ಆನೇಕಲ್: ನೇಪಾಳ ಮೂಲದ ಯುವತಿ ಮೇಲೆ ಕಳೆದ ಮೂರು ದಿನಗಳ ಹಿಂದೆ ಗುರುವಾರ, ಗ್ಯಾಂಗ್ ರೇಪ್ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಆವಡದೇನಹಳ್ಳಿ ಬಳಿಯ ಪಾಳು ಬಂಗಲೆಯಲ್ಲಿ 23 ವರ್ಷದ ಯುವತಿಯನ್ನು 6 ಯುವಕರ ತಂಡದಿಂದ ಅತ್ಯಾಚಾರ ಮಾಡಿ, ಕಾಲ ಮೇಲೆ ಕಲ್ಲು ಹಾಕಿ ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ನ.23 ರಂದು ಘಟನೆ ನಡೆದಿದ್ದು, ಮನೆಯಲ್ಲಿ ಅರೆಪ್ರಜ್ಞಾ ಸ್ಥಿತಿಯಲ್ಲಿದ್ದ ಯುವತಿಯನ್ನು ಎನ್‌ಜಿಒ ಸಂಸ್ಥೆ ಒಂದರ ಕಾರ್ಯಕರ್ತರಾದ ಪಾರಿಜಾತ ಮತ್ತು ಶಂಕರ್ ಯುವತಿಯನ್ನು ರಕ್ಷಿಸಿ 108 ಅಂಬುಲೆನ್ಸ್ ಮೂಲಕ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ಯುವತಿ ದೇಹದ ಮೇಲೆ ಗಾಯಗಳಾಗಿದ್ದು, ಅತ್ಯಾಚಾರ ಎಸಗಿದ ದುಷ್ಕರ್ಮಿಗಳಿಂದ ಯುವತಿಯ ಹತ್ಯೆಗೆ ಯತ್ನ ನಡೆದಿರುವ ಶಂಕೆ ಇದೆ ಎನ್ನಲಾಗಿದೆ. ಕಳೆದ ಮೂರು ದಿನಗಳಿಂದ ಪಾಳು ಬಂಗಲೆಯಲ್ಲಿ ಬಿದ್ದಿದ್ದ ಯುವತಿಯು ಚೀರಾಡುತ್ತಾ ರಸ್ತೆಯ ಬಳಿ ಬಂದಾಗ ಯುವತಿಯನ್ನು ರಕ್ಷಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಎಸ್‌ಪಿ ಅಮಿತ್ ಸಿಂಗ್ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಯುವತಿಯಿಂದ ಮಾಹಿತಿ ಕಲೆ ಹಾಕಿದ್ದಾರೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಮಿತ್ ಸಿಂಗ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೇಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯುವತಿ ಚೇತರಿಸಿಕೊಳ್ಳುತ್ತಿದ್ದಾಳೆ. ಘಟನೆಯಿಂದ ಗಾಬರಿಯಾಗಿದ್ದಳು. ಆಕೆಯ ಹೇಳಿಕೆಯನ್ನಾಧರಿಸಿ ತನಿಖೆ ನಡೆಯುತ್ತಿದೆ. ಎರಡು ದಿನ ಮನೆಯಲ್ಲಿ ತನ್ನನ್ನು ಕೂಡಿ ಹಾಕಿದ್ದರು ಎಂದು ಯುವತಿ ಹೇಳಿಕೆ ನೀಡಿದ್ದಾಳೆ.ಇದು ಸ್ಥಳೀಯ ಯುವಕರ ಕೃತ್ಯವಿರಬಹುದೆಂದು ತಿಳಿದುಬಮದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಯುವತಿ 2003ರಲ್ಲಿ ಬೆಂಗಳೂರಿಗೆ ಬಂದಿದ್ದಳು. ಚಂದಾಪುರ ಸಮೀಪದ ಸೂರ್ಯನಗರದ ಬೇಕರಿ ಒಂದರಲ್ಲಿ, ನಂತರ ಹಾಲೋ ಬ್ಲಾಕ್ ಕಂಪೆನಿಯಲ್ಲಿ ಕೆಲಸ ಮಾಡಿದ್ದ ಈಕೆ 7 ತಿಂಗಳಿನಿಂದ ಕೆಲಸವನ್ನು ಬಿಟ್ಟಿದ್ದಳು. ಈಕೆಯ ಸಂಬಂಧಿಕರು ಯಾರೂ ಬೆಂಗಳೂರಿನಲ್ಲಿ ಇಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.