕಾರಣಕ್ಕೂ ರಾಜೀಯಾಗುವುದಿಲ್ಲ ಎಂಬುದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅವರು ಶನಿವಾರ(ನವೆಂಬರ್ 14, 2020) ರಾಜಸ್ಥಾನದ ಲೋಂಗೇವಾಲಾ ಗಡಿಪ್ರದೇಶದಲ್ಲಿರು ಯೋಧರನ್ನು ಭೇಟಿಯಾಗಿ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮಾತನಾಡುತ್ತ ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಈ ದೇಶದ ಯಶಸ್ಸು ಮತ್ತು ಘನತೆ ಎಲ್ಲವೂ ನಿಮ್ಮ(ಯೋಧರ) ಶಕ್ತಿ ಮತ್ತು ಪರಾಕ್ರಮದ ಮೇಲೆ ನಿಂತಿದೆ. ಎಲ್ಲಿಯವರೆಗೆ ನೀವು ಇಲ್ಲಿ ರಕ್ಷಣೆ ಮಾಡುತ್ತಿರುತ್ತೀರೋ ಅಲ್ಲಿಯವರೆಗೂ ದೇಶ ದೀಪಾವಳಿ ಹಬ್ಬದ ಆಚರಣೆ ಮುಂದುವರಿಯಲಿದೆ ಎಂದು ಜೈಸಲ್ಮೇರ್ ನಲ್ಲಿ ಯೋಧರನ್ನು ಉದ್ದೇಶಿಸಿ ಹೇಳಿದರು.
ಇದನ್ನೂ ಓದಿ:ಭಾರತದಲ್ಲಿ ಕೋವಿಡ್ 19 ಸೋಂಕು ಪ್ರಕರಣ 8.77 ಲಕ್ಷಕ್ಕೆ ಏರಿಕೆ: ಶೇ.92ರಷ್ಟು ಚೇತರಿಕೆ
ನಾನು ಈ ಸಂದರ್ಭದಲ್ಲಿ ಯೋಧರ ಪಡೆಗೆ ಮೂರು ವಿಷಯಗಳನ್ನು ಹೇಳಬೇಕಾಗಿದೆ. ಮೊದಲನೆಯದಾಗಿ ನೀವು ಹೊಸ ಕೌಶಲಗಳನ್ನು ಕಲಿಯುವುದನ್ನು ಮುಂದುವರಿಸಬೇಕು, ಎರಡನೇಯದು ಯೋಗವನ್ನು ಅಭ್ಯಾಸ ಮಾಡಬೇಕು ಮೂರನೇಯದಾಗಿ ನೀವು ನಿಮ್ಮ ಮಾತೃಭಾಷೆ ಮತ್ತು ಇಂಗ್ಲಿಷ್ ಹೊರತುಪಡಿಸಿ ಹೆಚ್ಚಿನ ಭಾಷೆಯನ್ನು ಕಲಿತುಕೊಳ್ಳಬೇಕು. ಇದರಿಂದ ಹೊಸ ದೃಷ್ಟಿಕೋನ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಹೇಳಿದರು.