ಕಾಪು: ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಕೋವಿಡ್ 19 ಇಷ್ಟು ಭಯಾನಕ ಹಂತ ತಲುಪಲು ಮುಖ್ಯ ಕಾರಣ ಅಪಾಯದ ಮುನ್ಸೂಚನೆ ಸಿಕ್ಕ ಅನಂತರವೂ ಆರ್ಥಿಕ ಹಿಂಜರಿತದ ಕಾರಣ ನೀಡಿ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲು ವಿಳಂಬಿಸಿದ್ದು. ಮಿನೆಸೋಟ ರಾಜ್ಯದ ಮಿನಿಯಾಪೊಲೀಸ್ ನಗರದಲ್ಲಿ ಉದ್ಯೋಗಿಯಾಗಿರುವ ಮಗನಲ್ಲಿಗೆ ತೆರಳಿ ಅಲ್ಲಿರುವ ಕಾಪುವಿನ ಮೋಹನ್‌ದಾಸ್ ಕಿಣಿ ಅವರ ಅಭಿಪ್ರಾಯ ಇದು.
ನಿರ್ಲಕ್ಷ್ಯವೇ ಕುತ್ತು
ಕೋವಿಡ್ 19 ಹೆಚ್ಚಿರುವ ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾ ಗಳು ಹೆಚ್ಚು ಆದಾಯ ತರುವ ವಾಣಿಜ್ಯ ಕೇಂದ್ರಗಳು. ಇಲ್ಲಿಂದ ಚೀನಕ್ಕೆ ನೇರ ವಿಮಾನ ಸಂಪರ್ಕವಿದೆ. ಇಲ್ಲಿರುವ ಹೆಚ್ಚಿನ ಉದ್ದಿಮೆಗಳು ಚೀನದವರದ್ದು. ಹೀಗಾಗಿ ಸೋಂಕು ಸುಲಭವಾಗಿ ಅಮೆರಿಕಕ್ಕೆ ವ್ಯಾಪಿಸಿತು. ವಿಶ್ವದ ಅತ್ಯಂತ ಪ್ರಭಾವಿ ರಾಷ್ಟ್ರ ತಾನೆಂಬ ಅಹಂಕಾರ, ಅಸಡ್ಡೆ, ವಿಶ್ವ ಆರೋಗ್ಯ ಸಂಸ್ಥೆ ತನ್ನ ಹಿಡಿತದಲ್ಲಿದೆಯೆಂಬ ಭ್ರಮೆ ಇತ್ಯಾದಿಗಳಿಂದ ಅಮೆರಿಕ ಕೋವಿಡ್ 19ವನ್ನು ಆರಂಭದಲ್ಲಿ ಗಣ್ಯ ಮಾಡಲಿಲ್ಲ. ಅದರ ಪರಿಣಾಮ ಈಗ ಗೋಚರಿಸುತ್ತಿದೆ. ಆದರೆ ಭಾರತದಲ್ಲಿ ಕೂಡಲೇ ಪ್ರತಿಬಂಧಕ ಕ್ರಮಗಳನ್ನು ಕೈಗೊಂದ್ದರಿಂದ ಪರಿಸ್ಥಿತಿ ಕೈಮೀರಲಿಲ್ಲ.
ಲಾಕ್‌ಡೌನ್ ಜಾರಿಯಲ್ಲಿದೆ. ಜೀವನಾವಶ್ಯಕ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಸ್ಥಗಿತಗೊಂಡಿವೆ. ಜನರಿಗೆ ಖರೀದಿಯಲ್ಲಿ ಧಾವಂತವಿಲ್ಲ. ಅಗತ್ಯಕ್ಕಿಂತ ಹೆಚ್ಚು ಖರೀದಿ, ಬೆಲೆಯೇರಿಕೆ ಇಲ್ಲೂ ಇದೆ. ಆದರೆ ಶಿಸ್ತು, ಸ್ವತ್ಛತೆಯಿದೆ ಎನ್ನುವ ಕಿಣಿ, ಭಾರತದ ಮಾಧ್ಯಮಗಳು ಅಮೆರಿಕದ ಕೋವಿಡ್ 19 ಪರಿಸ್ಥಿತಿಯ ಬಗ್ಗೆ ಮಾಡುತ್ತಿರುವ ವರದಿ ಮಾತ್ರ ಊರಿನಲ್ಲಿರುವ ಸಂಬಂಧಿಕರಲ್ಲಿ ಆತಂಕ ಹುಟ್ಟಿಸುವಂತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ರಾಷ್ಟ್ರ ಕೋವಿಡ್ 19 ಗೆಲ್ಲಬೇಕಾದರೆ ಆಂತರಿಕ ಭಿನ್ನಾಭಿಪ್ರಾಯ, ಅಸಹನೆಗಳನ್ನು ಗೆಲ್ಲುವುದು ಅತೀ ಮುಖ್ಯ. ಭಾರತೀಯರೆಲ್ಲರೂ ಕಾನೂನನ್ನು ಗೌರವಿಸುವ ಮೂಲಕ ಎದುರಾಗಿರುವ ಕಂಟಕದಿಂದ ದೇಶವನ್ನು ಪಾರು ಮಾಡಬೇಕು.
– ಮೋಹನ್‌ದಾಸ್ ಕಿಣಿ ಕಾಪು
– ರಾಕೇಶ್ ಕುಂಜೂರು