ಸಿರುಗುಪ್ಪ: ನಗರದಲ್ಲಿ ಮಂಗಳವಾರ ಶ್ರೀಶಂಭುಲಿಂಗೇಶ್ವರಸ್ವಾಮಿ ಮಡಿತೇರು ಎಳೆದು ಮಹಿಳೆಯರು ಸಂಭ್ರಮಿಸಿದರು.ರಥೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಗಿನ ಜಾವ ಬ್ರಾಹ್ಮಿ ಮುಹೂìತದಲ್ಲಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಅಗ್ನಿ ಕುಂಡದಲ್ಲಿ ಅಗ್ನಿ ಪುಟರಾಧನೆ ನಡೆಯಿತು.
ಶಂಭುಲಿಂಗೇಶ್ವರನ ಉದ್ಭವ ಲಿಂಗಕ್ಕೆ ಮಹಾ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಶತನಾಮಾವಳಿ ಪಠಣ ಕಾರ್ಯಕ್ರಮಗಳು ನಡೆದವು.
ಶಂಭುಲಿಂಗೇಶ್ವರನಿಗೆ ಆಭರಣ, ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಕಾಶಿ ವೇಷ ಧರಿಸಿದ ಬಸವಯ್ಯ ವೀರಭದ್ರ ದೇವರ ಒಡಪುಗಳನ್ನು ಹೇಳುತ್ತಾ ಸಮೇಳ, ಮಂಗಳವಾದ್ಯಗಳೊಂದಿಗೆ ದೇವರ ಉತ್ಸವ ಮೂರ್ತಿಗಳನ್ನು ತುಂಗಭದ್ರಾ ನದಿ ತೀರದಲ್ಲಿ ಗಂಗೆಪೂಜೆ ನೆರವೇರಿಸಿದರು. ಬಳಿಕ, ದೇವರ ಉತ್ಸವ ಮೂರ್ತಿ ಹೊತ್ತ ಅರ್ಚಕರು ಸೇರಿದಂತೆ ಭಕ್ತರು ಅಗ್ನಿ ಕುಂಡದಲ್ಲಿ ನಡೆದು ಹರಕೆ ತೀರಿಸಿದರು. ಬಳಿಕ, ದೇವಸ್ಥಾನದ ಆವರಣದಲ್ಲಿ ಎದುರು ಬಸವ ಮಂಟಪದವರೆಗೆ ದೇವರ ಉತ್ಸವ ಮೂರ್ತಿಯನ್ನು ಮಡಿತೇರಿನಲ್ಲಿ ಪ್ರತಿಷ್ಠಾಪಿಸಿ ಮಹಿಳೆಯರು ಮಡಿತೇರು ಎಳೆದರು.
ಐತಿಹಾಸಿಕ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷ ಚೈತ್ರಮಾಸದ ದವನ ಹುಣ್ಣಿಮೆಯಂದು ಶಂಭುಲಿಂಗೇಶ್ವರಸ್ವಾಮಿ
ರಥೋತ್ಸವ ನಡೆಯುತ್ತದೆ.