Advertisement

ಬೀಳುವ ಆತಂಕದ ಮನೆಯಲ್ಲಿ  ದಿನಕಳೆಯುತ್ತಿರುವ ಮಹಿಳೆ

06:00 AM Jul 10, 2018 | Team Udayavani |

ಕುಂದಾಪುರ: ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ವಿಧವೆ ಮಹಿಳೆಯೊಬ್ಬರು ಹಾವು ಚೇಳಿನೊಟ್ಟಿಗೆ ಬದುಕು ಸಾಗಿಸುತ್ತಿದ್ದಾರೆ.ವಿದ್ಯುತ್‌ ಇಲ್ಲದ ಸೀಮೆಎಣ್ಣೆ  ದೀಪದ ಬೆಳಕು ಇವರ ಬಾಳಿಗೆ ಬೆಳಕು ಹರಿಸಲಿಲ್ಲ. ಸರಕಾರದ ಹತ್ತಾರು ಭಾಗ್ಯಗಳು ಕೂಡಾ ಇವರಿಗೆ ನೆರವಾಗಿಲ್ಲ. 

Advertisement

ಈಗಲೋ ಆಗಲೋ ಬೀಳಬಹುದು ಎನ್ನುವ ಮನೆ, ಮಣ್ಣಿನ ಗೋಡೆಗೆ ಮಳೆ ನೀರು ಸಿಡಿದು ಬಿರುಕುಬಿಟ್ಟ ಗೋಡೆ, ಗೋಡೆ ಬುಡದಲ್ಲಿ ಹೆಗ್ಗಣ ಕೊರೆದ ಬಿಲ. ಇಡೀ ಮನೆ ವಾತಾವರಣ ಭಯ ಬೀಳಿಸುತ್ತದೆ. ಕುಂದಾಪುರ ಪುರಸಭೆ ಕೋಡಿ ವಾರ್ಡ್‌ನಲ್ಲಿ ವಾಸಿಸುತ್ತಿರುವ ಲಕ್ಷ್ಮೀ ದೇವಿ ಪೈ ಯಾನೆ ಪ್ರೇಮಲತಾ ಎಂಬವರ ಮನೆ ಬದುಕು ಎಲ್ಲವೂ ಸಾಹಸ. ಬೇರೆಯವರ ಮನೆಯಲ್ಲಿ ಮನೆ ಕೆಲಸ ಮಾಡಿ ಮನೆಗೆ ಬಂದರೆ ಮನೆ ಎಲ್ಲಿ ಕುಸಿಯುತ್ತದೋ ಎಂಬ ಭಯದಲ್ಲಿ ರಾತ್ರಿ ಕಳೆಯಬೇಕು. ಮಳೆ ನೀರು ಒಳ ಬಾರದಂತೆ ಮಾಡಿಗೆ ಟರ್ಪಾಲ್‌ ಹೊದೆಸಿದ್ದು, ಮಳೆ ನೀರು ಮನೆ ಒಳಗೆ ಜಿನುಗದಿದ್ದರೂ, ಗೋಡೆಗೆ ಮಳೆನೀರು ಎರಚಿ ಬೀಳುವ ಸ್ಥಿತಿಯಲ್ಲಿದೆ. ಕಲ್ಲುಗಳು ಕಳಚಿಕೊಳ್ಳುವ ಸ್ಥಿತಿ ಇದೆ. ಮನೆಯ ಕಿಟಕಿಗಳಿಗೆ ಬಾಗಿಲೇ ಇಲ್ಲ! ಮನೆಯೊಳಗೆ ಹಾವು ಬರುವುದೂ ಉಂಟು. ಒಟ್ಟಾರೆ ಲಕ್ಷ್ಮೀ ದೇವಿ ಅಂಗೆ„ಯಲ್ಲಿ ಜೀವ ಹಿಡಿದು ಬದುಕುತ್ತಿದ್ದಾರೆ.
 
ಸಮಾಜ ಸ್ಪಂದಿಸಬೇಕಾಗಿದೆ…
ಲಕ್ಷ್ಮೀ ದೇವಿ ಹುಟ್ಟೂರು ಮೂಡಬಿದಿರೆ. ತವರು ಮನೆಯಲ್ಲಿ ಸುಖವಾಗಿದ್ದುದು ಬಿಟ್ಟರೆ ವೈವಾಹಿಕ ಬದುಕು ಕಷ್ಟಕೋಟಲೆಗಳ ಸರಮಾಲೆ. ಪತಿ ದಿಣಮಂಜುನಾಥ ಪೈ. ಮದುವೆ ನಂತರ ಲಕ್ಷ್ಮೀ  ಅವರು ಕೋಡಿಯಲ್ಲಿ ನೆಲೆಸಿದರು. ಪತಿ ಮೊದಲು ಅಡುಗೆ ವೃತ್ತಿ ಮಾಡಿಕೊಂಡಿದ್ದು, ಅನಂತರ ಖಾಸಗಿ ಅಂಗಡಿಯೊಂದರ ಭದ್ರತಾ ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಕಾಡಿದ ಅನಾರೋಗ್ಯ ಪತಿಯ ಕೆಲಸವನ್ನೇ ನುಂಗಿ ಹಾಕಿತು. ಎಂಟು ವರ್ಷ ಮಂಜುನಾಥ ಪೈ ಕುರ್ಚಿಯಲ್ಲಿ ಬಂಧಿಯಾದರು. ಪತಿಯ ಜವಾಬ್ದಾರಿ ಕೂಡಾ ಮಕ್ಕಳಿಲ್ಲದ ಲಕ್ಷ್ಮೀ ದೇವಿ ಮೇಲೆ ಬಿತ್ತು. ಆದರೂ ಧೃತಿಗೆಡದೆ,ಬೀಡಿಕಟ್ಟಿ, ಯಾರ್ಯಾರಧ್ದೋ ತೋಟದಲ್ಲಿ ಬಿದ್ದ ತೆಂಗಿನ ಮಡಿಲು ಆಯ್ದು ಹಿಡಿಸೂಡಿ ಕಟ್ಟಿ ಜೀವನ ನಿರ್ವಹಣೆ ಜತೆ ಪತಿ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು. ಮೂರು ವರ್ಷದ ಹಿಂದೆ ಪತಿ  ನಿಧನರಾಗಿದ್ದು ಈಗ ಕುಂದಾಪುರದಲ್ಲಿ ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸರಕಾರದಿಂದ ವಿಧವಾ ವೇತನ ಬರುತ್ತಿದೆ. 

ಪುರಸಭೆಗೆ ನೆರವಿಗೆ ಮನವಿ
ಕುಂದಾಪುರದಲ್ಲಿ ಕಳೆದ ಮೂರು ವರ್ಷದಿಂದ ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ರಾತ್ರಿ ಮನೆಯಲ್ಲಿ ಉಳಿಯುತ್ತೇನೆ. ಮನೆ ಮಾಡು ಸೋರುತ್ತಿದ್ದರಿಂದ ಮಳೆಗಾದಲ್ಲಿ ಬೀಳಬಾರದು ಎಂದು ಟರ್ಪಾಲ್‌ ಹೊದಿಸಿದ್ದು, ಮಣ್ಣಿನಗೋಡೆ ಆಗಿದ್ದರಿಂದ ಮಳೆ ನೀರು ಸಿಡಿದು ಇಡೀ ಗೋಡೆಗೆ ಥಂಡಿ ಆವರಿಸಿದ್ದರಿಂದ ಗೋಡೆ ಬೀಳುವ ಸ್ಥಿತಿಯಲ್ಲಿದೆ. ಪುರಸಭೆ ಯಾವುದಾದರೂ ಯೋಜನೆಯಲ್ಲಿ ಮನೆ ಮಂಜೂರು ಮಾಡಿದರೆ, ನನ್ನ ಮನೆಯಲ್ಲಿ ನೆಮ್ಮದಿಯ ಗಂಜಿ ಕುಡಿಯುತ್ತೇನೆ. 
– ಲಕ್ಷ್ಮೀ ದೇವಿ ಪೈ, ಶಿಥಿಲ ಮನೆಯಲ್ಲಿ ವಾಸಮಾಡುತ್ತಿರುವ ಹಿರಿಯ ಮಹಿಳೆ

Advertisement

Udayavani is now on Telegram. Click here to join our channel and stay updated with the latest news.

Next