ಹುಲಿ ವೇಷಕ್ಕೆ ಇರುವ ಇತಿಹಾಸ ಇಂದು ನೆನ್ನೆಯದಲ್ಲ. ಕರಾವಳಿ ಭಾಗದಲ್ಲಿರುವ ಜನರಿಗೆ ಇದರ ಕಥೆಯು ಕಥೆಯಾಗಿ ಉಳಿದಿಲ್ಲ, ಅದು ಭಾವನೆಯಾಗಿ, ಜೀವನದ ಭಾಗವಾಗಿದೆ. ಕರಾವಳಿಯ ಎಲ್ಲರ ಮನಸ್ಸಲ್ಲೂ ಹುಲಿವೇಷಕ್ಕೊಂದು ವಿಶೇಷ ಸ್ಥಾನವಿದೆ.
ಆದರೂ, ಹುಲಿವೇಷದ ಹಿಂದಿನ ಕಥೆ ಮತ್ತು ಅದರ ಮಹತ್ವ ಎಲ್ಲ ಜನರಿಗೆ ತಿಳಿದಿಲ್ಲ ಎನ್ನುವುದು ವಿಪರ್ಯಾಸದ ಸಂಗತಿ.
ಒಬ್ಬಳು ತಾಯಿ ತನ್ನ ಮಗನಿಗೆ ನಿಲ್ಲಲು, ನಡೆಯಲು ಆಗದಿದ್ದಾಗ ತನ್ನ ಮಗನ ಕಷ್ಟಗಳನ್ನು ನೋಡಿ ಬೇಸತ್ತು ಜಗನ್ಮಾತೆಯ ಮೊರೆ ಹೋಗುತ್ತಾಳೆ. ಇಂದು ರಾತ್ರಿ ಕಳೆದು ಬೆಳಕು ಹರಿಯುವಾಗ ತನ್ನ ಮಗ ಎದ್ದು ನಿಂತು ನಡೆಯುವಂತಾಗಬೇಕು. ಹೀಗೆ ನೀನು ಮಾಡಿದರೆ ಮಗನಿಗೆ ಹುಲಿಯ ಮೇಲ್ಬಣ್ಣ ಹೋಲುವ ಬಣ್ಣವನ್ನು ಹಚ್ಚಿ ತಾನು ತಾಸೆಯನ್ನು ಬಡಿದು ಜಗನ್ಮಾತೆಯ ಮುಂದೆ ಹುಲಿನೃತ್ಯ ಮಾಡಿಸುತ್ತೇನೆ ಎಂದು ತನ್ನೊಳಗಿದ್ದ ನೋವು, ಹತಾಶಗಳನ್ನು ಜಗನ್ಮಾತೆಯ ಕಾಲಕೆಳಗೆ ಹಾಕಿ ಎಲ್ಲಾ ಸರಿಯಾಗಬಹುದು ಎನ್ನುವ ನಂಬಿಕೆಯಿಂದ ಹಿಂತಿರುಗುತ್ತಾಳೆ.
ಮರು ದಿವಸ ತನ್ನ ಮಗ ಎದ್ದು ನಡೆಯುತ್ತಿರುವುದನ್ನು ಕಂಡು ಖುಷಿಯಿಂದ ಕಣ್ತುಂಬಿಸಿ ತಾನು ಜಗನ್ಮಾತೆಗೆ ಹೇಳಿದ ಹಾಗೆ ಹುಲಿ ವೇಷ ಹಾಕಿ ನೃತ್ಯ ಮಾಡಿಸುತ್ತಾಳೆ. ಅಂದಿನಿಂದ ಇಂದಿನವರೆಗೆ ಮಂಗಳಾದೇವಿಯ ನೆಲೆಯಲ್ಲಿ ವರ್ಷಪ್ರತಿ ಹರಕೆಯ ಹುಲಿ ವೇಷಗಳು ನಡೆಯುತ್ತಿವೆ. ಅಂದಿನಿಂದ ಇಂದಿನವರೆಗೆ ಮೊದಲು ಹುಲಿವೇಷವನ್ನು ಹರಕೆಯ ರೂಪದಲ್ಲಿ ಹಾಕುವುದು ಎನ್ನುವ ಪ್ರತೀತಿಯಿದೆ.ಹುಲಿವೇಷ ಮಂಗಳಾದೇವಿಯ ಸೀಮೆಗೆ ಮಾತ್ರ ಸೀಮಿತವಾಗಿಲ್ಲ ಕರಾವಳಿಯ ಎಲ್ಲ ಭಾಗದಲ್ಲೂ ಮಾರ್ನೆಮಿ ಸಮಯದಲ್ಲಿ ಹುಲಿ ವೇಷ ಕಾಣಸಿಗುತ್ತದೆ. ಹುಲಿ ವೇಷಕ್ಕೆ ತನ್ನದೇ ಆದ ಶೈಲಿ ಇದೆ. ಹಿರಿಯರು ಕಿರಿಯರು ಎನ್ನುವ ಭೇದವಿಲ್ಲದೆ ಮೈ ಮೇಲೆ ಒಮ್ಮೆ ಬಣ್ಣ ಬಿದ್ದರೆ ಸಾಕು ಸುಸ್ತಿನ ಮಾತಿಲ್ಲದೆ ಬೆಳಕಿನಿಂದ ಸಂಜೆಯವರೆಗೆ ಹೆಜ್ಜೆ ಹಾಕಬೇಕು.
ಆದರೆ ಇತ್ತೀಚಿನ ದಿನಗಳಲ್ಲಿ ಹುಲಿ ವೇಷದ ಶೈಲಿಯೊಂದಿಗೆ ಬೇರೆ ನೃತ್ಯ ಪ್ರಕಾರಗಳನ್ನು ಸೇರಿಸಿ ಕುಣಿಯುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ?ಇಂತಹ ಕೆಲಸವನ್ನು ಎಲ್ಲರೂ ಮಾಡುತ್ತಿಲ್ಲ. ಒಂದಷ್ಟು ಜನ ಮಾಡುತ್ತಾರೆ. ಅವರನ್ನು ಪ್ರಶ್ನಿಸದಿದ್ದರೆ ಮುಂದೊಂದು ದಿನ ನೂರರಷ್ಟು ಆಗುವುದಂತೂ ಕಟ್ಟಿಟ್ಟ ಬುತ್ತಿ. ಮನೋರಂಜನೆಗಾಗಿ ಜಗತ್ತಿನಲ್ಲಿ ಹಲವಾರು ನೃತ್ಯ ಪ್ರಕಾರಗಳಿವೆ ಆದರೆ ಕರಾವಳಿಗರ ಭಾವನೆಯಾಗಿರುವ ಹುಲಿವೇಷವು ಬರೀ ಮನರಂಜನೆಯಾಗದೆ ತನ್ನ ಮಹತ್ವವನ್ನು ಕಳೆದುಕೊಳ್ಳದಿರಲಿ ಎನ್ನುವುದೇ ಕರಾವಳಿಗರ ಆಶಯ.
-ರಮಿತ ರೈ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ