ಅಮೆರಿಕ ಹೌಸ್‌ನ ಸ್ಪೀಕರ್ ನ್ಯಾನ್ಸಿ ಅವರ ತೈವಾನ್ ಭೇಟಿ ಭಾರೀ ವಿವಾದ ಪಡೆದುಕೊಂಡಿದ್ದು, ಮತ್ತೊಂದು ಯುದ್ಧದ ಮುನ್ಸೂಚನೆ ತೋರಿಸುತ್ತಿದೆ. ಸದ್ಯ ಜಗತ್ತು ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದಿಂದಾಗಿ ನಲುಗಿ ಹೋಗಿದೆ. ಈಗ ಏನಾದರೂ ತೈವಾನ್ ಮೇಲೆ ಚೀನ ಯುದ್ಧ ಸಾರಿದರೆ, ಇಡೀ ವಿಶ್ವದ ಆರ್ಥಿಕತೆ ಮೇಲೇಳಲಾರದಂಥ ಸ್ಥಿತಿಗೆ ಹೋಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ವಿಚಿತ್ರವೆಂದರೆ, ಈಗ ತೈವಾನ್ ಚೀನದ ಅಧೀನದಲ್ಲಿಯೇ ಇದ್ದು, ಸ್ವಾಯತ್ತೆಯ ಸರಕಾರ ನಡೆಸುತ್ತಿದೆ. ಚೀನದಲ್ಲಿ ಕಮ್ಯೂನಿಸ್ಟ್ ಸರಕಾರವಿದ್ದರೆ, ತೈವಾನ್‌ನಲ್ಲಿ ಪ್ರಜಾಪ್ರಭುತ್ವ ಮಾದರಿ ಸರಕಾರವಿದೆ. ಚೀನಗಿಂತಲೂ ತೈವಾನ್‌ನಲ್ಲಿ ಜನರ ಪರಿಸ್ಥಿತಿ ಉತ್ತಮವಾಗಿದೆ. ಅಲ್ಲದೆ, ತೈವಾನ್ ಸ್ವತಂತ್ರವಾಗಿಯೇ ಬೇರೆ ಬೇರೆ ದೇಶಗಳ ಜತೆಗೆ ಉತ್ತಮ ಬಾಂಧವ್ಯ ಹೊಂದಿದೆ. ಕೆಲವು ತಾಂತ್ರಿಕ ಕಂಪೆನಿಗಳು, ತಮ್ಮ ವಸ್ತುಗಳನ್ನು ಜಗತ್ತಿನಾದ್ಯಂತ ರಫ್ತು ಮಾಡುತ್ತಿವೆ.
ಈಗ ಚೀನದ ಕಂಗೆಡಿಸಿರುವ ವಿಚಾರವೆಂದರೆ, ತೈವಾನ್ ವಿಚಾರದಲ್ಲಿ ಪದೇ ಪದೆ ಅಮೆರಿಕ ಮೂಗು ತೂರಿಸುತ್ತಿದೆ ಎಂಬುದು. ಅಲ್ಲದೆ, ಯಾವುದೇ ಕಾರಣಕ್ಕೂ ತೈವಾನ್ ತನ್ನ ಕೈತಪ್ಪಿ ಹೋಗಬಾರದು ಎಂಬ ನಿಲುವು ಅದರದ್ದು. ಹೀಗಾಗಿಯೇ ಅದು ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳಲು ತಯಾರಾಗಿದೆ.
ಇನ್ನೊಂದು ಆಯಾಮದಲ್ಲಿ ನೋಡುವುದಾದರೆ, ಮೊದಲಿನಿಂದಲೂ ತೈವಾನ್ ದೇಶ, ಚೀನದ ಕೈಯಿಂದ ಹೊರಗುಳಿಯಲು ಯತ್ನಿಸುತ್ತಲೇ ಇದೆ. ಇತಿಹಾಸವನ್ನು ನೋಡಿದರೆ, ಈ ಎರಡೂ ಭೂಭಾಗಗಳು ಒಂದಾಗಲೇ ಇಲ್ಲ. ಆದರೆ 1971ರಲ್ಲಿ ಚೀನ ಜಾರಿಗೆ ತಂದಿರುವ “ಒನ್ ಚೀನ’ ನೀತಿ, ಇತರ ಭೂಭಾಗಗಳ ಮೇಲೆ ಕಣ್ಣು ಹಾಕುವಂತೆ ಮಾಡಿದೆ. ಅಷ್ಟೇ ಅಲ್ಲ, ಟಿಬೆಟ್ ಅನ್ನು ಈಗಾಗಲೇ ನುಂಗಿಕೊಂಡಿರುವ ಅದು, ಭಾರತದ ಭೂಭಾಗಗಳ ಮೇಲೂ ಕಣ್ಣು ಹಾಕಿದೆ ಎಂಬುದು ನಗ್ನಸತ್ಯ.
ಇದೆಲ್ಲ ಸಂಗತಿಗಳನ್ನು ಬದಿಗಿಟ್ಟು ನೋಡುವುದಾದರೆ, ಈಗಾಗಲೇ ಚೀನ ಯುದ್ಧಕ್ಕೆ ಸನ್ನದ್ಧವಾಗಿರುವುದು ಕಾಣುತ್ತಿದೆ. ಮಂಗಳವಾರ ರಾತ್ರಿಯೇ, ತೈವಾನ್ ಸುತ್ತಲು ತನ್ನ ನೌಕಾದಳದ ಪರೀಕ್ಷೆ ನಡೆಸಿದೆ. ಒಟ್ಟು ಆರು ಸ್ಥಳಗಳಲ್ಲಿ ತನ್ನ ಸೇನೆಯನ್ನು ಸನ್ನದ್ಧವಾಗಿ ನಿಲ್ಲಿಸಿ ಡ್ರಿಲ್ ಮಾಡಿದೆ. ಅತ್ತ ಅಮೆರಿಕವೂ ತನ್ನ ನಾಲ್ಕು ಯುದ್ಧ ನೌಕೆಗಳನ್ನು ದಕ್ಷಿಣ ಚೀನ ಸಮುದ್ರದತ್ತ ಕಳುಹಿಸಿದೆ.
ಅಂದರೆ, ಈಗ ಚೀನ ಮತ್ತು ತೈವಾನ್ ನಡುವೆ ಯುದ್ಧವಾಗಲಿದೆ ಎಂಬುದಕ್ಕಿಂತ, ಚೀನ ಮತ್ತು ಅಮೆರಿಕ ಮಧ್ಯೆ ಸಮರವಾಗಲಿದೆ ಎಂಬುದೇ ಆತಂಕದ ವಿಚಾರ. ಏಕೆಂದರೆ ಈಗ ಯುದ್ಧ ಶುರುವಾದರೆ, ತೈವಾನ್ ಬೆನ್ನ ಹಿಂದೆ ಅಮೆರಿಕ ಮತ್ತದರ ಮಿತ್ರ ದೇಶಗಳು ಕೂಡಿಕೊಳ್ಳ ಲಿವೆ. ಅತ್ತ ಚೀನಗೆ ರಷ್ಯಾ, ಪಾಕಿಸ್ಥಾನದಂಥ ದೇಶಗಳು ಬೆಂಬಲ ಕೊಡಬಹುದು. ಆಗ, ಯುದ್ಧ ಭೀಕರವಾಗುತ್ತದೆ ಎಂಬುದಂತೂ ಸತ್ಯ.
ಆದರೆ ಈಗ ಜಗತ್ತು ಯುದ್ಧ ನೋಡುವ ಸನ್ನಿವೇಶದಲ್ಲಿ ಇಲ್ಲವೇ ಇಲ್ಲ. ಈಗಾಗಲೇ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ, ಎಲ್ಲ ಬೇಡಿಕೆ ಮತ್ತು ಪೂರೈಕೆ ವ್ಯವಸ್ಥೆಗಳು ಹದಗೆಟ್ಟು ಹೋಗಿವೆ. ಬೆಲೆ ಏರಿಕೆ ಗಗನಕ್ಕೇರಿದ್ದು, ಪೆಟ್ರೋಲಿಯಂ ವಸ್ತುಗಳು ದುಬಾರಿಯಾಗಿವೆ. ಇಂಥ ಪರಿಸ್ಥಿತಿಯಲ್ಲಿ ಪ್ರಬಲ ದೇಶಗಳ ಮಧ್ಯೆ ಯುದ್ಧವಾದರೆ, ಜಗತ್ತು ಉಳಿಯುವುದು ಅಸಾಧ್ಯ. ಹೀಗಾಗಿ, ಪರಸ್ಪರ ಮಾತುಕತೆಯಿಂದಲೇ ಸಮಸ್ಯೆ ಬಗೆಹರಿಸಿಕೊಳ್ಳುವುದು ಉತ್ತಮ.