ಹುಬ್ಬಳ್ಳಿ: ಅಧಿಕಾರ ಶಾಶ್ವತವಲ್ಲ ಎಂಬುದು ಗೊತ್ತಿದ್ದರೂ ಕೆಲವರು ಅದರ ದರ್ಪ ತೋರುತ್ತಿರುವುದು ವಿಪರ್ಯಾಸ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಜೆ.ಸಿ. ನಗರದ ಎಸ್‌ಜೆಎಂವಿಎಸ್ ಮಹಿಳಾ ಮಹಾವಿದ್ಯಾಲಯದ ಸಿಬ್ಬಂದಿ ಕಲ್ಯಾಣ ವಿಭಾಗದಿಂದ ಡಾ| ಮೂಜಗಂ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಲೇಜಿನ ಪ್ರಾಚಾರ್ಯ ಡಾ| ಲಿಂಗರಾಜ ಅಂಗಡಿ ಅವರ ಬೀಳ್ಕೊಡುಗೆ ಮತ್ತು “ಬುತ್ತಿ ಬಿಚ್ಚಿದಾಗ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರವೃತ್ತಿ ಮತ್ತು ನಿವೃತ್ತಿ ನಡುವೆ ನಾವು ಮಾಡುವ ಕೆಲಸ ಬಹಳ ಮುಖ್ಯ. ನಿವೃತ್ತಿ ನಂತರ ಜನ ನಮ್ಮ ಬಗ್ಗೆ ಯಾವ ಭಾವನೆ ಹೊಂದಿರುತ್ತಾರೆ ಎಂಬುದು ಮಹತ್ವದ್ದಾಗುತ್ತದೆ. ಅಧಿಕಾರ ಇದ್ದಾಗ ಕೆಲವರು ತಮ್ಮ ಕೈಕೆಳಗಿನ ಸಿಬ್ಬಂದಿಯನ್ನು ಕಟುವಾಗಿ ನೋಡಿಕೊಳ್ಳುತ್ತಾರೆ. ಅಂಥವರಿಗೆ ನೌಕರರು ಅಷ್ಟಾಗಿಯೇ ಕಾಣುತ್ತಾರೆ. ಅಧಿಕಾರ ಶಾಶ್ವತವಲ್ಲ. ನಾವು ನಡೆದುಕೊಳ್ಳುವ ರೀತಿಯಿಂದಲೇ ನಮಗೆ ಗೌರವ ಸಿಗುತ್ತದೆ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದರು.
ಸಮಾಜದಲ್ಲಿ ಎಲ್ಲ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರವೂ ಹಾದಿ ತಪ್ಪಿದೆ. ಅಧಿಕಾರಿಗಳು, ಶಿಕ್ಷಕರು ಎಚ್ಚೆತ್ತುಕೊಂಡು ತಮ್ಮ ಜವಾಬ್ದಾರಿ ನಿರ್ವಹಿಸಬೇಕಿದೆ. ಡಾ| ಲಿಂಗರಾಜ ಅಂಗಡಿಯವರಂತೆ ಎಲ್ಲರೂ ತಮ್ಮ ತಮ್ಮ ಬುತ್ತಿ ಬಿಚ್ಚಿಟ್ಟರೆ ಯಾರು ಒಳ್ಳೆಯವರೆಂಬ ಹೂರಣ ಗೊತ್ತಾಗುತ್ತದೆ. ಶಿಕ್ಷಕರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ಅದನ್ನು ಎಂದೂ ಮರೆಯಬಾರದು ಎಂದು ಹೇಳಿದರು.
ಪ್ರಾದೇಶಿಕ ಪದವಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರೊ| ಬಿಳಿಗಿರಿ ಕೃಷ್ಣಮೂರ್ತಿ ಮಾತನಾಡಿ, ರಾಜಕಾರಣಿಗಳು ಹೇಗೆ ರೂಪುಗೊಳ್ಳುತ್ತಿದ್ದಾರೆಂಬುದೆ ಬಹಳಷ್ಟು ಪ್ರಾಧ್ಯಾಪಕರು, ಉಪನ್ಯಾಸಕರು, ಶಿಕ್ಷಕರಿಗೆ ಗೊತ್ತಿಲ್ಲ. ಆದರೂ ನಿರಂತರವಾಗಿ ಪಾಠ ಮಾಡುತ್ತಿದ್ದೇವೆ. ನಾವಿಂದು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಸಮರ್ಪಣಾ ಮನೋಭಾವದ ತಳಹಾದಿ ಹಾಕಬೇಕಿದೆ ಎಂದರು.
ಮೂರುಸಾವಿರ ಮಠದ ಜಗದ್ಗುರು ಡಾ| ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎ.ಸಿ. ವಾಲಿ ಮಹಾರಾಜ, ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಶಶಿ ಸಾಲಿ, ಎಲ್. ಅಂಗಡಿ ಮೊದಲಾದವರಿದ್ದರು. ಪ್ರಾಚಾರ್ಯ ಡಾ| ಲಿಂಗರಾಜ ಅಂಗಡಿ ಅವರನ್ನು ದಂಪತಿ ಸಮೇತ ಸನ್ಮಾನಿಸಿ ಬೀಳ್ಕೊಡಲಾಯಿತು. ಸಾಹಿತಿ ಡಾ| ಜೆ.ಎಂ. ನಾಗಯ್ಯ ಅವರು ಕೃತಿ ಪರಿಚಯ ಮಾಡಿದರು. ಡಾ| ಜ್ಯೋತಿಲಕ್ಷ್ಮೀ ಡಿ.ಪಿ. ಪ್ರಾರ್ಥಿಸಿದರು. ಡಾ| ಸಿಸಿಲಿಯಾ ಡಿ’ಕ್ರೂಜ್ ಸ್ವಾಗತಿಸಿದರು. ಡಾ| ಸುಪ್ರಿಯಾ ಮಲಶೆಟ್ಟಿ ನಿರೂಪಿಸಿದರು. ಡಾ| ಶಿವಲೀಲಾ ವೈಜಿನಾಥ ವಂದಿಸಿದರು.