ಕುಂದಾಪುರ: ಮಹಿಳೆಯರ ರಕ್ಷಣೆ ಸಲುವಾಗಿ ಸಮಾಜದ ಕಟ್ಟುಪಾಡುಗಳ ಜತೆಗೆ ಅನೇಕ ಕಾನೂನುಗಳು ಕೂಡಾ ಜಾರಿಯಲ್ಲಿವೆ. ಭ್ರೂಣಹತ್ಯೆಯಂತಹ ಕಾನೂನು ವಿರೋಧಿ ಕೃತ್ಯಗಳಿಂದಾಗಿ ಲಿಂಗಾನುಪಾತದಲ್ಲಿ ಅಸಮಾನತೆ ಉಂಟಾ ಗುತ್ತದೆ. ಆದ್ದರಿಂದ ಲೈಂಗಿಕ ದೌರ್ಜನ್ಯ, ಪತಿಯಿಂದ ದೌರ್ಜನ್ಯದಂತಹ ಯಾವುದೇ ಮಹಿಳಾವಿರೋಧಿ ನಡೆ ಗಳಿದ್ದರೆ ಸಂಬಂಧಪಟ್ಟವರ ಗಮನಕ್ಕೆ ತಂದು ನ್ಯಾಯಕೊಡಿಸಿ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಕೆ. ಹೇಳಿದರು.
ಶುಕ್ರವಾರ ಇಲ್ಲಿನ ಭಂಡಾರ್‌ಕಾರ್ಸ್ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಪಂಚಾಯತ್, ತಾಲೂಕು ಆರೋಗ್ಯ ಇಲಾಖೆ, ಐಎಂಎ ಕುಂದಾಪುರ ಹಾಗೂ ಭಂಡಾರ್‌ಕಾರ್ಸ್ ಕಾಲೇಜಿನ ಸಹಯೋಗದಲ್ಲಿ ನಡೆದ ಬೇಟಿ ಬಚಾವೋ ಬೇಟಿ ಪಡಾವೊ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಕುಂದಾಪುರ ಉಪವಿಭಾಗ ಸಹಾಯಕ ಕಮಿಷನರ್ ಡಾ| ಮಧುಕೇಶ್ವರ್ ವಹಿಸಿದ್ದರು.ಮೈಸೂರು ವಿಭಾಗ ಕುಟುಂಬ ಕಲ್ಯಾಣ ಆರೋಗ್ಯ ಸೇವೆಗಳ ಜಂಟಿ ನಿರ್ದೇಶಕ ಡಾ| ರಾಮಚಂದ್ರ ಬಾಯಿರಿ ದಿಕ್ಸೂಚಿ ಭಾಷಣ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಓಂಪ್ರಕಾಶ್ ಕಟ್ಟಿಮನಿ, ಭಂಡಾರ್‌ಕಾರ್ಸ್ ಕಾಲೇಜು ಪ್ರಾಂಶುಪಾಲ ಡಾ|ಎನ್.ಪಿ. ನಾರಾಯಣ ಶೆಟ್ಟಿ, ಐಎಂಎ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ| ಕೆ.ಎಸ್. ಕಾರಂತ್, ಸಂಪನ್ಮೂಲ ವ್ಯಕ್ತಿಗಳಾದ ನ್ಯಾಯವಾದಿ ಟಿ.ಬಿ. ಶೆಟ್ಟಿ, ಸಮಾಜಸೇವಕಿ ವೆರೋನಿಕಾ ಕಾರ್ವಾಲಿಯೋ, ಉಡುಪಿಯ ಕುಟುಂಬ ಕಲ್ಯಾಣ ಡಾ| ಶ್ರೀರಾಮ ರಾವ್, ಕುಂದಾಪುರದ ವೈದ್ಯೆ ಡಾ| ಪ್ರಮೀಳಾ ನಾಯಕ್, ಭಂಡಾರ್‌ಕಾರ್ಸ್ ಕಾಲೇಜಿನ ಡಾ| ಯಶವಂತಿ, ಡಾ| ರಾಮಚಂದ್ರ, ಜಿಲ್ಲಾ ಆರೋಗ್ಯ ಇಲಾಖೆ ನೋಡೆಲ್ ಅಧಿಕಾರಿ ಡಾ| ಪ್ರಶಾಂತ್ ಭಟ್ ಉಪಸ್ಥಿತರಿದ್ದರು.
ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ ಸ್ವಾಗತಿಸಿ, ಪ್ರಸ್ತಾವಿಸಿದರು. ರೋಹಿಣಿ ಶರಣ್ ನಿರ್ವಹಿಸಿದರು. ವಿವಿಧ ಗೋಷ್ಠಿಗಳು ನಡೆದವು.
ಕೆಲ ವೆಡೆ ಹಗಲೂ ಸಂಚಾರ ಕಷ್ಟ
ಮೊಗಲರ ಕಾಲಕ್ಕಿಂತಲೂ ಹಿಂದೆ ಶೇರ್‌ಶಹಾನ್‌ನ ಕಾಲದಲ್ಲಿ ತಡರಾತ್ರಿ ಕೂಡಾ ಒಬ್ಬಂಟಿ ಮಹಿಳೆ ನಿರ್ಜನ ಪ್ರದೇಶದಲ್ಲಿ ನಡೆದು ಹೋಗಬಹುದಾದಷ್ಟು ಭದ್ರತೆ ಇತ್ತು. ಅನಂತರದ ದಿನಗಳಲ್ಲಿ ಅಂತಹ ವಾತಾವರಣ ಕಂಡುಬರುತ್ತಿಲ್ಲ. ಈಗ ರಾತ್ರಿಯಷ್ಟೇ ಅಲ್ಲ ಹಗಲೂ ಸಂಚಾರ ಕಷ್ಟ ಎಂಬಂತಿದೆ ಕೆಲವೆಡೆ. ಪ್ರಜಾಪ್ರಭುತ್ವದ ಮೂರು ಅಂಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದಾಗ ಉತ್ತಮ ಆಡಳಿತದಲ್ಲಿ ಉತ್ತಮ ರಾಜ್ಯ ನಿರ್ಮಾಣ ಸಾಧ್ಯ. ಅಂತಹ ಸುಖೀ ರಾಜ್ಯ ನಿರ್ಮಾಣದ ಜವಾಬ್ದಾರಿ ಮಕ್ಕಳ ಕೈಯಲ್ಲಿದೆ.
– ಪ್ರಕಾಶ್ ಕೆ.,ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ