Advertisement

ಸಾಲ ತೀರಿಸಲು ಮಹಿಳೆ ಕೊಲೆ, ಸರ ಕಳವು

03:46 PM Apr 24, 2018 | Team Udayavani |

ಬೆಂಗಳೂರು: ಸಾಲ ಮಾಡಿ ಕುಡಿತ, ಜೂಜಿನಲ್ಲಿ ತೊಡಗಿದ್ದ ಆರೋಪಿ ಸ್ನೇಹಿತನ  ಪತ್ನಿಯನ್ನೇ ಕೊಲೆ ಮಾಡಿ ಚಿನ್ನಾಭರಣ ಅಪಹರಿಸಲು ಎರಡು ಬಾರಿ ವಿಫ‌ಲನಾಗಿ ಮೂರನೇ ಬಾರಿ ತನ್ನ ಗುರಿ ಸಾಧನೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಭಾರತೀನಗರದ ನಿವಾಸಿ, ಸಲೂನ್‌ ಶಾಪ್‌ ಮಾಲೀಕ ಶ್ರೀನಿವಾಸ್‌ ಎಂಬುವರ ಪತ್ನಿ ಚಂದ್ರಕಲಾ (35) ಎಂಬುವರನ್ನು ಕೊಲೆ ಮಾಡಿ ಸಿಕ್ಕಿಬಿದ್ದಿದ್ದ ಆರೋಪಿ ದೊಡ್ಡಬಳ್ಳಾಪುರ ಮೂಲಕ ರಮೇಶ್‌ (33) ಎಂದು ಪೊಲೀಸರು ತಿಳಿಸಿದ್ದಾರೆ.

ಏ.19ರಂದು ಚಂದ್ರಕಲಾ ಅವರು ಮನೆಯಲ್ಲಿ ಒಬ್ಬರೇ ಇದ್ದಾಗ ರಮೇಶ್‌ ಚಂದ್ರಕಲಾರನ್ನು ಕೊಲೆಗೈದು ಅವರ ಕತ್ತಿನಲ್ಲಿದ್ದ 1.20 ಲಕ್ಷ ರೂ. ಮೌಲ್ಯದ 75 ಗ್ರಾಂ ತೂಕದ ಚಿನ್ನದ ಸರ ದರೋಡೆ ಮಾಡಿದ್ದ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಕೃತ್ಯಕ್ಕೆ ಕಾರಣ ತಿಳಿದುಬಂದಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಮೂರ್ತಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೊಡ್ಡಬಳ್ಳಾಪುರದ ಪಾಲನಜೋಗಿಹಳ್ಳಿ ನಿವಾಸಿ ರಮೇಶ್‌ ಹಾಗೂ ಕೊಲೆಯಾದ ಚಂದ್ರಕಲಾರ ಸಹೋದರ ಜಗದೀಶ್‌ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಪ್ರವಾಸ ಅಥವಾ ಹೊರ ಊರುಗಳಿಗೆ ಹೋದಾಗ ಕಾರು ಚಾಲಕನಾಗಿ ರಮೇಶ್‌ನನ್ನು ಕರೆಸಿಕೊಳ್ಳುತ್ತಿದ್ದರು. ಹೀಗಾಗಿ ಚಂದ್ರಕಲಾ ಮತ್ತು ಅವರ ಪತಿ ಶ್ರೀನಿವಾಸ್‌ಗೂ ಅತ ಪರಿಚಿತನಾಗಿದ್ದ.

ಚಾಲಕನ ವೃತ್ತಿಯೊಂದಿಗೆ ಅಡುಗೆ ಕೆಲಸವನ್ನೂ ಮಾಡುತ್ತಿದ್ದ ರಮೇಶ್‌, ಇತ್ತೀಚೆಗೆ ಕೆಲಸಕ್ಕೆ ಹೋಗುತ್ತಿರಲಿಲ್ಲ. ಆದರೆ, ಕುಡಿತ‌, ಜೂಜಾಟದ ಚಟದಿಂದ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ಮೂರು ತಿಂಗಳಿಂದ ಮನೆ ಬಾಡಿಗೆಯನ್ನೂ ಕಟ್ಟಿರಲಿಲ್ಲ.

Advertisement

ಹೀಗಾಗಿ ತಿಂಗಳ ಹಿಂದೆ ಹುಣಸಮಾರನಹಳ್ಳಿಯ ಸಂಬಂಧಿಕರ ಮನೆಗೆ ಬಂದಿದ್ದ. ಈ ಮಧ್ಯೆ ಸಾಲಗಾರರ ಕಾಟವೂ ಹೆಚ್ಚಾಗಿತ್ತು. ಹೀಗಾಗಿ ಆತ ತನ್ನ ಸ್ನೇಹಿತನ ಸಹೋದರಿ ಚಂದ್ರಕಲಾ ಕುಟುಂಬ ಭಾರತೀನಗರದಲ್ಲಿರುವುದನ್ನು ಅರಿತು ಕಳವು ಮಾಡಲು ಸಂಚು ರೂಪಿಸಿ ಅಗಾಗ್ಗೆ ಬಂದು ಹೋಗಿ ಪರಿಚಯ ಬೆಳೆಸಿಕೊಂಡಿದ್ದ ಎಂದು ಡಿಸಿಪಿ ತಿಳಿಸಿದ್ದಾರೆ.

ಸತತ ಪ್ರಯತ್ನ: ಏ. 15ರಂದು ಮತ್ತು 18 ರಂದು  ಚಂದ್ರಕಲಾ ಮನೆಗೆ ಹೋದಾಗ ಶ್ರೀನಿವಾಸ್‌, ತಾಯಿ ಇದ್ದದ್ದರಿಂದ ಕಳ್ಳತನ ಸಾಧ್ಯವಾಗಿರಲಿಲ್ಲ. ಆದರೆ, ಮಾರನೇ ದಿನ (ಏ. 19) ಚಂದ್ರಕಲಾರ ಮಕ್ಕಳು ಅಜ್ಜಿಮನೆಗೆ ಹೋಗಿದ್ದು ಗೊತ್ತಾಗಿ ಮನೆಗೆ ಬಂದು ಕತ್ತಿನಲ್ಲಿದ್ದ ಚಿನ್ನದ ಸರ ನೀಡುವಂತೆ ಕೇಳಿದ. ನಿರಾಕರಿಸಿದಾಗ ಬಟ್ಟೆಯಿಂದ ಆಕೆಯ ಬಾಯಿ ಮತ್ತು ಮೂಗು ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿ ಸರ ಅಪಹರಿಸಿ ಪರಾರಿಯಾಗಿದ್ದ.

ಬಳಿಕ ತನ್ನ ಪರಿಚಯಸ್ಥ ಯುವತಿ ಮೂಲಕ ಸರವನ್ನು ಅಡಮಾನ ಇಟ್ಟು ಮನೆ ಬಾಡಿಗೆಗೆ ಪಾವತಿಸಬೇಕಾದ ಹಣ ಮಾತ್ರ ಪಡೆದು ದೊಡ್ಡಬಳ್ಳಾಪುರಕ್ಕೆ ತೆರಳಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂಬಂಧಿಕರನ್ನು ವಿಚಾರಿಸಿದಾಗ ರಮೇಶ್‌ ಮನೆಗೆ ಬಂದಿದ್ದ ಬಗ್ಗೆ ತಿಳಿಯಿತು. ಈ ಹಿನ್ನೆಲೆಯಲ್ಲಿ ರಮೇಶ್‌ನನ್ನು ಬಂಧಿಸಿ ವಿಚಾಸಿದಾಗ ಸತ್ಯಾಂಶ ತಿಳಿದುಬಂದಿದೆ ಎಂದು ಡಿಸಿಪಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next