Advertisement

ವಚನದಲ್ಲಿದೆ ವಿಶ್ವ ಮಾನವ ಸಂದೇಶ

11:23 AM Aug 19, 2018 | |

ವಿಜಯಪುರ: ಪ್ರತಿಯೊಂದು ವಚನಗಳಲ್ಲಿ ಪ್ರಶ್ನೆ, ಪ್ರತಿಭಟನೆ, ನಿರಾಕರಣೆ ಹಾಗೂ ಪರ್ಯಾಯದ ಅಂಶಗಳು ಅಡಕಗೊಂಡಿವೆ. ವಚನ ಸಾಹಿತ್ಯದಲ್ಲಿದ್ದ ವಿಶ್ವಮಾನವತೆ ಸಂದೇಶದಿಂದಾಗಿಯೇ ವಚನ ಸಾಹಿತ್ಯದ ಮುದ್ರಣಕ್ಕೆ ಕ್ರೈಸ್ತ ಮಿಷನರಿಗಳು ಹಿಂದೇಟು ಹಾಕಿದ್ದವು ಎಂದು ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ಬಸವರಾಜ ಸಾದರ ಅಭಿಪ್ರಾಯಪಟ್ಟರು.

Advertisement

ನಗರದ ಲಿಂಗಾಯತ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವರ್ತಮಾನದ ಆತಂಕಗಳಿಗೆ ವಚನ ಸಾಂತ್ವನ ಎಂಬ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಚನ ಸಾಹಿತ್ಯ ಒಂದು ಅದ್ಭುತವಾದ ಸಾಹಿತ್ಯ. ಅನೇಕ ವಚನಗಳನ್ನು ಅವಲೋಕಿಸಿದಾಗ ಅದರಲ್ಲೊಂದು ಪ್ರಶ್ನೆ ಇದ್ದೇ ಇರುತ್ತದೆ, ವಚನ ಸಾಹಿತ್ಯವನ್ನು ಎಳೆಎಳೆಯಾಗಿ ಹಾಗೂ ಸೂಕ್ಷ್ಮವಾಗಿ ಅವಲೋಕಿಸಿದಾಗ ಶರಣರು ಪ್ರಶ್ನೆಯನ್ನು ಕೇಳಿದರು, ನಂತರ ಆಗಿನ ಕಾಲದ ಧಾರ್ಮಿಕ ಕಂದಾಚಾರಗಳನ್ನು ಪ್ರತಿಭಟಿಸಿ, ಅವುಗಳ ನಿರಾಕರಣೆ ಮಾಡಿದರು ಎಂದರು.

ಕೇವಲ ನಿರಾಕರಣೆ ಮಾಡಿ ಅಷ್ಟಕ್ಕೆ ಬಿಡದೇ ವೈಚಾರಿಕ, ವೈಜ್ಞಾನಿಕ ಮಾರ್ಗವನ್ನು ಸೂಚಿಸಿದರು. ಈ ಎಲ್ಲ ಅಂಶಗಳ ತಳಹದಿ ಮೇಲೆ ವಚನಗಳು ರಚನೆಯಾಗಿವೆ. ಈ ನಾಲ್ಕು ಅಂಶಗಳು ಪ್ರತಿಯೊಂದು ವಚನಗಳಲ್ಲಿ ನಮಗೆ ಕಾಣಸಿಗುತ್ತವೆ ಎಂದು ವಿಶ್ಲೇಷಿಸಿದರು.

ಶರಣ ಕ್ರಾಂತಿಯ ಉಪ ಉತ್ಪನ್ನವೇ ವಚನ ಸಾಹಿತ್ಯ. ಆದರೆ ಫ್ರೆಂಚ್‌ ಕ್ರಾಂತಿ, ರಷ್ಯಾ ಕ್ರಾಂತಿಯಂತೆ ಐತಿಹಾಸಿಕವಾದ ಅಧ್ಯಯನ ಶರಣ ಕ್ರಾಂತಿಯ ಬಗ್ಗೆ ನಡೆಯದಿರುವುದು ಇಂದಿಗೂ ನನಗೆ ನೋವು ತಂದಿದೆ. ಶರಣ ಕ್ರಾಂತಿ ಬಗ್ಗೆ ಐತಿಹಾಸಿಕ ಹಿನ್ನೆಲೆಯ ಶಾಸ್ತ್ರೀಯ ಅಧ್ಯಯನ ನಡೆಯಬೇಕಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ವಚನಗುಮ್ಮಟ ಡಾ| ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯದ ಕಟ್ಟುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದರು. ಅಂತಹ ಸಂದರ್ಭದಲ್ಲಿ ಮಂಗಳೂರಿನಲ್ಲಿ ಪ್ರಸ್‌ ಆರಂಭಗೊಂಡಿದೆ ಎಂಬ ಸುದ್ದಿ ಅವರಿಗೆ ಗೊತ್ತಾಯಿತು. ಆಗ ಅವರಿಗೆ ಸಂತೋಷದ ಪಾರವೇ ಇರಲಿಲ್ಲ, ಮರುಕ್ಷಣವೇ ಮಂಗಳೂರಿಗೆ ಹೋದರು. 

ಆಗ ಕ್ರೈಸ್ತ ಮಿಷನರಿಗಳ ಪ್ರಮುಖರು ವಚನ ಸಾಹಿತ್ಯದ ಅಂಶಗಳನ್ನು ಅಧ್ಯಯನ ಮಾಡಿ ಅದರಲ್ಲಿರುವ ಉದಾತ್ತ ವಿಚಾರಗಳಿಂದ ಎಲ್ಲಿ ಕ್ರೈಸ್ತ ಧರ್ಮ ಪ್ರಚಾರಕ್ಕೆ ಹಿನ್ನೆಡೆ ಆಗುವ ಭೀತಿಯಿಂದ ಡಾ| ಹಳಕಟ್ಟಿ ಅವರು ಕೊಟ್ಟಿದ್ದ ಮುಂಗಡ ಹಣ ಮರಳಿಸಿದರು. ಈ ಒಂದು ಘಟನೆ ಸಾಕು, ಬಸವಾದಿ ಶರಣ ಸಾಹಿತ್ಯ ಸಂದೇಶದ ಕುರಿತು ಆಗಲೇ ಮೂಲಧರ್ಮಗಳಿಗೆ ಸಮಾನತೆಯ ಸಂದೇಶದ ಸಾತ್ವಿಕ ಭಯ ಹುಟ್ಟಿಸಿತ್ತು ಎಂದು ಡಾ| ಸಾದರ ವಿಶ್ಲೇಷಿಸಿದರು.

ಸಾನ್ನಿಧ್ಯ ವಹಿಸಿದ್ದ ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಡಾ| ಸಿದ್ದರಾಮ ಮಹಾಸ್ವಾಮಿಗಳು ಆಶೀವರ್ಚನ ನೀಡಿ, ವ್ಯಕ್ತ ಶಬ್ದಗಳಿಂದ ಅವ್ಯಕ್ತವಾದ ಸಂದೇಶವನ್ನು ಸಾರುವ ಅದ್ಭುತವಾದ ವಿದ್ವತ್ತು ಶರಣರಲ್ಲಿ ಇತ್ತು ಎಂದರು.
 
ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಗೌರವ ಸಲಹೆಗಾರ ಡಾ| ಗೊ.ರು. ಚನ್ನಬಸಪ್ಪ, ವೀರಶೈವ ಮಹಾಸಭೆ ಅಧ್ಯಕ್ಷ ಸಿದ್ರಾಮಪ್ಪ ಉಪ್ಪಿನ, ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ, ಮ.ಗು. ಯಾದವಾಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next