Advertisement

UV Fuison: ಮರದ ಬೆಂಚು ಮಾತನಾಡುತಿದೆ

03:03 PM Jan 25, 2024 | Team Udayavani |

ಶ್‌!!! ಸುಮ್ಮನಿರಿ. ತರಗತಿಯ ಆ ಬೆಂಚು ಮಾತನಾಡುತಿದೆ. ತಮಾಷೆ ಎನಿಸಿತೆ? ದಿನ ಬೆಳಗ್ಗೆಯಾದರೆ ತರಗತಿಯಲ್ಲಿ ಒಂದಿಷ್ಟು ಜನರ ಆಸನವಾಗಿ ಸಂಜೆ ಏರುತ್ತಿದ್ದ ಹಾಗೆ ನಾಲ್ಕು ಗೋಡೆಯ ಮಧ್ಯದಲ್ಲಿ ಬಿದ್ದಿರುವ ಒಂದು ಸಾಧಾರಣ ಮರದ ಬೆಂಚು ಹೇಗೆ ಮಾತಾನಾಡಲು ಸಾಧ್ಯ? ಖಂಡಿತವಾಗಿಯೂ ಮರದ ಬೆಂಚು ಮಾತನಾಡಬಲ್ಲದು. ಆದರೆ ಅದರ ಮಾತುಗಳು ನಮ್ಮಂತೆ ಧ್ವನಿ ಎತ್ತಿ ಆಚೆ ಬರುವುದಿಲ್ಲ.ಗಲಿಬಿಲಿ ಸಪ್ಪಳ ಮಾಡಿ ಇನ್ನೊಬ್ಬರ ಚಿತ್ತ ಕಸಿಯುವುದಿಲ್ಲ.ಬಿಟ್ಟು ಬಿಡದೇ ನಿಮಗೆಂದು ತನ್ನ ವರದಿಯ ಒಪ್ಪಿಸುವುದಿಲ್ಲ.

Advertisement

ಎಲ್ಲರ ಶಾಲಾ ಕಾಲೇಜಿನ ಬಹಳಷ್ಟು ಗಳಿಗೆಗಳು ಈ ಮರದ ಬೆಂಚಿನ ಸುತ್ತವೇ ಸುತ್ತಿರುತ್ತದೆ. ಅದು ಕೇವಲ ನಿಮಗೆ ಆಸನವಾಗದೇ ನಿಮ್ಮ ಮತ್ತು ನಿಮ್ಮ ಒಡನಾಡಿಗಳ ಕಥೆಗಳನ್ನು ಖುದ್ದಾಗಿ ಕೇಳಿಸಿಕೊಂಡಿರುತ್ತದೆ. ನಿಮ್ಮ ನಿಯಂತ್ರಣವಿಲ್ಲದ ಕೈಗೆ ಲೇಖನಿ ಜತೆಯಾದಾಗ ಅರ್ಥವಿಲ್ಲದ ಚಿತ್ರಗಳಿಗೆ ತಾನು ಸಾಕ್ಷಿಯಾಗಿರುತ್ತದೆ. ಬಹಳಷ್ಟು ಭಾರಿ ಅದೊಂದು ಮರದ ಬೆಂಚಿನ ಸಲುವಾಗಿ ನಿಮ್ಮ ನಿಮ್ಮಲ್ಲೆ ಜಗಳವೂ ಆಗಿರುತ್ತದೆ. ಎಷ್ಟೋ ಭಾರಿ ತರಗತಿ ಬೋರೆನಿಸಿದಾಗ ಹಾಸಿಗೆ ತಲೆ ದಿಂಬಿನ ಸ್ಥಾನವನ್ನೂ ವಹಿಸಿರುತ್ತದೆ.

ಈ ಮರದ ಬೆಂಚು ಅದೆಷ್ಟೋ ವರ್ಷಗಳ ಹಿಂದಿನ ಕಥೆಗಳನ್ನು ಮೂಕವಾಗಿ ಹೇಳಬಲ್ಲದು.ಆದರೆ ಇದು ಹೇಳುವ ಕಥೆಯು ಯಾವುದೋ ರಾಜವಂಶದ ಇತಿಹಾಸವಲ್ಲ. ಭೂಗೋಳಶಾಸ್ತ್ರದ ವಿಷಯವೂ ಅಲ್ಲ. ಕ್ರೆಡಿಟ್‌ ಡೆಬಿಟ್‌ ಕಾರ್ಡ್‌ಗಳ ಅಂಕಿ ಅಂಶವನ್ನು ಇದು ಕೊಡುವುದಿಲ್ಲ. ಹಲವರಿಗೆ ತಲೆ ಮೇಲೆ ಕೈ ಹೊತ್ತುಕೊಳ್ಳುವಂತೆ ಮಾಡಿದ ನ್ಯೂಟನ್‌ ಮಹಾಶಯ ಇಲ್ಲಿ ಬರುವುದಿಲ್ಲ. ರಾಜಕೀಯ ಬೂಟಾಟದ ಗದ್ದಲವನ್ನೂ ಇದು ವದರುವುದಿಲ್ಲ.ಇದು ಹೇಳುವುದು ನಿಮ್ಮದೇ ಕಥೆಗಳನ್ನು. ನಿಮ್ಮದೇ ಭಾವನೆಗಳನ್ನು.

ಡೈರೆಕ್ಟರ್‌ ಒಬ್ಬ ತನ್ನ ಡೈರಿಯಲ್ಲಿ ಹೀಗೆ ಬರೆದಿದ್ದನಂತೆ ಸಮಾಜಕ್ಕಿಂತ ತರಗತಿಯ ಬೆಂಚುಗಳು ಸಲೀಸಾಗಿ ಕಥೆ ಹೇಳಬಲ್ಲವು ಎಂದು. ನಾವು ತರಗತಿಯಲ್ಲಿ ಇರುತ್ತಿವೋ ಇಲ್ಲವೋ ಬೆಂಚುಗಳಂತೂ ತಪ್ಪದೇ ಹಾಜರಿರುತ್ತದೆ. ಮೌನವಾಗಿ ಕುಳಿತಾಗ ಒಮ್ಮೆ ಆ ಬೆಂಚುಗಳ ಕಡೆ ಕಣ್ಣಾಡಿಸಿ. ಅಲ್ಲಿ ಅತಿರಥ ಮಹಾರಾಥರ ಕಲೆಗಳು ನಿಮ್ಮನ್ನು ಸ್ವಾಗತಿಸುತ್ತದೆ. ಅಲ್ಲಿ ಒಬ್ಬ ಕವಿ, ಚಿತ್ರಕಾರ, ಯಾವುದೋ ಸಿನೆಮಾ ನಾಯಕನ ಹುಚ್ಚು ಅಭಿಮಾನಿ,ಯಾರದೋ ಪ್ರೀತಿಯಲ್ಲಿ ಬಿದ್ದ ಭಗ್ನ ಪ್ರೇಮಿ, ಕ್ರಿಕೆಟ್‌ ಆಟಗಾರ ಎಲ್ಲರ ಪ್ರತಿಭೆಗಳನ್ನು ನೀವು ನೋಡಬಹುದು. ಇಷ್ಟ ಪಟ್ಟು ಅದಕ್ಕೆ ಅಂಕ ನೀಡುವಿರೆಂದರೆ ಅಲ್ಲೇ ಪಕ್ಕದಲ್ಲೇ ಅಂಕಗಳನ್ನು ಗೀಚಬಹುದು.

ಮರದ ಬೆಂಚು ಇಂದು ನಿನ್ನೆಯ ಕಥೆಗಳಲ್ಲದೆ ಹಲವಾರು ವರ್ಷದ ಹಳೆಯ ಕಥೆಯನ್ನು ತನ್ನಲ್ಲಿ ಜೋಪಾನವಾಗಿ ಇಟ್ಟುಕೊಂಡಿರುತ್ತದೆ.ಎಲ್ಲರದು ಮೊದಲ ಪ್ರೇಮ ಲಗ್ನ ಪತ್ರಿಕೆಯಲ್ಲಿ ಮುದ್ರಿತವಾಗುವುದೋ ಇಲ್ಲವೋ ಆದರೆ ಬೆಂಚಿನ ಮೇಲಂತೂ ತಪ್ಪದೇ ಕೆತ್ತಲ್ಪಟ್ಟಿರುತ್ತದೆ. ನೀವು ಮರೆತರೂ ಬೆಂಚು ಮಾತ್ರ ಹತ್ತಾರು ವರ್ಷದಿಂದ ಜತೆಯಲ್ಲಿಯೆ ಇಟ್ಟುಕೊಂಡು ಹೊಸ ಜನರಿಗೆ ಹಳೆ ಪ್ರೇಮ ಕಥೆಯ ಪರಿಚಯ ಮಾಡಿಕೊಡುತ್ತದೆ.

Advertisement

ನೀವು ಶಿಕ್ಷಕರಿಗೆ ಕೊಟ್ಟ ಅಡ್ಡ ಹೆಸರುಗಳಿಂದ ಹಿಡಿದು ನಿಮ್ಮ ಗ್ಯಾಂಗ್‌ ಗೆ ನೀವು ಕೊಟ್ಟ ನೆನಪುಗಳು, ಸಂದೇಶ ರವಾನೆಗಳು ಎಲ್ಲವೂ ಮರದ ಬೆಂಚಿಗೆ ಗೊತ್ತು. ಅಷ್ಟೇ ಯಾಕೆ? ನಿಮ್ಮ ಪರೀಕ್ಷೆಯ ಕಾಫಿ ಪ್ರಸಂಗದ ಕುರುಹುಗಳನ್ನೂ ಕೂಡ ನೀವು ಅಲ್ಲಿ ನೋಡಬಹುದು.

ಆದರೆ ಈಗ ಮರದ ಬೆಂಚಿನ ಮಾತುಗಳು ಮೂಕವಾಗುತ್ತಿದೆ. ಮರದ ಬೆಂಚುಗಳು ಮೂಲೆ ಗುಂಪಾಗುತ್ತಿದೆ. ಆದರೆ ಇರುವ ಕೆಲವು ಮಾತ್ರ ಇನ್ನೂ ಜೀವಂತಿಕೆ ಉಳಿಸಿಕೊಂಡಿವೆ.ಹಳೆ ದಿನದ ಯಾವ ನೆನಪು ಉಳಿದಿಲ್ಲ ಎನ್ನುವವರು, ಹಳೆ ದಿನಗಳ ನೆನಪುಗಳು ಮತ್ತೆ ಸಿಗಬೇಕು ಎನ್ನುವವರು ಒಮ್ಮೆ ಆ ಬೆಂಚುಗಳ ಕಡೆ ಕಣ್ಣಾಡಿಸಿ. ಅದು ಮರೆಯದೇ ನಿಮ್ಮ ನೆನಪುಗಳನ್ನು ಜೋಪಾನವಾಗಿ ಇಟ್ಟುಕೊಂಡಿದೆ. ಹೊಸಬರೊಟ್ಟಿಗೆ ನಿಮ್ಮದೇ ಕಥೆಯ ಅರುಹುತ್ತಿದೆ. ಮತ್ತೆ ನಿಮಗಾಗಿ ಕಾಯುತ್ತಿದೆ. ಹೊಸಬರೇ.. ಶ್‌!!! ಸ್ವಲ್ಪ ಮೊಬೈಲ್‌ ಬದಿಗಿಟ್ಟು ಮೌನವಾಗಿರಿ. ಮರದ ಬೆಂಚು ಮಾತನಾಡುತ್ತಿದೆ.

-ಶಿಲ್ಪಾ ಪೂಜಾರಿ

ಎಂ.ಎಂ. ಮಹಾವಿದ್ಯಾಲಯ, ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next