ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಸಾಧನೆ ವಿಶ್ವವೇ ಕೊಂಡಾಡುತ್ತಿದ್ದು, ಅವರ ಜನಪರ ಯೋಜನೆ ಜನರಿಗೆ ತಿಳಿಸುವ ಕೆಲಸ ಕಾರ್ಯಕರ್ತರು ಮಾಡಬೇಕಿದೆ ಎಂದು ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಯಾದಗಿರಿ ಗ್ರಾಮೀಣ ಮಂಡಲ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಕಾರ್ಯಕರ್ತರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಇದು ಮಾನವೀಯತೆ ಮತ್ತು ಪುಣ್ಯದ ಕೆಲಸವಾಗಿತ್ತು ಎಂದರು.
ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ಕಲಬುರಗಿ-ಯಾದಗಿರಿ ಅವಳಿ ಜಿಲ್ಲೆಯ 13 ವಿಧಾನಸಭೆ ಮತಕ್ಷೇತ್ರಗಳಿಗೆ ತಮಗೆ ಬರುವ ಅನುದಾನ ಸಮನಾಗಿ ನೀಡಿದ್ದಾರೆ. ಆದ್ದರಿಂದ ನಮ್ಮ ಮತಕ್ಷೇತ್ರದಿಂದ ಅತ್ಯಧಿಕ ಮತ ಕೊಡಿಸುವ ಮೂಲಕ ಅವರ ಗೆಲುವಿಗೆ ಸಹಕರಿಸೋಣ ಎಂದರು.
ಮಾಜಿ ಶಾಸಕ ಡಾ| ವಿರಬಸಂತರಡ್ಡಿ ಮುದ್ನಾಳ ಮಾತನಾಡಿ, ಈಗಾಗಲೇ ಪಕ್ಷ ಸಂಘಟನೆ ಜವಾಬ್ದಾರಿ ಪದಾಧಿಕಾರಿಗಳಿಗೆ ನೀಡಲಾಗಿದೆ. ಪದಾಧಿಕಾರಿ ಮಟ್ಟದಲ್ಲಿ ಜನರೊಂದಿಗೆ ಪಕ್ಷ ಸದೃಢಗೊಳಿಸಬೇಕು ಎಂದರು. ಪ್ರಧಾನ ಕಾರ್ಯದರ್ಶಿ ಅರುಣ್ ಬಿನ್ನಾಡಿ ಮಾತನಾಡಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ನೇತೃತ್ವದಲ್ಲಿ ನ.19ರಂದು ನಡೆಯಲಿರುವ ಜನಸ್ವರಾಜ್ ಸಮಾವೇಶಕ್ಕೆ ಯಾದಗಿರಿ ಗ್ರಾಮೀಣ ಮಂಡಲ ಬಿಜೆಪಿ ಬೆಂಬಲತ ಗ್ರಾಪಂ ಎಲ್ಲ ಸದಸ್ಯರನ್ನು ಕರೆದುಕೊಂಡು ಬರಬೇಕು ಎಂದರು.
ಈ ಸಂದರ್ಭದಲ್ಲಿ ಯಾದಗಿರಿ ಗ್ರಾಮೀಣ ಮಂಡಲ ಉಸ್ತುವಾರಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರಡ್ಡಿ ಅಬ್ಬೆತೂಮಕುರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಂನೋರ್, ಸಿದ್ದಣ್ಣಗೌಡ ಕಾಡಂನೋರ,ದೇವರಾಜ ನಾಯಕ, ಸುರೇಶ ಅಂಬಿಗೇರ ಇದ್ದರು. ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಶಿವು ಕೊಂಕಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಗೋವಿಂದಪ್ಪ ಖಾನಾಪೂರ ನಿರೂಪಿಸಿದರು. ಮಹಮ್ಮದ್ ಖುರೇಶಿ ವಂದಿಸಿದರು.