Advertisement

ಗುಲಾಮರಾಗುತ್ತಿದ್ದಾರೆ ಕಾರ್ಮಿಕರು

09:51 AM Aug 18, 2017 | Team Udayavani |

ಕಲಬುರಗಿ: ಕಾರ್ಮಿಕ ಕಾನೂನುಗಳ ಸುಧಾರಣೆ ಹೆಸರಿನಲ್ಲಿ ಕಾರ್ಪೋರೆಟ್‌ ಬಂಡವಾಳಿಗರನ್ನು, ಬಹುರಾಷ್ಟ್ರೀಯ ಕಂಪನಿಗಳನ್ನು ಓಲೈಸಲು ಸರ್ಕಾರ ಮುಂದಾಗಿ, ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡಲಾಗುತ್ತಿದೆ ಎಂದು ಎಐಟಿಯುಸಿ ರಾಜ್ಯಾಧ್ಯಕ್ಷ ಹಾಗೂ ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಕಾಂ| ಎಚ್‌.ವಿ.ಅನಂತ ಸುಬ್ಬರಾವ್‌ ಕಳವಳ ವ್ಯಕ್ತಪಡಿಸಿದರು. ಅವರು, ಇಲ್ಲಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಭವನದಲ್ಲಿ ಗುರುವಾರ ಹಮ್ಮಿಕೊಂಡ ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ ಕಾರ್ಯಕರ್ತರ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಖಾನೆಗಳಲ್ಲಿ ಅಗ್ಗದ ಕೂಲಿಯ ಜೀತದಾಳು ತರಬೇತುದಾರರನ್ನು ನೇಮಿಸುವುದು ಲೇಬರ್‌ ಕೋಡ್‌ ಸಂಕೇತವಾಗಿದೆ. ಇದರಿಂದ ಕಾಯಂ ಕಾರ್ಮಿಕರನ್ನು ಹಾಗೂ ಕಾರ್ಮಿಕ ಸಂಘಟನೆಗಳನ್ನು ಮೂಲೆಗುಂಪು ಮಾಡಲು ಕೇಂದ್ರ ಹೊರಟಿದೆ ಎಂದು ಆಪಾದಿಸಿದರು. ಕೇಂದ್ರ ಸಕರಾರ ಲೇಬರ್‌ ಕೋಡ್‌ ಹೆಸರಿನಲ್ಲಿ ಕಾರ್ಮಿಕರ ಎಲ್ಲ ಕಾನೂನಾತ್ಮಕ ಹಕ್ಕುಗಳನ್ನು ದಮನ ಮಾಡಿ ಕಾರ್ಮಿಕರ ಒಟ್ಟು ಆಶಯವನ್ನೇ ನಾಶ ಮಾಡಲು ಹೊರಟಿದೆ. ಒಟ್ಟಿನಲ್ಲಿ ನೇರ ನೇಮಕಾತಿಯ ಭೂತ ಹೊತ್ತು ತಿರುಗಲಾಗುತ್ತಿದೆ. ಇದರಿಂದ ಹಲವಾರು ವರ್ಷಗಳಿಂದ ಗುತ್ತಿಗೆ ಪದ್ಧತಿಯಲ್ಲಿ ಹಾಗೂ ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವ ಸಾವಿರಾರು ಕಾರ್ಮಿಕರನ್ನು ಬೀದಿಗೆ ತಳ್ಳುವ ಆಲೋಚನೆ ಅಡಗಿದೆ. ಇದು ನೇರಾ ನೇರಾ ಕಾರ್ಮಿಕರನ್ನು ಹತ್ತಿಕ್ಕಿ ನಾಶ ಮಾಡುವ ಸಂಚಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗಾರ್ಮೆಂಟ್‌ ಕಾರ್ಮಿಕರ ಮೇಲೆ ಸುಳ್ಳು ಮೊಕದ್ದಮೆ ಹೂಡಲಾಗಿದೆ. ಅವುಗಳನ್ನು ಇಲ್ಲಿಯವರೆಗೆ ಹಿಂದಕ್ಕೆ ಪಡೆದಿಲ್ಲ. ಮೆಟ್ರೋ ರೈಲು ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಸಿಐಎಸ್‌ಎಫ್‌ ಸಿಬ್ಬಂದಿಗಳನ್ನು ಶಿಕ್ಷಿಸುವ ಬದಲು ಕಾರ್ಮಿಕರ ಮೇಲೆ ಎಸ್ಮಾ ಪ್ರಯೋಗದ ಬೆದರಿಕೆ ಹಾಕಲಾಗಿದೆ. ಸಾರಿಗೆ ನಿಗಮಗಳ ಕಾರ್ಮಿಕರ ಸಮಸ್ಯೆ, ಬಿಸಿಯೂಟ ಕಾರ್ಯಕರ್ತೆಯರ, ಪೌರ ಕಾರ್ಮಿಕರ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಈ ಎಲ್ಲ ಸಮಸ್ಯೆಗಳ ವಿರುದ್ಧ ಹೋರಾಟ ರೂಪಿಸಲಾಗಿದೆ ಎಂದರು. ಕೇಂದ್ರ ಬಿಜೆಪಿ ಸರ್ಕಾರವು ಬಂಡವಾಳಶಾಹಿಗಳ ಪರ ಕೆಲಸ ಮಾಡುತ್ತಿದೆ. ಕಾರ್ಪೋರೇಟ್‌ ಕಂಪೆನಿಗಳ ಸುಮಾರು 2,84000 ಕೋಟಿ ರೂ.ಗಳ ಸಾಲ ಮನ್ನಾ ಮಾಡಿದೆ. ಭೀಕರ ಬರದಿಂದ ತತ್ತರಿಸಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡರೂ ರೈತರ ಸಾಲ ಮನ್ನಾ ಮಾಡುತ್ತಿಲ್ಲ
ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು. ಕಾರ್ಮಿಕರಿಗೆ ಕನಿಷ್ಠ ಕೂಲಿ 18000ರೂ.ಗಳನ್ನು ಕೊಡುವುದು ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಎಐಟಿಯುಸಿ ರಾಜ್ಯ ಕಾರ್ಯಾಧ್ಯಕ್ಷ ಎಚ್‌.ಕೆ. ರಾಮಚಂದ್ರಪ್ಪ ಮಾತನಾಡಿ, ಇವತ್ತು ಕೇಂದ್ರ ಸರಕಾರ ಸಂಪೂರ್ಣವಾಗಿ ಕಾರ್ಮಿಕರನ್ನು ದಮನ ಮಾಡಲು ಹೊರಟಿದೆ. ಕೇವಲ ಬಂಡವಾಳಶಾಹಿಗಳು ಹಾಗೂ ದೊಡ್ಡ ವಿದೇಶಿ ಕಂಪನಿಗಳಿಗೆ ಮಣೆ ಹಾಕುವ ನಿಟ್ಟಿನಲ್ಲಿ ಹಲವಾರು ಕಾರ್ಮಿಕ ಹೊಸ ನೀತಿಗಳನ್ನು ಜಾರಿಗೆ ತರಲು ಹೊರಟಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸಂಘಟನಾತ್ಮಕ ಹೋರಾಟದ ಅಗತ್ಯವಿದೆ ಎಂದರು. ಹಿರಿಯ ಮುಖಂಡ ಗೋಪಾಲರಾವ್‌ ಗುಡಿ, ಸಿದ್ದಪ್ಪ ಪಾಲ್ಕಿ, ರತಪ್ಪ ಜೈನ್‌, ಸಿದ್ದಣ್ಣ ಕಣ್ಣೂರ, ನಂದಪ್ಪ ಜಮಾದಾರ, ಮಾನಪ್ಪ ಇಜೇರಿ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲೂಕು ಸಮಿತಿಯ ಅಧ್ಯಕ್ಷೆ ಜಗದೇವಿ ಹುಲಿ ಹಾಗೂ ಇತರರು ಇದ್ದರು. ಎಐಟಿಯುಸಿ ಜಿಲ್ಲಾಧ್ಯಕ್ಷ ಪ್ರಭುದೇವ ಯಳಸಂಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಮಾವೇಶದಲ್ಲಿ ಹಲವು ಯೂನಿಯನ್‌ ಕಾರ್ಯಕರ್ತರು ಹಾಗೂ ಸದಸ್ಯರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next