Advertisement

ಪ್ರಶ್ನಿಸುವ ಮನೋಭಾವ ಮಹಿಳೆಗೆ ಅಗತ್ಯ

12:40 PM Aug 20, 2018 | Team Udayavani |

ಮೈಸೂರು: ಮೌಡ್ಯ ವಿರೋಧಿ ಮನೋಭಾವ ಬೆಳೆಸಿಕೊಳ್ಳುವ ಜೊತೆಗೆ ಪ್ರಶ್ನೆ ಮಾಡುವ ಶಿಕ್ಷಣ ಹೆಣ್ಣಿಗೆ ದೊರಕಬೇಕಿದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್‌ ಪ್ರತಿಪಾದಿಸಿದರು. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಏರ್ಪಡಿಸಿದ್ದ ಮಹಿಳೆ-ರಾಜಕಾರಣ-ಹೊಸದಿಕ್ಕು; ಚುನಾವಣೆ: ಒಳ ಹೊರಗೆ ವಿಷಯ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಸುಳ್ಳಿನ ಪ್ರಪಂಚ: ಉತ್ತರ ಹುಡುಕಲು ಸಾಧ್ಯವಾಗುವ ಹಕ್ಕನ್ನು ಸಂವಿಧಾನ ನಮಗೆ ಕೊಟ್ಟಿದೆ. ಪ್ರತಿಯೊಂದು ವಿಷಯದಲ್ಲೂ ಮಹಿಳಾ ಚಳವಳಿ ಸಾಧ್ಯವಾಗಿರುವುದು ಸಂವಿಧಾನದಿಂದಲೇ ಎಂದ ಅವರು, ಹೆಣ್ಣು ಕೂಡ ಮನುಷ್ಯಳು ಎಂಬುದು ಅರಿವಾದಾಗ ಸಂವಿಧಾನ ಜಾರಿ ಸಾಧ್ಯ ಎಂದು ಹೇಳಿದರು.

ನಿರ್ಭಯಾ ಪ್ರಕರಣ ಸಾಂಕೇತಿಕ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಅನೇಕ ಪ್ರಕರಣಗಳು ಹೊರಬರದೇ ಮುಚ್ಚಿ ಹೋಗುತ್ತಿವೆ. ಜನತೆ ಕೂಡ ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ಸುಳ್ಳನ್ನೇ ಸತ್ಯದ ಮುಖಕ್ಕೆ ಹೊಡೆದಂತೆ ಮಾತನಾಡಿದರೆ ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದರು.

ಶುದ್ಧಿ: ಪ್ರಾಸ್ತಾವಿಕ ನುಡಿಗಳನ್ನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಉಮಾಪತಿ, ಚುನಾವಣಾ ಸುಧಾರಣೆಯಾದರೆ ಮಹಿಳಾ ಸಬಲೀಕರಣ ಸಾಧ್ಯ.
ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ಮೀಸಲಿನಿಂದಾಗಿ ಮಹಿಳೆಯರಿಗೆ ಅನುಕೂಲವಾಗಿದೆ. ಇದೇ ರೀತಿಯಲ್ಲಿ ಶಾಸನ ಸಭೆಗಳಲ್ಲೂ ಶೇ.50 ಮಹಿಳಾ ಮೀಸಲಾತಿ ಬರಬೇಕು.

ಈ ಬಗ್ಗೆ ಅಂತಾರಾಷ್ಟ್ರೀಯ ಒತ್ತಡವೂ ಇದೆ. ರಾಜಕೀಯ ಕುಲಗೆಟ್ಟು ಹೋಗಿರುವ ಈ ದಿನಗಳಲ್ಲಿ ಮಹಿಳೆಯರೇ ರಾಜಕಾರಣಕ್ಕೆ ಹೊಸದಿಕ್ಕು ತೋರಬೇಕು. ಹಣದ ಪ್ರಭಾವ ಇಳಿಸಿ ಚುನಾವಣೆ ಸುಧಾರಣೆ ಆಗಬೇಕಾದರೆ, ರಾಜಕೀಯ ಶುದ್ಧಿ ಆಗಬೇಕು. ಇದಕ್ಕೆ ಮಹಿಳಾ ಚಳವಳಿಗಳಾಗಬೇಕು ಎಂದರು.

Advertisement

ಮಹಿಳೆ ಬಂಧಿ: ಕೃಷಿ ಕ್ರಾಂತಿ, ಧರ್ಮಶಾಸ್ತ್ರಗಳ ನಿರ್ಬಂಧಗಳಿಂದಾಗಿ ಮಹಿಳೆ ಮನೆಯೊಳಗೆ ಬಂಧಿಯಾಗುವಂತಾಗಿದೆ. ಪುರುಷ ಪ್ರಧಾನ, ಪಿತೃ ಪ್ರಧಾನ ಸಮಾಜ, ಗೌಡಿಕೆಯಿಂದಾಗಿ ಮಹಿಳೆ ಗೊಂಬೆ, ಬಹುಮಾನದ ರೀತಿ ಆಗಿದ್ದಾಳೆ ಎಂದು ಹೇಳಿದರು.

ರೈತ ಮುಖಂಡರಾದ ನಂದಿನಿ ಜಯರಾಮ್‌ ಮಾತನಾಡಿ, ಮಹಿಳೆಯರು ಒಗ್ಗಟ್ಟಾದರೆ ರಾಜಕಾರಣ ಬದಲಾಗುತ್ತದೆ. ಆದರೆ, ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು ಎಂಬ ಪರಿಸ್ಥಿತಿ ಇದೆ. ಹೀಗಾಗಿ ಇಂತಹ ಚರ್ಚೆಗಳು ಗ್ರಾಮೀಣ ಪ್ರದೇಶಗಳಲ್ಲಿ ನಡೆಯಬೇಕು. ಜೊತೆಗೆ ಚರ್ಚೆ ಮಾಡುವವರು ಕಾರ್ಯಕ್ಷೇತ್ರಕ್ಕೆ ಇಳಿಯುವಂತಾಗಬೇಕು ಎಂದು ಹೇಳಿದರು.

ಜಿಪಂ ಮಾಜಿ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್‌, ಸಮತಾ ವೇದಿಕೆಯ ಡಾ.ರತಿರಾವ್‌, ಆರ್‌ಎಲ್‌ಎಚ್‌ಪಿ ಯ ಸರಸ್ವತಿ, ಮಾಲವಿಕಾ ಗುಬ್ಬಿವಾಣಿ, ಒಡನಾಡಿಯ ಸ್ಟಾನ್ಲಿ ಮೊದಲಾದರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next