ಈ ವರ್ಷಾರಂಭದ ಮಳೆಯಲ್ಲಿ ನಿನ್ನನ್ನು ತೋಯಿಸಿ, ನೆನಪುಗಳನ್ನು ಕೊಚ್ಚಿ ಕೆಡವಬೇಕೆಂದುಕೊಂಡಿದ್ದೆ. ಆಗಲೇ ಇಲ್ಲ… ಕಣ್ಣ ಹನಿಗಳು ಜಾರಿದವೇ ವಿನಃ, ಮನದೆಡೆಗಳಲ್ಲಿ ಭದ್ರವಾಗಿ ನೆಲೆನಿಂತ ನೀನು ಚೂರೂ ಕದಲಲಿಲ್ಲ..
ಈಗ ನನ್ನ ಮನೆಯ ಎತ್ತರಕ್ಕೆ ವರ್ಷಾರಂಭದ ಮಳೆ ಎಗ್ಗಿಲ್ಲದೆ ಸುರಿಯುತ್ತಿದೆ. ಎಷ್ಟು ಚೆನ್ನಾಗಿದೆ ಗೊತ್ತಾ ಪ್ರಕೃತಿ? ನೆಲ್ಲಿಕಾಯಿ ಮರದಡಿಯಲ್ಲಿ ನೀರು ಕಳೆದ ವರ್ಷಕ್ಕಿಂತಲೂ ಮೆದುವಾಗಿ ತೊಟ್ಟಿಕ್ಕುತ್ತಿದೆ. ನೀನು ಅಲ್ಲೆಲ್ಲಾ ಬರಬೇಕಾಗಿತ್ತು. ನೀನು ಕಳೆದ ವರ್ಷ ಹೇಳಿದ್ದ ಮಾತು ನೆನಪಿದೆಯಾ? “ಹೀಗೆ ಮಳೆಬಂದರೆ ನನ್ನ ನೀಳ ಜಡೆಯನ್ನು ಮಳೆಯಲ್ಲಿ ತೋಯಿಸುತ್ತೇನೆ’ ಅಂದಿದ್ದೆಯಲ್ಲಾ… ನಿನ್ನ ಮಾತುಗಳನ್ನು ಸೋನೆಯೂ ಕೇಳಿಸಿಕೊಂಡಿದೆ ಇರಬೇಕು; ಅದಕ್ಕೇ ಮಳೆ ಇಷ್ಟೊಂದು ಲಹರಿಯಲ್ಲಿ ಸುರಿಯುತ್ತಿದೆ. ನೆಲ್ಲಿ ಮರದಡಿಯಲ್ಲಿ ತುಂಬೆ, ನೆಲನೆಲ್ಲಿ, ಪಸುಪಸಿರು ಗಿಡಗಳು ಹೂಗಳನ್ನು ಅರಳಿಸಿ ಎಷ್ಟು ಚೆನ್ನಾಗಿ ನಳನಳಿಸುತ್ತಿವೆ. ಒಮ್ಮೊಮ್ಮೆ ನಾನು ಕದ್ದು ಕದ್ದು ಅದನ್ನೆಲ್ಲ ನೋಡುತ್ತಿದ್ದೆ. “ದೊಡ್ಡ ಲೂಸು ನೀನು. ನಿಜ್ವಾಗ್ಲೂ ಲೂಸು’ ಅಂತ ಮಳೆಯಲ್ಲಿ ಗಂಟಲು ಹರಿವಂತೆ ಕೂಗಿ ಹೇಳಬೇಕು ಅನಿಸುತ್ತಿತ್ತು. ದೇವರಾಣೆಗೂ ಹೇಳ್ತೀನಿ, ನಿಂಗೆ ಬಯ್ಯೋದಂದ್ರೆ ನಂಗೆಷ್ಟು ಇಷ್ಟ ಗೊತ್ತಾ. ನಾನು ನಿನ್ನನ್ನು ಅವತ್ತೇ ಕೇಳಬೇಕೆಂದುಕೊಂಡಿದ್ದೆ. ನಾನು ಅಷ್ಟೆಲ್ಲ ಬೈದರೂ ನೀನು ಪೆದ್ದು ಪೆದ್ದಾಗಿ ಸುಮ್ಮನೆ ಕುಳಿತಿರುತ್ತಿದ್ದೆಯಲ್ಲಾ.. ನಿನಗೆ ಕೋಪವೇ ಬರುವುದಿಲ್ಲವೇನು? ನಂಗೆ ಗೊತ್ತು, ನೀನು ನಂಗೆ ಮನಸ್ಸಲ್ಲೇ ಬೈದುಕೊಂಡಿರಿ¤àಯಾ ಅಂತ. ನಾನಂತೂ ಕಂಯ ಕಂಯ ಅಂತ ದಿನ ಪೂರ್ತಿ ಮಾತಾಡ್ತಿದ್ದೆ ಅಲ್ವಾ? ನಂಗೆ ನೀನಲೆª ಬೇರೆ ಯಾರು ಹೇಳ್ಕೊಳ್ಳಕ್ಕೆ ಸಿಗ್ತಿದ್ರು ಹೇಳು?
ಇತ್ತೀಚೆಗೆ ಮನೆಯಲ್ಲಿ ಫಂಕ್ಷನ್ ಇಟ್ಕೊಂಡಿದ್ರು. ಪೂಜೆಗೆ ಕೇಪುಳದ ಹೂ ಕೊಯ್ಯಲು ಅಮ್ಮನ ಜೊತೆ ಜಡಿಮಳೆಯಲ್ಲಿ ನೆಲ್ಲಿಕಾಯಿ ಮರದ ಹತ್ತಿರ ಹೋಗಿದ್ದೆ. ನೀನೆಷ್ಟು ಬಾರಿ ಮನಸ್ಸಲ್ಲಿ ಬಂದುಬಿಟ್ಟೆ ಗೊತ್ತಾ? ನಿನ್ನ ನೆನಪುಗಳು ಮನದಂಚಿನಲ್ಲಿ ಆಗಾಗ ಒತ್ತರಿಸಿ ಬಂತು. ಮಳೆಯಲ್ಲಿ ದುಃಖದ ಹೊನಲು ಉಕ್ಕಿ ಹರಿದು ಅಮ್ಮನ ಸೀರೆ ತೋಯಿಸಿತ್ತು ಗೊತ್ತಾ? ನೀನಿದ್ದರೆ, ಜೀವಕ್ಕೆ ಜೀವ ಎಂಬಂತಿದ್ದೆ. ನಿನ್ನ ಆಸೆಯಂತೆ ನಮ್ಮಿಬ್ಬರ ಹೆಸರನ್ನು ಪಸುರೆಲೆಗಳ ಮೇಲೆ ಬರೆಯಬೇಕೆಂದು ಮನಸ್ಸು ತಹತಹಿಸಿತ್ತು.
ಛೇ! ಈ ಅಂತರ್ಮುಖೀ ಭಾವಗಳು ಎಲ್ಲಿಂದ ಕೊನರುತ್ತವೋ ಗೊತ್ತಿಲ್ಲ. ಕೊಡೆ ಹಿಡಿದ ಕೈಗಳು ಮರಗಟ್ಟಿ ನಿಂತಿದ್ದವು. ನಿಂಗೆ ಹೇಳಿದ್ರೆ ಹುಚ್ಚು ಮನಸ್ಸು ಅಂತ ಬಯ್ತಿàಯೋ, ಇಲ್ಲ ಗುಗ್ಗು ಅಂತೀಯೋ ಗೊತ್ತಿಲ್ಲ. ದಿಗಂತದಾಚೆಗೆ ಲಂಗರು ಹಾಕಿದ ಮೋಡಗಳೆಡೆಯಲ್ಲಿ ನೀನೆಷ್ಟು ಬಾರಿ ಕಂಡಿದ್ದೀಯಾ ಗೊತ್ತಾ.. ಅದೇ ದುಂಡಗಿನ ಮುಖ, ನವಿನವಿರು ನಗೆ, ಇಳಿಬಿಟ್ಟಿರುವ ಕೂದಲು, ವಿಶಾಲವಾದ ಹಣೆ, ಪ್ರೀತಿಯ ಅಕ್ಷಯಪಾತ್ರೆಯಂತಿರುವ ಬಟ್ಟಲುಗಣ್ಣು… ಉಹೂn, ಕಲ್ಪಿಸಿಕೊಳ್ಳಲು ಹೊಟ್ಟೆಕಿಚ್ಚಿನ ಮಾರುತ ಅವಕಾಶವನ್ನೇ ಕೊಡುವುದಿಲ್ಲ, ಗೊತ್ತಾ?
ನೀನೇಕೆ ಸುಳಿವೂ ಕೊಡದೆ ದೂರವಾಗಿದ್ದೀಯಾ ಎಂದು ಯೋಚಿಸಿದಾಗೆಲ್ಲ ಕಣ್ಣಾಲಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಮೊನ್ನೆ ಮಳೆ ಸುರಿವಾಗ ಅಂಗಳದಲ್ಲಿ ಕೈಗಳನ್ನು ಗಾಳಿಯಲ್ಲಿ ತೇಲಾಡಿಸಿಕೊಂಡು ಮಳೆಹನಿಗಳೊಂದಿಗೆ ಮೀಯುತ್ತಿದ್ದೆ. ನೀನೇ ಮಳೆ ಹನಿಯಾಗಿ ಬಂದೆಯೇನೋ ಗೊತ್ತಿಲ್ಲ! ಮಳೆಯಲ್ಲಿ ನೆನೆದಷ್ಟೂ ಮನಸ್ಸು ಹಗುರಾಗಿದೆ. ಈ ವರ್ಷಾರಂಭದ ಮಳೆಯಲ್ಲಿ ನಿನ್ನನ್ನು ತೋಯಿಸಿ, ನೆನಪುಗಳನ್ನು ಕೊಚ್ಚಿ ಕೆಡವಬೇಕೆಂದುಕೊಂಡಿದ್ದೆ. ಆಗಲೇ ಇಲ್ಲ…ಕಣ್ಣ ಹನಿಗಳು ಜಾರಿದವೇ ವಿನಃ, ಮನದೆಡೆಗಳಲ್ಲಿ ಭದ್ರವಾಗಿ ನೆಲೆನಿಂತ ನೀನು ಚೂರೂ ಕದಲಲಿಲ್ಲ..
ನಿನ್ನ ಜೀವದೊಡೆಯ
– ವಶಿ ಸುರ್ಯ ಉಜಿರೆ