ಬೆಳಗಾವಿ: ಅಲ್ಪಸಂಖ್ಯಾತರ ಶ್ರಯೋಭಿವೃದ್ಧಿಯ ಜೊತೆಗೆ ತ್ರಿತಲಾಕ ರದ್ದತಿಯಿಂದ ಅಲ್ಪಸಂಖ್ಯಾತ ಮಹಿಳೆಯರ ಸ್ವಾಭಿಮಾನ ಜೀವನಕ್ಕೆ ದಾರಿತೊರುವ ಮೂಲಕ ದಿಟ್ಟ ಹೆಜ್ಜೆಯಿಟ್ಟ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ ಎಂದು ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೊರ್ಚಾ ರಾಜ್ಯಾಧ್ಯಕ್ಷ ಸೈಯದ್ ಸಲಾಂ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಅಲ್ಪಸಂಖ್ಯಾತ ಮೊರ್ಚಾ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಏಳು ದಶಕಗಳಿಂದ ಮುಸ್ಲಿಮರನ್ನು ಕೇವಲ ಮತಕ್ಕಾಗಿ ಬಳಸಿಕೊಂಡು ಅವರ ಕೌಟುಂಬಿಕ ನೆಮ್ಮದಿ ಹಾಳುಮಾಡಿ ತುಷ್ಟಿಕರಣ ಮಾಡಿದ ಪಕ್ಷ ಇಂದು ಸಂಸತ್ತಿನಲ್ಲಿ ಅಧಿಕೃತ ವಿರೋಧಪಕ್ಷವಾಗಲು ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಎಲ್ಲ ಅಲ್ಪಸಂಖ್ಯಾತರು ಮೋದಿ ಅವರ ಕಾರ್ಯಕ್ಷಮತೆಯಿಂದ ಬಿಜೆಪಿಯಲ್ಲಿದ್ದಾರೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ ಮಾತನಾಡಿ, ಬಿಜೆಪಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವದನ್ನು ಅಕ್ಷರಶಃ ಜಾರಿಗೆ ತರುವ ಮೂಲಕ ವಕ್ತ ಆಸ್ತಿ ಕಬಳಿಸಿದವರಿಗೆ ಛಾಟಿ ಬೀಸಿದೆ. ಇದಲ್ಲದೆ ಅಸ್ತಿ ರಕ್ಷಣೆ ಹಾಗೂ ಹೆಚ್ಚಿನ ಅನುದಾನ ನೀಡುವ ಮೂಲಕ ಅಲ್ಪಸಂಖ್ಯಾತರ ದುಡಿಯುವ ಕೈಗೆ ಕೆಲಸ ನೀಡಿದೆ ಎಂದು ಹೇಳಿದರು.
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಮುಕ್ತಾರ ಪಠಾಣ ಮಾತನಾಡಿ, ಜಿಲ್ಲೆಯಲ್ಲಿ ಒಬ್ಬ ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ರಾಜ್ಯಾಧ್ಯಕ್ಷ ಮಾಡುವ ಮೂಲಕ ಪಕ್ಷ ಕೊಟ್ಟಿರುವ ಗೌರವಕ್ಕೆ ಜೀವನ ಪೂರ್ಣ ಈ ಋಣ ತಿರಿಸಲು ಸಾಧ್ಯವಿಲ್ಲ. ಅಧಿಕಾರ ಇಲ್ಲದೆ ಹತಾಶರಾಗಿರುವ ಕಾಂಗ್ರೆಸ್ ಈಗ ಅಧಿಕಾರಕ್ಕಾಗಿ ಅಲ್ಪಸಂಖ್ಯಾತರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟಲು ಕುತಂತ್ರ ನಡೆಸಿದೆ. ಆದರೆ ಅವರ ಈ ಕೀಳು ಕುತಂತ್ರ ಫಲಿಸುವುದಿಲ್ಲ ಎಂದು ಹೇಳಿದರು.
ಕೊವಿಡ್ ಸಂದರ್ಭದಲ್ಲಿ ಬಿಜೆಪಿ ಎಲ್ಲ ಜನರ ಪರ ನಿಂತಿದೆ. ಸಣ್ಣ ಬಿದಿ ವ್ಯಾಪಾರದಲ್ಲಿದ್ದ ಅಲ್ಪಸಂಖ್ಯಾತ ಲಕ್ಷಾಂತರ ಜನರಿಗೆ ಯಾವುದೇ ಜಾಮೀನು ಇಲ್ಲದೆ ಸಾಲ ನೀಡಿದ್ದು ಹಾಗೂ ಜನಧನ್ ಖಾತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಮಹಿಳೆಯರು ಪ್ರೋತ್ಸಾಹ ಧನ ಪಡೆದಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು. ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಮಹಮ್ಮದ್ ಸಫಿ ಜಮಾದಾರ, ಎ.ಕೆ. ಪಿರಝಾದೆ, ಶಾಲು ಪನಾಂಡಿಸ್, ಶಕೀಲ ಧಾರವಾಡಕರ ಉಪಸ್ಥಿತರಿದ್ದರು. ದಾವಲಸಾಬ್ ಛಪ್ಟಿ ಸ್ವಾಗತಿಸಿದರು. ಕಾರ್ಯಾಲಯ ಕಾರ್ಯದರ್ಶಿ ವೀರಭದ್ರಯ್ಯ ಪೂಜಾರ ವಂದಿಸಿದರು.