Advertisement

ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಕಾರ್ಯ ಅಭಿನಂದನೀಯ: ಪಯ್ಯಡೆ

01:35 PM Jul 30, 2019 | Team Udayavani |

ಮುಂಬಯಿ, ಜು. 29: ಹಿರಿಯರಿಂದ ಬಳುವಳಿಯಾಗಿ ಬಂದ ಸಂಸ್ಕೃತಿ-ಸಂಸ್ಕಾರ, ಸಂಪ್ರದಾಯಗಳು ಪರಿವರ್ತನೆ ಯುಗದಲ್ಲಿ ಮರೆಯಾಗುತ್ತಿದ್ದರೂ, ಯುವ ಪೀಳಿಗೆಯನ್ನು ಪಾಶ್ಚಾತ್ಯ ಸಂಸ್ಕೃತಿಯಿಂದ ರಕ್ಷಿಸುವ ಚಾತುರ್ಯ ನಾವು ಕಂಡುಕೊಂಡಾಗ ಮುಂದಿನ ತಲೆಮಾರಿನಲ್ಲಿ ಬದಲಾವಣೆಯ ಬದುಕು ಬೆಳಗಲು ಸಾಧ್ಯ. ಹಿರಿಯರ ಮೂಲ ಬದುಕು, ಧಾರ್ಮಿಕ ಆಚಾರ, ವಿಚಾರವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ನಮ್ಮ ಸಮಾಜದವರಿಂದ ಆಗಬೇಕು. ಬದಲಾಗುತ್ತಿರುವ ಬದುಕಿನಲ್ಲಿ ಇಂತಹ ಗ್ರಾಮೀಣ ಬದುಕನ್ನು ಮೆಲುಕು ಹಾಕುವ ಮೂಲಕ ನಮ್ಮ ಮಕ್ಕಳ ಬದುಕಿನಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ನುಡಿದರು.

Advertisement

ಬಂಟರ ಸಂಘ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ವತಿಯಿಂದ ಜು. 27 ರಂದು ಕಾಂದಿವಲಿ ಅವೆನ್ಯೂ ಹೊಟೇಲ್ನಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಆಟಿ ಡೊಂಜಿ ದಿನ ತುಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಾತನಾಡಿದ ಅವರು, ಗ್ರಾಮೀಣ ಬದುಕನ್ನು ಪ್ರತಿಬಿಂಬಿಸುವ ಇಂದಿನ ಈ ಕಾರ್ಯಕ್ರಮವು ಸಮಿತಿಯ ಕಾರ್ಯಾಧ್ಯಕ್ಷ ಮತ್ತು ಅವರ ತಂಡದ ಅವಿರತ ಸಂಘರ್ಷದ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮವು ನಾವು ನಮ್ಮ ಪದ್ಧತಿ, ಸಂಪ್ರದಾಯ ಉಳಿಸುವ ಸಂಕೇತವಾಗಿದ್ದು, ಇದರಿಂದ ಭವಿಷ್ಯದಲ್ಲಿ ನಮ್ಮ ಮಕ್ಕಳು ಸುಸಂಸ್ಕೃತರಾಗಿ ಬೆಳೆಯಲು ಸಾಧ್ಯ ಎಂದು ನುಡಿದರು.

ಪ್ರಾದೇಶಿಕ ಸಮಿತಿ ಪಶ್ಚಿಮ ವಲಯದ ಸಮನ್ವಯಕರಾದ ಡಾ| ಪ್ರಭಾಕರ ಶೆಟ್ಟಿ ಬೋಳ ಸಮಿತಿಯ ತುಳು ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹಳ್ಳಿ ಜೀವನದ ಅವಿಭಕ್ತ ಕುಟುಂಬ ವೈಶಿಷ್ಟ್ಯ, ಮಹತ್ವವನ್ನು ವಿವರಿಸಿದರು. ಬಂಟರ ಸಂಘ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಉಮಾಕೃಷ್ಣ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಅಚ್ಚುಕಟ್ಟಾಗಿ ಕಾರ್ಯಕ್ರಮ ಪ್ರಸ್ತುತಪಡಿಸಿದ ಮಹಿಳಾ ವಿಭಾಗಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ ಅವರು ಅಕ್ಕಿಯ ಕಲಶದಲ್ಲಿ ಕಲ್ಪತರು ವೃಕ್ಷದ ತೆನೆಸಿರಿಯನ್ನು ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿ-ಗಣ್ಯರನ್ನು ಸ್ವಾಗತಿಸಿದ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್‌. ಶೆಟ್ಟಿ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ವಿವಿಧ ಬಗೆಯ ಖಾದ್ಯವನ್ನು ತಯಾರಿಸಿದ ಮಹಿಳಾ ವಿಭಾಗದ ಸದಸ್ಯೆಯರಿಗೆ ಅಭಿನಂದನೆ ಸಲ್ಲಿಸಿದರು. ಸ್ಥಳೀಯ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಅಶೋಕ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಟಿ ತಿಂಗಳ ಮಹತ್ವವನ್ನು ವಿವರಿಸಿ ಕಾರ್ಯಕ್ರಮಕ್ಕೆ ಸಹಕರಿಸಿದ ಮಹಿಳಾ ಸದಸ್ಯೆಯರನ್ನು ಅಭಿನಂದಿಸಿದರು.

ವೇದಿಕೆಯಲ್ಲಿ ಅವೆನ್ಯೂ ಹೊಟೇಲ್ ಮಾಲಕರಾದ ರಘುರಾಮ ಶೆಟ್ಟಿ, ಬಂಟರ ಸಂಘದ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ, ಜತೆ ಕಾರ್ಯದರ್ಶಿ ಐಕಳ ಗುಣಪಾಲ್ ಶೆಟ್ಟಿ, ಬಂಟರ ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್‌ ಶೆಟ್ಟಿ, ಉಷಾ ಗೋಪಾಲ್ ಶೆಟ್ಟಿ, ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್‌ ಕಾರ್ಯದರ್ಶಿ ಡಾ| ಪಿ. ವಿ. ಶೆಟ್ಟಿ, ಸ್ಥಳೀಯ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಎಂ. ಜಿ. ಶೆಟ್ಟಿ, ಕಾರ್ಯದರ್ಶಿ ಕೊಂಡಾಡಿ ಪ್ರೇಮನಾಥ್‌ ಶೆಟ್ಟಿ, ಕೋಶಾಧಿಕಾರಿ ಗಂಗಾಧರ ಎ. ಶೆಟ್ಟಿ, ಜೋಗೇಶ್ವರಿ-ದಹಿಸರ್‌ ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ಸಂಕೇಶ್‌ ಶೆಟ್ಟಿ, ಸಂಚಾಲಕ ವಿಜಯ ಭಂಡಾರಿ, ಸಲಹೆಗಾರರಾದ ಮನೋಹರ್‌ ಎನ್‌. ಶೆಟ್ಟಿ, ವಿನೋದಾ ಡಿ. ಶೆಟ್ಟಿ, ಕೆನರಾ ಬ್ಯಾಂಕಿನ ಮಾಜಿ ಹಿರಿಯ ಅಧಿಕಾರಿ ಹಾರ್ದಿಕ್‌ ಶೆಟ್ಟಿ, ಮಹಿಳಾ ವಿಭಾಗದ ಉಪಾಧ್ಯಕ್ಷೆ ಶೈಲಜಾ ಎ. ಶೆಟ್ಟಿ, ಕೋಶಾಧಿಕಾರಿ ರೇಖಾ ವೈ. ಶೆಟ್ಟಿ, ಜತೆ ಕಾರ್ಯದರ್ಶಿ ಸರಿತಾ ಎಂ. ಶೆಟ್ಟಿ, ಜತೆ ಕೋಶಾಧಿಕಾರಿ ಯೋಗಿನಿ ಎಸ್‌. ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಶುಭಾಂಗಿ ಎಸ್‌. ಶೆಟ್ಟಿ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸ್ಥಳೀಯ ಸಮಿತಿಯ ಸದಸ್ಯತ್ವ ನೋಂದಾವಣಿ ಕಾರ್ಯಾಧ್ಯಕ್ಷ ರಘುನಾಥ್‌ ಎನ್‌. ಶೆಟ್ಟಿ, ಜತೆ ಕಾರ್ಯದರ್ಶಿ ಅಶೋಕ್‌ ಶೆಟ್ಟಿ, ಜತೆ ಕೋಶಾಧಿಕಾರಿ ಶಿಮಂತೂರು ಪ್ರವೀಣ್‌ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು, ಮಹಿಳಾ ವಿಭಾಗದ ವಿವಿಧ ಉಪಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪ್ರಾರಂಭದಲ್ಲಿ ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅನಂತರ ಮಹಿಳಾ ಸದಸ್ಯೆಯರು ತಯಾರಿಸಿದ ವಿವಿಧ ಖಾದ್ಯಗಳಿಂದ ಕೂಡಿದ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಆಟಿ ತಿಂಗಳು ಗ್ರಾಮೀಣ ಜನ ಜೀವನವನ್ನು ಸ್ತಬ್ಧಗೊಳಿಸುವ ಒಂದು ವಿಶೇಷ ಮಾಸವಾಗಿದ್ದು, ಈ ಸಮಯದಲ್ಲಿ ಎಲ್ಲ ಶುಭ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗುತ್ತದೆ. ಸಾಗುವಳಿಯ ಅನಂತರ ಉತ್ಪತ್ತಿ, ಕೆಲಸ ಇಲ್ಲದ ಈ ಸಮಯದಲ್ಲಿ ಮನೆಯಲ್ಲಿಯೇ ಬೆಳೆಸಿದ ತರಕಾರಿಗಳ ಪದಾರ್ಥಗಳನ್ನು ಉಪಯೋಗಿಸುವುದು ಸ್ವಾಸ್ಥ ಜೀವನಕ್ಕೆ ಮನೆಮದ್ದಾಗಿರುತ್ತದೆ. ಆದರೆ ಮುಂಬಯಿ ಬದುಕು ನಮ್ಮನ್ನು ಬದಲಾಯಿಸಿದೆ. ಪ್ರಸ್ತುತ ಊರಿನ ಬದುಕು ನಮಗಿಂತಲೂ ಬದಲಾಗಿ ಗ್ರಾಮೀಣ ಚಿತ್ರಣ ಮಾಯವಾಗಿಬಿಟ್ಟಿದೆ. ಇಂತಹ ಸಮಯದಲ್ಲಿ ನಾವೆಲ್ಲ ನಮ್ಮ ಬದುಕಿನ ಹಿನ್ನೆಲೆಯತ್ತ ಸಾಗುವುದು ಅನಿವಾರ್ಯವಾಗಿದೆ. ಇಂದಿನ ಕಾರ್ಯಕ್ರಮವು ಅರ್ಥಪೂರ್ಣವಾಗಿದ್ದು, ಯುವ ಪೀಳಿಗೆಗೆ ಮಾದರಿಯಾಗಿದೆ – ಮುಂಡಪ್ಪ ಎಸ್‌. ಪಯ್ಯಡೆ (ಕಾರ್ಯಾಧ್ಯಕ್ಷರು: ಬಂಟರ ಸಂಘ ಮುಂಬಯಿ ನೂತನ ಶಿಕ್ಷಣ ಯೋಜನೆ)
ಚಿತ್ರ-ವರದಿ: ರಮೇಶ್‌ ಉದ್ಯಾವರ್‌
Advertisement

Udayavani is now on Telegram. Click here to join our channel and stay updated with the latest news.

Next