Advertisement
ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಒಂದೆಡೆ ಬಸವಣ್ಣನವರು ಸಾರಿದರೆ, ಇನ್ನೊಂದು ಕಡೆ ಮಾತಿನ ಬೆಲೆ ತಿಳಿದವರು ಮಾತುಗಳನ್ನು ಮನಸ್ಸು ಹಾಗೂ ಹೃದಯವೆಂಬ ತಕ್ಕಡಿಯಲ್ಲಿ ತೂಗಿ ಬಾಯಿಯಿಂದ ಹೊರಚೆಲ್ಲುವರು ಅಂದರು ಕಬೀರ್‌ದಾಸರು. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಹಾಗೂ ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬುದು ಸರ್ವಕಾಲಕ್ಕೂ ಅನ್ವಯವಾಗುವಂತಹ ನಿತ್ಯನೂತನ ಗಾದೆ ನುಡಿಗಳು. ಒಳ್ಳೆಯ ಮಾತು, ಹಿತನುಡಿಗಳಿಂದ ಪ್ರಾಣಿಗಳೂ ಆಕರ್ಷಿತ ವಾಗುತ್ತವೆ. ಆದ್ದರಿಂದ ಸದಾ ಒಳಿತು ನುಡಿಯುವುದು ಶ್ರೇಯಸ್ಕರ ಎಂದು ತಿರುವಳ್ಳುವರ್ ಹೇಳಿದರೆ, ಇನ್ನೊಂದೆಡೆ ಬಿಲ್ಲಿನಿಂದ ಹೊರಟ ಬಾಣ, ಬಾಯಿಯಿಂದ ಹೊರಟ ಮಾತು ಎಂದಿಗೂ ಹಿಂದಿರುಗುವುದಿಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ.
ನಮ್ಮ ಮಾತೇ ನಮ್ಮ ಮನಸ್ಸಿಗೆ ಹಿಡಿದ ದರ್ಪಣ. ಮನುಷ್ಯ ಎಂಥವನೆಂಬುದು ಅವನ ಆದರದಿಂದ ಅರ್ಥವಾಗುತ್ತದೆ. ಮಾನವನ ಸೌಂದರ್ಯವೂ ಅವನ ನಾಲಿಗೆಯಲ್ಲಿದೆ. ಆದ್ದರಿಂದ ನಾವಾಡುವ ಮಾತುಗಳು ಸುಜನತೆಗಳಿಂದ, ಸಭ್ಯತೆಗಳಿಂದ ತುಂಬಿರಬೇಕು. ನಮ್ಮ ನುಡಿಗಳು ಕಲ್ಲಾಗಿರದೆ ಕಲ್ಲುಸಕ್ಕರೆಯಂತಿರಬೇಕು. ಅರ್ಥಗರ್ಭಿತ ಮಾತುಗಳು ಬದುಕಿನಲ್ಲಿ ಸೊಬಗನ್ನು, ಸೊಗಸನ್ನು ತರುತ್ತವೆ. ಅಂತಹ ನುಡಿಗಳು ಸಂತೋಷದಾಯಕವಾಗಿ, ಸುರಕ್ಷಿತವಾಗಿ ಆಡಿದ ಹೋಳಿ ಆಟದ ಅನುಭವ ್ನ ಕೊಡುತ್ತವೆ.
Related Articles
Advertisement
ಮಾತು ಸಂಸ್ಕೃತಿಯ ಸಂಕೇತನಮ್ಮ ನುಡಿಗಳು ಮಾಣಿಕ್ಯದಂತೆ, ಸ್ಫಟಿಕದ ಶಲಾಕೆಯಂತೆ ಬೆಳಕು ಸೂಸುವಂತಿರಬೇಕು. ಮಾತಿನ ಮಹತ್ವವನ್ನು ಜೀರ್ಣಿಸಿಕೊಂಡವನು ತಾನು ತುಂಬಾ ತಿಳಿದವನು ಎಂಬುದನ್ನು ತೋರಿಸುವ ಕಾರ್ಯದಲ್ಲಿ ತನ್ನ ಅರೆಜ್ಞಾನವನ್ನು ಪ್ರಕಟಿಸಿ ಹಾಸ್ಯಕ್ಕೆ ಬಲಿಯಾಗುವುದಿಲ್ಲ. ತನ್ನ ಮಾತುಗಳೂ ತನ್ನ ವ್ಯಕ್ತಿತ್ವವನ್ನು, ಆದರ್ಶವನ್ನು ಅಳೆಯುವ ಅಳತೆಗೋಲು ಎಂಬ ನಿಜವನ್ನರಿತು ಹೆಜ್ಜೆ ಇಡುತ್ತಾನೆ. ಬೇಕಾದಲ್ಲಿ ಮಾತ್ರ, ತನ್ನ ತಿಳುವಳಿಕೆಯನ್ನು ವ್ಯಕ್ತಪಡಿಸಬೇಕಾದ ಸಂದರ್ಭ ಉದ್ಭವಿಸಿದಾಗ ಮಾತ್ರ ನಾಲಿಗೆಗೆ ಕೆಲಸ ಕೊಡುತ್ತಾನೆ. ಯಕ್ಷಗಾನ ಪ್ರಪಂಚದಲ್ಲಿ ತಮ್ಮ ವಾಕ್ ಸಾಮರ್ಥ್ಯದಿಂದ, ವಾಕ್ ಪ್ರೌಢಿಮೆಯಿಂದ, ವಾಕ್ ಚಾತುರ್ಯದಿಂದ ಸಭಿಕರನ್ನು ಮಂತ್ರ ಮುಗ್ಧರ ನ್ನಾಗಿಸುತ್ತಿದ್ದ ಅನೇಕ ಕಲ್ಪದ ಕಲಾವಿದರು ಇದಕ್ಕೆ ಜ್ವಲಂತ ಉದಾಹರಣೆ. ಅಂದಾಗ ಪ್ರಸಂಗಗಳನ್ನು ಅರ್ಥ ಮಾಡಿಕೊಳ್ಳದೆ, ದೊರೆತ ಅವಕಾಶವನ್ನು ತನ್ನ ಮಾನಸಿಕ ಸ್ಥಿತಿ, ಸ್ವಂತ ನಿಲುವು ಅಥವಾ ಸ್ವಹಿತಾಸಕ್ತಿಯನ್ನು ಮಾತ್ರ ಲಕ್ಷ್ಯದಲ್ಲಿರಿಸಿಕೊಂಡು ಬೊಗಳೆ ನುಡಿಗಳನ್ನಾಡುವ ಅಧಿಕ ಪ್ರಸಂಗಿಗಳನ್ನು ಯಾರೂ ಗೌರವಿಸುವುದಿಲ್ಲ. ಸಿಟ್ಟಿನ, ಅಸೂಯೆಯ, ಅಹಂಕಾರದ ಛಾಯೆ ನಮ್ಮ ಧ್ವನಿಯನ್ನು ಜೋರಾಗಿಸಿ ಅನೇಕಾನೇಕ ಹೃದಯಗಳು ನಮ್ಮಿಂದ ದೂರವಾಗುವಂತೆ ಮಾಡುತ್ತದೆ. ಆದ್ದರಿಂದ ನಾವು ಮಾತುಗಳನ್ನು ಮೆದುವಾಗಿ, ಮೃದುವಾಗಿ, ಹಿತವಾಗಿ, ಮಿತವಾಗಿ ಆಡುವುದನ್ನು ರೂಢಿಸಿಕೊಂಡರೆ ಸರ್ವರಿಗೂ ಶ್ರೇಯಸ್ಕರ. ಆದ ಕಾರಣ, ನಾವಾಡುವ ನುಡಿಗಳು ನಮ್ಮ ಸಂಸ್ಕಾರವನ್ನು, ಸಂಸ್ಕೃತಿಯನ್ನು ಪ್ರಕಟಪಡಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ ಅನುದ್ವೇಗಕರವಾಗಿ ನುಡಿಯದೆ ಶಾಂತ ರೀತಿಯಿಂದ ಮಾತಾಡುವುದು ಅತಿ ಉತ್ತಮ ಎಂಬುದನ್ನು ತಿಳಿಯೋಣ. ದುಡುಕದೆ, ಸಿಡುಕದೆ ಆಲೋಚಿಸಿ ಮಾತನಾಡುವ ಆರೋಗ್ಯಕರ ಹಾಗೂ ಒಳ್ಳೆಯ ಅಭ್ಯಾಸವನ್ನು ಬೆಳೆಸಿಕೊಂಡು ಉಳಿಸಿಕೊಳ್ಳೋಣ. ಅಖೀಲಾಂಡಕೋಟಿ ಬ್ರಹ್ಮಾಂಡನಾಯಕ ಭಗವಗ್ದೀತೆಯಲ್ಲಿ ವಾಕುÏದ್ಧಿಯ ಬಗ್ಗೆ ಸಾರಿದ ಸಂದೇಶ ಇದೇ ತಾನೆ? ಅಂದಾಗ ಮಾತಾಡಿದ ಮೇಲೆ ಪಶ್ಚಾತ್ತಾಪಪಡುವ ಪಾಮರ ರಾಗದೆ, ಯಾರೊಂದಿಗೆ ಮಾತಾಡಬೇಕು, ಯಾವಾಗ ಮಾತಾಡಬೇಕು, ಏನು ಮಾತಾಡಬೇಕು, ಏಕೆ ಮಾತಾಡಬೇಕು, ಎಷ್ಟು ಮಾತಾಡಬೇಕು, ಹೇಗೆ ಮಾತಾಡಬೇಕು ಎಂಬುದನ್ನು ಮನದಟ್ಟುಮಾಡಿಕೊಂಡ ಪಂಡಿತರಂತೆ ಬದುಕೋಣ.