Advertisement

ಸಂಸ್ಕೃತಿಯನ್ನು ಉಳಿಸುವ ಸಂಘದ ಕಾರ್ಯ ಶ್ಲಾಘನೀಯ: ನಳಿನ್‌

04:35 PM Jul 26, 2019 | Suhan S |

ಪುಣೆ, ಜು. 25: ಇಂದು ತುಳುನಾಡಿನಲ್ಲಿ ಸಂಸ್ಕೃತಿಯ ಬೆಳವಣಿಗೆ ಕುಂಠಿತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪುಣೆಯಲ್ಲಿ ಬಂಟರ ಸಂಘದ ಮುಖಾಂತರ ಸಂಸ್ಕೃತಿಯನ್ನು ಉದ್ಧರಿಸುವ ಕಾರ್ಯ ನಡೆಯುತ್ತಿರುವುದು ನಿಜವಾಗಿಯೂ ಅಭಿನಂದನೀಯ. ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್‌ ಶೆಟ್ಟಿ ಅವರ ದಕ್ಷ ನೇತೃತ್ವದಲ್ಲಿ ಸಮಾಜ ಬಾಂಧವರೆಲ್ಲರ ಪ್ರೀತಿ, ವಿಶ್ವಾಸ ಗಳಿಸಿ ಸಮಾಜದ ಭವನವೊಂದನ್ನು ಸುಂದರವಾಗಿ ನಿರ್ಮಾಣಗೊಳಿಸಿ ತುಳುನಾಡ ಸಂಸ್ಕೃತಿ ಮಾತ್ರವಲ್ಲ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿಯ ಪ್ರತಿಮೆಯನ್ನೂ ಗೌರವಿಸುವ ಕಾರ್ಯ ಇಲ್ಲಿ ಆಗುತ್ತಿರುವುದಕ್ಕೆ ಅಭಿಮಾನಪಡಬೇಕಾಗಿದೆ ಎಂದು ಮಂಗ ಳೂರಿನ ಸಂಸದರಾದ ನಳಿನ್‌ ಕುಮಾರ್‌ ಕಟೀಲು ನುಡಿದರು.

Advertisement

ಅವರು ಜು. 21ರಂದು ಪುಣೆ ಬಂಟರ ಸಂಘದ ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಆಶ್ರಯದಲ್ಲಿ ಶ್ರೀಮತಿ ಶಕುಂತಳಾ ಜಗನ್ನಾಥ ಶೆಟ್ಟಿ ಕಲ್ಪವೃಕ್ಷ ಸಮಾಜ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ನಡೆದ ವಾರ್ಷಿಕ ಆರ್ಥಿಕ ಸಹಾಯ ಮೇಳ, ಶೈಕ್ಷಣಿಕ ದತ್ತು ಸ್ವೀಕಾರ ಮತ್ತು ಮರಿಯಾಲೊಡೊಂಜಿ ದಿನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸಂಘದ ಮೂಲಕ ವಿದ್ಯಾದಾನ, ಅನ್ನದಾನ, ಆರೋಗ್ಯ ದಾನಗಳನ್ನು ದಾನದ ರೂಪದಲ್ಲಿ ಸಮಾಜ ಬಾಂಧವರಿಗೆ ತಲುಪಿಸುವ ಶ್ರೇಷ್ಠ ಕಾರ್ಯವಾಗುತ್ತಿರುವುದು ಹೆಮ್ಮೆಯೆನಿಸುತ್ತಿದೆ. ಇಂತಹ ಕಾರ್ಯಗೈಯ್ಯುತ್ತಿರುವ ಸಂತೋಷ್‌ ಶೆಟ್ಟಿ ಮತ್ತು ಸಂಘದ ಸಮಿತಿ ಸದಸ್ಯರೆಲ್ಲರಿಗೂ ಅಭಿನಂದನೆಗಳು ಸಲ್ಲಬೇಕಾಗಿದೆ. ಪುಣೆಯಲ್ಲಿ ಜಗನ್ನಾಥ ಶೆಟ್ಟಿಯಂತಹ ಮಹಾ ದಾನಿಗಳಿಂದ ಹತ್ತಾರು ಜನರ ಕಣ್ಣೊರೆಸುವ ಕಾರ್ಯ ಆಗುತ್ತಿದ್ದು, ಜಗತ್ತಿಗೆ ಬೆಳಕು ನೀಡುವಂತಹ ನಕ್ಷತ್ರದ ರೂಪದಲ್ಲಿ ಶ್ರೇಷ್ಠ ಸಾಧಕರಾಗಿ ಗೋಚರಿಸುತ್ತಾರೆ.

ಇಂದು ಸಂಘದ ನೆರವನ್ನು ಸ್ವೀಕರಿಸಿದ ಮಕ್ಕಳು ವಿದ್ಯಾವಂತರಾಗಿ ಭವಿಷ್ಯದಲ್ಲಿ ಸಾಧನೆಯನ್ನು ತೋರಿ ಸಮಾಜಕ್ಕೆ ಬೆಳಕಾಗಿ ಗುರುತಿಸಿಕೊಳ್ಳುವಲ್ಲಿ ಜಗನ್ನಾಥ ಶೆಟ್ಟಿಯವರಂಥಹ ಮಹಾನ್‌ ವ್ಯಕ್ತಿಗಳು ಪ್ರೇರಕರಾಗಿದ್ದಾರೆ. ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯವನ್ನು ಮಾಡಬೇಕಾದ ಅಗತ್ಯವಿದೆ. ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ನಿಜವಾಗಿಯೂ ಸಂತೋಷ ತಂದಿದೆ. ಭವಿಷ್ಯದಲ್ಲಿ ಈ ಸಂಘದ ಮೂಲಕ ಆಶೋತ್ತರಗಳು ಈಡೇರಲಿ. ಪುಣೆ ಕನ್ನಡಿಗರ ಬಹುದಿನಗಳ ಕನಸಾದ ಪುಣೆ-ಮಂಗಳೂರು ವಿಮಾನ ಸೇವೆ ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಅತಿಥಿಯಾಗಿ ಉಪಸ್ಥಿತರಿದ್ದ ಸಿಂಬಾ ಯಾಸಿಸ್‌ ಇಂಟನ್ಯಾಶನಲ್ ಯುನಿರ್ವಸಿಟಿ ಪುಣೆ ಇದರ ಕುಲಪತಿಗಳಯಾದ ಡಾ| ಶಾಂತಾರಾಮ್‌ ಬಲವಂತ್‌ ಮುಜುಂದಾರ್‌ ಮಾತನಾಡಿ, ಹಲವಾರು ಸಂಘ ಸಂಸ್ಥೆಗಳು ನನಗೆ ಗೌರವದಿಂದ ಸಮ್ಮಾನಿಸಿವೆ. ಆದರೆ ಬಂಟರ ಸಂಘದ ಇಂದಿನ ಗೌರವ ಎಲ್ಲಕ್ಕಿಂತಲೂ ಸ್ಮರಣೀಯವಾಗಿದೆ. ಬಂಟ ಸಮಾಜವೆಂದರೆ ಶ್ರೇಷ್ಠ ಸಂಸ್ಕೃತಿಯ ಆರಾಧಕರು. ಹೊಟೇಲ್ ಉದ್ಯಮದಲ್ಲಿ ಸಾಧನೆಯನ್ನು ಮಾಡುತ್ತಾ ಸಮಾಜಸೇವೆಯನ್ನೂ ಕಾಯ ಕವಾಗಿಸಿಕೊಂಡು ಕಷ್ಟದಲ್ಲಿರುವವರಿಗೆ ನೆರವಾಗುವ ಕಾರ್ಯವನ್ನೂ ಮಾಡುತ್ತಿ ರುವುದು ಸ್ತುತ್ಯರ್ಹ ಕಾರ್ಯವಾಗಿದೆ. ವಿದ್ಯೆಗೆ ಪ್ರೋತ್ಸಾಹ ನೀಡುವಂತಹ ಇಂದಿನ ಕಾರ್ಯ ಶ್ರೇಷ್ಠವಾದುದು. ಸಿಂಬಾಯಾಸಿಸ್‌ ಶಿಕ್ಷಣ ಸಂಸ್ಥೆಗೆ ಬಂಟರ ಕೊಡುಗೆ ಬಹಳಷ್ಟಿದೆ ಎಂದರು.

ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಉಪೇಂದ್ರ ಶೆಟ್ಟಿಯವರು ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಎಲ್ಲಕ್ಕಿಂತ ಶ್ರೇಷ್ಠ ದಾನ ವಿದ್ಯಾದಾನವಾಗಿದೆ. ಸಮಾಜದ ಮಕ್ಕಳಿಗೆ ಶಿಕ್ಷಣಕ್ಕೆ ನೆರವಾಗುವ ಸಂಘದ ಕಾರ್ಯ ಮೆಚ್ಚಬೇಕಾಗಿದೆ. ಇಂದು ಎಲ್ಲಾ ಕ್ಷೇತ್ರದಲ್ಲೂ ಬಂಟ ಸಮಾಜ ಯಶಸ್ಸನ್ನು ಸಾಧಿಸಿದೆ. ಆದರೆ ಆಡಳಿತಾತ್ಮಕ ಐಎಎಸ್‌, ಐಪಿಎಸ್‌ಗಳಲ್ಲಿ ಬಂಟರು ಬಹಳಷ್ಟು ಕಡಿಮೆಯೆನ್ನಬಹುದು. ಈ ಕ್ಷೇತ್ರದಲ್ಲಿ ಸಾಧನೆಗೈಯ್ಯಲು ಮಕ್ಕಳನ್ನು ಪ್ರೇರೇಪಿಸುವ ಅಗತ್ಯತೆಯಿದೆ. ನಮ್ಮ ಮಕ್ಕಳಿಗೆ ಮುಖ್ಯವಾಗಿ ತಾಳ್ಮೆಯಿಂದ ಮುನ್ನಡೆಯುವ ಅರಿವನ್ನು ರೂಢಿಸಬೇಕಾಗಿದೆ ಎಂದರು.

Advertisement

ಅತಿಥಿಯಾಗಿ ಉಪಸ್ಥಿತರಿದ್ದ ಪ್ಲಾಂಟ್ ಮೆಟಾಬೋಲಿಸಂ ಫುಡ್‌ ಸೆಕ್ಯುರಿಟಿ ಯುಎಸ್‌ಎ ಇದರ ಉಪನ್ಯಾಸಕರಾದ ಕಾಳಿದಾಸ್‌ ಶೆಟ್ಟಿ ಅವರು ಮಾತನಾಡಿ, ಪುಣೆ ಬಂಟರ ಸಂಘದ ಮೂಲಕ ಮಕ್ಕಳಿಗೆ ಶೈಕ್ಷಣಿಕ ನೆರವನ್ನು ನೀಡುವ ಕಾರ್ಯ ಉತ್ತಮ ಕಾರ್ಯವಾಗಿದೆ. ಶಿಕ್ಷಣದ ಪ್ರಗತಿಯಿಂದಾಗಿಯೇ ಇಂದು ಬಂಟ ಸಮಾಜ ಎದ್ದು ನಿಂತು ವಿವಿಧ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿ ಪ್ರಸಿದ್ದಿಯನ್ನು ಗಳಿಸಿದೆ. ವಿದ್ಯೆಗೆ ಇಂದು ವಿಫುಲವಾದ ಅವಕಾಶಗಳಿವೆ. ಉನ್ನತ ಶಿಕ್ಷಣದ ಯೋಗ್ಯ ಆಯ್ಕೆಯನ್ನು ಮಾಡಿಕೊಂಡು ಮುನ್ನಡೆದರೆ ಯಶಸ್ಸನ್ನು ಗಳಿಸಬಹುದಾಗಿದೆ ಎಂದರು.

ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಜಗನ್ನಾಥ ಶೆಟ್ಟಿ, ಉದಯಕೃಷ್ಣಯ್ಯ ಚಾರಿಟೆಬಲ್ ಟ್ರಸ್ಟ್‌ ಸ್ಥಾಪಕಾಧ್ಯಕ್ಷರಾದ ಉದಯ ಶೆಟ್ಟಿ ಮುನಿಯಾಲ್, ಉಡುಪಿಯ ಖ್ಯಾತ ನ್ಯಾಯವಾದಿ ಉಮೇಶ್‌ ಶೆಟ್ಟಿ ಕಳತ್ತೂರು, ಸಂಘದ ಉಪಾಧ್ಯಕ್ಷರಾದ ಸತೀಶ್‌ ಶೆಟ್ಟಿ, ಮೋಹನ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಗೌರವ ಕೋಶಾಧಿಕಾರಿ ವೈ. ಚಂದ್ರಹಾಸ ಶೆಟ್ಟಿ, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ನಿಟ್ಟೆ, ಜೊತೆ ಕಾರ್ಯದರ್ಶಿ ಎಚ್. ಪ್ರಶಾಂತ್‌ ಶೆಟ್ಟಿ, ಜೊತೆ ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್‌. ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಣೇಶ್‌ ಪೂಂಜಾ, ಉತ್ತರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಎಸ್‌. ಶೆಟ್ಟಿ, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರವಿ ಕೆ. ಶೆಟ್ಟಿ, ದಕ್ಷಿಣ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಂಬಿಕಾ ವಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಯಶ್‌ರಾಜ್‌ ಆರ್‌. ಶೆಟ್ಟಿ ಉಪಸ್ಥಿತರಿದ್ದರು.

ಶೈಕ್ಷಣಿಕ ಧನಸಹಾಯ ವಿತರಣೆ:

ಭವನದ ಆವರಣದಲ್ಲಿರುವ ಶಿವಾಜಿ ಪ್ರತಿಮೆಗೆ ಹಾರಾರ್ಪಣೆ ಮಾಡಲಾಯಿತು. ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನಸಹಾಯ, ದಾನಿಗಳ ನೆರವಿನಿಂದ ವಿದ್ಯಾರ್ಥಿಗಳ ದತ್ತು ಸ್ವೀಕಾರ ಕಾರ್ಯಕ್ರಮ ನಡೆಯಿತು. ಮಕ್ಕಳನ್ನು ದತ್ತು ಸ್ವೀಕರಿಸಿದ ದಾನಿಗಳನ್ನು ಸಮ್ಮಾನಿಸಲಾಯಿತು. ಅತಿಥಿಗಳನ್ನು ಸಂಘದ ಪದಾಧಿಕಾರಿಗಳು ಗೌರವಿಸಿದರು. ಸಂಘದ ಮಹಿಳಾ ವಿಭಾಗದ ಸದಸ್ಯೆಯರು ಸಿದ್ಧಪಡಿಸಿದ ತುಳುನಾಡಿನ ಸಾಂಪ್ರದಾಯಿಕ ಖಾದ್ಯಗಳನ್ನೊಳಗೊಂಡ ಸ್ನೇಹ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಪುಣೆಯ ಅಂಧ ಕಲಾವಿದರಿಂದ ಸಂಗೀತ ರಸಮಂಜರಿ ನಡೆಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ ಸ್ವಾಗತಿಸಿದರು. ಹರೀಶ್‌ ಶೆಟ್ಟಿ ಖಜನೆ, ಸುಧಾಕರ ಸಿ. ಶೆಟ್ಟಿ, ಶ್ಲೋಕಾ ಎಸ್‌. ಶೆಟ್ಟಿ ಮತ್ತು ನಯನಾ ಜೆ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.

ಪುಣೆಯ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಸಂಸದ ನಳಿನ್‌ ಕುಮಾರ್‌ ಕಟೀಲ್ ಅವರಿಗೆ ಪುಣೆಯಿಂದ ಮಂಗಳೂರಿಗೆ ವಿಮಾನಸೇವೆ ಆರಂಭಿಸಲು ಮನವಿ ಪತ್ರ ಸಲ್ಲಿಸಿದರು. ಕಾಂತಿ ಸೀತಾರಾಮ ಶೆಟ್ಟಿ ಹಾಗೂ ಪತ್ರಕರ್ತ ಕಿರಣ್‌ ಬಿ. ರೈ ಕರ್ನೂರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ಜಯಂತ್‌ ಶೆಟ್ಟಿ, ಸದಾನಂದ ಕೆ. ಶೆಟ್ಟಿ, ಕುಶಲ್ ಹೆಗ್ಡೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಹೆಚಿØನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

ಪ್ರತೀ ವರ್ಷ ಸಂಘದ ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ವತಿಯಿಂದ ಮಕ್ಕಳಿಗೆ ವಿದ್ಯೆಗೆ ಪ್ರೋತ್ಸಾಹ ನೀಡುತ್ತಿದ್ದರೂ ಈ ವರ್ಷ ಮತ್ತೂಂದು ಹೆಜ್ಜೆಯನ್ನು ಮುಂದಿಟ್ಟು ಸಮಾಜದಲ್ಲಿ ಶಾಲಾ ಫೀಸು ಕಟ್ಟಲೂ ಪರದಾಡುವ ಸ್ಥಿತಿಯಲ್ಲಿರುವ ಮಕ್ಕಳನ್ನು ಗುರುತಿಸಿ ಸಂಘದ ದಾನಿಗಳು ಅವರನ್ನು ದತ್ತು ಸ್ವೀಕರಿಸಿ ಅವರಿಗೆ ಆರ್ಥಿಕ ನೆರವನ್ನು ನೀಡುವ ಕಾರ್ಯವನ್ನು ಆರಂಭಿಸಿರುವುದು ಮಹತ್ವದ ವಿಷಯವಾಗಿದೆ. ಈ ಕಾರ್ಯಕ್ಕೆ ಬೆಂಬಲಿಸಿದ ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗಕ್ಕೆ ಹಾಗೂ ಪ್ರಾದೇಶಿಕ ಸಮಿತಿಗಳಿಗೆ ಕೃತಜ್ಞತೆಗಳು. ಸಂಘದ ಕಲ್ಪವೃಕ್ಷ ಯೋಜನೆಯಡಿಯಲ್ಲಿ ಈ ಕಾರ್ಯವನ್ನು ನಾವು ಮಾಡುತ್ತಿದ್ದೇವೆ.– ಚಂದ್ರಶೇಖರ ಶೆಟ್ಟಿ ನಿಟ್ಟೆ, ಕಾರ್ಯಾಧ್ಯಕ್ಷರು, ಪುಣೆ ಬಂಟರ ಸಂಘ ಶಿಕ್ಷಣ ಮತ್ತು ಸಾಮಾಜಿಕ ಸಮಿತಿ

ಸಂಘದ ಮಹತ್ವಾಕಾಂಕ್ಷೆಯ ಶಕುಂತಳಾ ಜಗನ್ನಾಥ ಶೆಟ್ಟಿ ಕಲ್ಪವೃಕ್ಷ ಯೋಜನೆಯಡಿಯಲ್ಲಿ ಅನ್ನದಾತ, ವಿದ್ಯಾದಾತ, ಆಶ್ರಯದಾತ, ಕ್ರೀಡಾದಾತ, ಆರೋಗ್ಯದಾತ ಎನ್ನುವ ಯೋಜನೆಗಳನ್ನು ದಾನಿಗಳ ನೆರವಿನಿಂದ ಸಮಾಜ ಬಾಂಧವರಿಗೆ ತಲುಪಿಸುವ ಕಾರ್ಯವನ್ನು ಆರಂಭಿಸಿದ್ದೇವೆ. ಅದೇ ನಿಟ್ಟಿನಲ್ಲಿ ಇಂದು ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಉದ್ದೇಶದಿಂದ ಸಮಾಜಮುಖೀ ಚಿಂತನೆಯ ಆಶಯದೊಂದಿಗೆ ವಿದ್ಯೆಗೆ ಆರ್ಥಿಕ ನೆರವನ್ನು ನೀಡಿ ಪ್ರೋತ್ಸಾಹಿಸುತ್ತಿದ್ದೇವೆ. ಇದೇ ಮಕ್ಕಳನ್ನು ದತ್ತು ಸ್ವೀಕರಿಸುವ ಮೂಲಕ ಸಂಘವು ಮುಂದಡಿಯಿಟ್ಟಿದೆ. ಇದು ಕೇವಲ ತೋರ್ಪಡಿಕೆಯ ಸಮಾಜ ಸೇವೆ ಖಂಡಿತಾ ಅಲ್ಲ. ನಮ್ಮ ಸಂಘವು ಸಮಾಜ ಬಾಂಧವರ ಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಉದ್ದೇಶವನ್ನು ಹೊಂದಿದ್ದು ಈಗಾಗಲೇ ಕಷ್ಟದಲ್ಲಿರುವವರನ್ನು ಗುರುತಿಸಿ ಅನ್ನದಾನ ಹಾಗೂ ಆರೋಗ್ಯದಾನದ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ. ಕಲ್ಪವೃಕ್ಷ ಯೋಜನೆಗೆ ಎಲ್ಲ ದಾನಿಗಳಿಗೆ ಸಂಘವು ಚಿರಋಣಿಯಾಗಿದೆ. ಭವಿಷ್ಯದಲ್ಲಿ ಸಹಕಾರ ಸಂಘದ ಮೇಲಿರಲಿ.– ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್ಬೆಟ್ಟು, ಅಧ್ಯಕ್ಷರು, ಬಂಟರ ಸಂಘ ಪುಣೆ

 

ಚಿತ್ರ-ವರದಿ :ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next