Advertisement

ಮಹಿಳೆಯನ್ನು ಇಂದಿಗೂ ಕೀಳಾಗಿ ಕಾಣಲಾಗುತ್ತಿದೆ: ವಿಷಾದ

02:25 PM Jun 25, 2017 | Team Udayavani |

ಹುಬ್ಬಳ್ಳಿ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಎಲ್ಲ ರಂಗದಲ್ಲಿ ಕಾರ್ಯನಿರ್ವಹಿಸಲು ಸಮರ್ಥರಾಗಿದ್ದರೂ ಅವರನ್ನು ಇಂದಿಗೂ ಕೀಳಾಗಿಯೇ ಕಾಣಲಾಗುತ್ತಿದೆ ಎಂದು ಧಾರವಾಡ ಕೃಷಿ ವಿವಿಯ ವಿಸ್ತರಣೆ ಮತ್ತು ಸಂವಹನ ವಿಭಾಗದ ಮುಖ್ಯಸ್ಥೆ ಡಾ| ಶೋಭಾ ನಾಗನೂರ ವಿಷಾದ ವ್ಯಕ್ತಪಡಿಸಿದರು. 

Advertisement

ಇಲ್ಲಿನ ಗೋಕುಲ ರಸ್ತೆಯ ಗೋಕುಲ ಗಾರ್ಡನ್‌ದಲ್ಲಿ ಅಖೀಲ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ನೌಕರರ ಒಕ್ಕೂಟ ಶನಿವಾರ ಆಯೋಜಿಸಿದ್ದ 10ನೇ ತ್ತೈವಾರ್ಷಿಕ ಮಹಾಧಿವೇಶನದ ಮಹಿಳಾ ಉದ್ಯೋಗಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆ ಯಾವುದೇ ಫಲಾಪೇಕ್ಷೆ, ಸಂಬಳವಿಲ್ಲದೆ ಮನೆಗೆಲಸ ಮಾಡುತ್ತಾಳೆ.

ಅಲ್ಲಿಂದಲೇ ಅವಳ ಪ್ರಾಥಮಿಕ ಕೆಲಸ ಆರಂಭವಾಗುತ್ತದೆ. ಅವಳು ಎಂತಹ ಹುದ್ದೆ, ಸ್ಥಾನಮಾನ ಹೊಂದಿದ್ದರೂ ಮನೆಗೆಲಸ ಮಾಡುತ್ತಾಳೆ. ತನಗೆ ವಹಿಸಿದ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಬಲ್ಲಳು. ಪುರುಷರಿಗಿಂತ ಹೆಚ್ಚಿನ ಬದ್ಧತೆ ಹೊಂದಿದ್ದಾಳೆ. ಮಹಿಳೆಯರು ತಮಗಿಂತಲೂ ಉತ್ತಮ ಕಾರ್ಯಮಾಡಬಲ್ಲರು ಎಂಬುದನ್ನು ಪುರುಷರು ಒಪ್ಪಿಕೊಳ್ಳುವುದಿಲ್ಲ. ಅಲ್ಲದೆ ಅವಳಿಗೆ ಅವಕಾಶ ಕೊಡುವುದಿಲ್ಲ. 

ಭಾರತ ಮಾತ್ರವಲ್ಲ ಅಮೆರಿಕೆಯಂತಹ ಮುಂದುವರಿದ ದೇಶಗಳಲ್ಲೂ ಮಹಿಳೆಗೆ ದುಡಿಮೆಗೆ ತಕ್ಕ ಮನ್ನಣೆ ಸಿಗುತ್ತಿಲ್ಲ. ಅವಳಿಗೆ ಹೆಚ್ಚಿನ ಜವಾಬ್ದಾರಿ, ಸ್ಥಾನಮಾನ ನೀಡುವಾಗ ತಾರತಮ್ಯ ಮಾಡಲಾಗುತ್ತಿದೆ ಎಂದರು. ಭಾರತೀಯ ಜೀವವಿಮಾ ನಿಗಮದ ಕಾರ್ಮಿಕ ಸಂಘಟನೆಯ ಬೆಂಗಳೂರಿನ ವಿಭಾಗೀಯ ಕಾರ್ಯದರ್ಶಿ ಎಸ್‌.ಕೆ. ಗೀತಾ ಮಾತನಾಡಿ, ಮಹಿಳೆಯರಿಗೆ ದುಡಿಮೆ ಜೊತೆ ಅವರನ್ನು ಗುರುತಿಸುವಂತಾದಾಗ ಮಾತ್ರ ಅವರಿಗೆ ಗೌರವ ಸಿಗುತ್ತದೆ.

ಮಹಿಳೆ ಮತ್ತು ಪುರುಷರ ನಡುವಿನ ಭೇದ ಜೈವಿಕವಾಗಿ ಅಲ್ಲ. ಸಾಮಾಜಿಕವಾಗಿಯೂ ಇದೆ. ಮಹಿಳೆಯರ ಸಮಸ್ಯೆಗಳನ್ನು ವೈಯಕ್ತಿಕವಾಗಿ ಪರಿಗಣಿಸಲಾಗುತ್ತಿದೆ ವಿನಃ ಸಮುದಾಯವಾಗಿ ಕಾಣುತ್ತಿಲ್ಲ. ಉದಾರೀಕರಣದ ನಂತರ ಮಹಿಳೆಯರಿಗೆ ಉದ್ಯೋಗ ಸೃಷ್ಟಿ ಆಯಿತು. ಜೊತೆಗೆ ಅವಳು ಉದ್ಯೋಗ ಮಾಡದಷ್ಟು ಸಮಸ್ಯೆಗಳು ಹುಟ್ಟಿಕೊಂಡಿವೆ ಎಂದರು. 

Advertisement

ಮಹಿಳೆಯ ಸೌಂದರ್ಯವನ್ನೆ ಪ್ರಧಾನವಾಗಿಟ್ಟುಕೊಂಡು ಮಾರುಕಟ್ಟೆ ಶಕ್ತಿಗಳು ಅವಳ ಬೌದ್ಧಿಕ ಚಿಂತನೆ ಕಡೆಗಣಿಸುತ್ತಿವೆ. ಮಾರುಕಟ್ಟೆಗಳು ನಮ್ಮನ್ನು ಗ್ರಾಹಕರನ್ನಾಗಿ ಮಾತ್ರ ಮಾಡಿವೆ ವಿನಃ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಬೆಳೆಸಲು ಬಿಡುತ್ತಿಲ್ಲ. ಮಹಿಳೆಯರು ಸಾಮರಸ್ಯವಾಗಿ ಇಲ್ಲ, ವ್ಯಕ್ತಿತ್ವ ಹೊಂದಿಲ್ಲವೆಂದು ಬಿಂಬಿಸಲಾಗುತ್ತಿದೆ. 

ಗರ್ಭಿಣಿ ಸಹೋದ್ಯೋಗಿಗಳನ್ನು ಪುರುಷರು ಬಲು ತಾತ್ಸಾರದಿಂದ ನೋಡುತ್ತಾರೆ. ಹೆಣ್ಣಿನ ತಾಯ್ತನವೇ ಮುಂದಿನ ಪೀಳಿಗೆ, ಸಮಾಜ ಸೃಷ್ಟಿಸುವುದಾಗಿದೆ ಎಂಬುದನ್ನು ಸಮಾಜ ಏಕೆ ತಿಳಿದುಕೊಳ್ಳುತ್ತಿಲ್ಲವೆಂದು ಕಳವಳ ವ್ಯಕ್ತಪಡಿಸಿದರು. ಎಕೆಜಿಬಿಇಎಫ್ ಅಧ್ಯಕ್ಷ ಎಚ್‌. ನಾಗಭೂಷಣರಾವ್‌ ಅಧ್ಯಕ್ಷತೆ ವಹಿಸಿದ್ದರು.

ಉಪ ಮಹಾಪೌರ ಲಕ್ಷ್ಮೀಬಾಯಿ ಬಿಜವಾಡ, ಎಐಆರ್‌ಆರ್‌ಬಿಇಎ ಮಹಾ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಸಯೀದ್‌ ಖಾನ್‌, ಎನ್‌ಎಫ್‌ಆರ್‌ಆರ್‌ಬಿಓಎ ಅಧ್ಯಕ್ಷ ಶಗುನ್‌ ಶುಕ್ಲಾ, ಸ್ವಾಗತ ಸಮಿತಿ ಸಂಚಾಲಕ ವಸಂತ ಬನ್ನಿಗೋಳ, ಎಕೆಜಿಬಿಇಎಫ್‌ ಪ್ರಧಾನ ಕಾರ್ಯದರ್ಶಿ ಗಣಪತಿ ಹೆಗಡೆ ಮೊದಲಾದವರಿದ್ದರು. ಕೆವಿಜಿ ಬ್ಯಾಂಕ್‌ ಹಿರಿಯ ವ್ಯವಸ್ಥಾಪಕಿ ಎಸ್‌.ಎಸ್‌. ಮಣ್ಣೂರ ಸ್ವಾಗತಿಸಿದರು. ಮಂಜುಳಾ ಡಿ. ಪ್ರಾರ್ಥಿಸಿದರು. ಅಶ್ವಿ‌ನಿ ಬಡಿಗೇರ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next