Advertisement

ಕನ್ನಡ ಕೃತಿ ಅನು ವಾದವಾದರೆ ವಿಶ್ವ ಮನ್ನಣೆ

11:54 AM Jul 21, 2018 | |

ಬೆಂಗಳೂರು: ಪ್ರಾದೇಶಿಕ ಭಾಷೆಗಳ ಕೃತಿಗಳು ವಿದೇಶಿ ಭಾಷೆಗೆ ಅನುವಾದವಾಗದೇ ಭಾರತ ಎಂದರೆ ಕೇವಲ ಹಿಂದೆ ಭಾಷೆ ಎನ್ನುವ ವಾತಾವರಣ ವಿದೇಶದಲ್ಲಿ ನಿರ್ಮಾಣವಾಗಿದೆ ಎಂದು ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ. ಬಿ.ಎ.ವಿವೇಕ್‌ ರೈ ತಿಳಿಸಿದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ಣಚಂದ್ರ ತೇಜಸ್ವಿ ಅವರ “ಕರ್ವಾಲೋ’ ಕಾದಂಬರಿಯ ಜರ್ಮನ್‌ ಅನುವಾದ (Die fliegende Eidechse) ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಜರ್ಮನಿ ಸೇರಿದಂತೆ ಅನೇಕ ದೇಶಗಳಿಗೆ ಕನ್ನಡ ಎಂಬ ಭಾಷೆಯಿದೆ ಎನ್ನುವುದೇ ತಿಳಿದಿಲ್ಲ.

ವಿದೇಶದಲ್ಲಿ ಕನ್ನಡ ಎಂದರೆ ಕೆನಡಾ ಎಂದು ಕೇಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಕನ್ನಡದ ಶ್ರೇಷ್ಠ ಕೃತಿಗಳು ವಿದೇಶಿ
ಭಾಷೆಗೆ ಅನುವಾದವಾಗದಿರುವುದೇ ಎಂದರು.

ತಮಿಳಿನ ಪ್ರಸಿದ್ಧ ಕೃತಿ “ತಿರುಕ್ಕುರಳ್‌’ 82 ಭಾಷೆಗೆ ಅನುವಾದವಾಗಿದೆ. ಆದರೆ, ಸಾಹಿತ್ಯಿಕವಾಗಿ ಅಷ್ಟೇ ಮಹತ್ವ ಹೊಂದಿರುವ “ಪಂಪ ಭಾರತ’ ಕೃತಿ ಅನುವಾದಲ್ಲಿ ಹಿಂದುಳಿದಿರುವುದು ವಿಪರ್ಯಾಸ. ಸಾಹಿತ್ಯ ಹಾಗೂ ಪರಿಸರ ಚಟುವಟಿಕೆಯಲ್ಲಿ ನಿರಂತರವಾಗಿ ತೇಜಸ್ವಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರ ಸಾಹಿತ್ಯ ಕೃಷಿಗೆ ನಾಡೋಜ ಪದವಿಯನ್ನು ಹಲವು ಕುಲಪತಿಗಳು ಶಿಫಾರಸು ಮಾಡಿದರೂ ತೇಜಸ್ವಿ ಒಪ್ಪಿರಲಿಲ್ಲ. ತಾನು ಹಂಪಿ ಕನ್ನಡ ವಿವಿ ಕುಲಪತಿಯಾಗಿದ್ದಾಗ ತೇಜಸ್ವಿ ಅವರನ್ನು ನಾಡೋಜ ಪದವಿಗೆ ಒಪ್ಪಿಸುವುದಾಗಿ ಪಣ ತೊಟ್ಟಿದ್ದೆ.

ಎಷ್ಟೇ ಒತ್ತಡ ಹೇರಿದರೂ ತಾನು ವಿಫಲನಾದೆ. ಖುದ್ದು ತೇಜಸ್ವಿ ಮನೆಗೆ ಭೇಟಿ ನೀಡಿ, ಎಷ್ಟೇ ವಿನಂತಿಸಿಕೊಂಡರೂ ಯಾವುದೇ ಪದವಿ ಬೇಡ ಎಂದು ತಿರಸ್ಕರಿಸಿದರು. ಈ ಕಾರಣದಿಂದಲೇ ಸಾಹಿತ್ಯ ಲೋಕದಲ್ಲಿ ತೇಜಸ್ವಿ ಭಿನ್ನವಾಗಿ ನಿಲ್ಲುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಬಿ.ಎಲ್‌.ಶಂಕರ್‌ ಮಾತನಾಡಿ, ಪಾಶ್ಚಿಮಾತ್ಯ ದೇಶದಲ್ಲಿ ಗುಣಮಟ್ಟದ ಪುಸ್ತಕಕ್ಕೆ ಮಾರುಕಟ್ಟೆಯಿದೆ. ಆ ನಿಟ್ಟಿನಲ್ಲಿ ಕನ್ನಡದ ಅನೇಕ ಪುಸ್ತಕಗಳನ್ನು ವಿದೇಶಿ ಭಾಷೆಗಳಿಗೆ ಅನುವಾದ ಮಾಡಬೇಕಿದೆ. ಇನ್ನು ಈ ಕೆಲಸಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಧನಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಲೇಖಕಿ ರಾಜೇಶ್ವರಿ ತೇಜಸ್ವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌, ಕೃತಿಯ ಅನುವಾದಕಿ ಡಾ. ಕತ್ರೀನ್‌ ಬೈಂದರ್‌, ಮ್ಯಾಕ್ಸ್‌ ಮುಲ್ಲರ್‌ ಭವನದ ನಿರ್ದೇಶಕ ಡಾ. ಕ್ಲಾಸ್‌ ಹೇಮಿಸ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next