Advertisement

ತೋಳನ ಕೆರೆ ಸೇರುತ್ತಿದೆ ಕೊಳಚೆ ನೀರು

11:37 AM May 12, 2019 | Team Udayavani |

ಹುಬ್ಬಳ್ಳಿ: ಅವಳಿ ನಗರವನ್ನು ಸ್ಮಾರ್ಟ್‌ಸಿಟಿ ಮಾಡಲು ಒಂದೆಡೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದರೆ ಇನ್ನೊಂದೆಡೆ ಪಾಲಿಕೆ ಯೋಜನೆಗಳನ್ನು ಹಾಳುಗೆಡವಲು ಮುಂದಾಗಿದೆ.

Advertisement

ಇಲ್ಲಿನ ತೋಳನಕೆರೆ ಇದಕ್ಕೆ ಜ್ವಲಂತ ಉದಾಹರಣೆ. ತೋಳನಕೆರೆ ಅಭಿವೃದ್ಧಿ ಪಡಿಸಲು ಕೋಟಿಗಟ್ಟಲೇ ಹಣ ಖರ್ಚು ಮಾಡಲಾಗುತ್ತಿದೆ. ಆದರೆ ಇನ್ನೊಂದೆಡೆ ಚರಂಡಿ ನೀರನ್ನು ಕೆರೆಗೆ ಬಿಡಲಾಗುತ್ತಿದೆ.

15.58 ಕೋಟಿ ರೂ. ವೆಚ್ಚದಲ್ಲಿ ಕೆರೆಯ ಅಭಿವೃದ್ಧಿ ಕೈಗೊಳ್ಳಲಾಗಿದೆ. ಕಳೆದೊಂದು ವರ್ಷದಿಂದ ಕೆರೆಯ ಹೂಳು ತೆಗೆಯಲಾಗುತ್ತಿದೆ. ಇದರಿಂದ ಕೆರೆಯನ್ನು ಆಳ ಮಾಡಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೆರೆಗೆ ನೀರೊದಗಿಸುವ ಜಲಮೂಲಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳುವಂತೆ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೆರೆಯ ದಡದಲ್ಲಿ ಉದ್ಯಾನ, ವಾಕಿಂಗ್‌ ಪಾಥ್‌, ಮಕ್ಕಳಿಗೆ ಆಟದ ಸಾಮಗ್ರಿಗಳನ್ನು ಅಳವಡಿಸಲಾಗುತ್ತಿದೆ. ಸುತ್ತಮುತ್ತಲಿನ ಬಡಾವಣೆಗಳ ಜನರಿಗೆ ತೋಳನಕೆರೆ ದಡದ ಉದ್ಯಾನವನ್ನು ಸಂಜೆಯ ವಿಹಾರ ಸ್ಥಳವನ್ನಾಗಿಸಲು ಯೋಜಿಸಲಾಗಿದೆ. ಆದರೆ ಇದನ್ನೆಲ್ಲ ಹಾಳು ಮಾಡುವಂತೆ ಕೆರೆಗೆ ಈಗ ಚರಂಡಿ ನೀರು ಹರಿ ಬಿಡಲಾಗುತ್ತಿದೆ. ಇದರಿಂದ ಜಲಚರಗಳು ಸಾಯುವ ಸಾಧ್ಯತೆಯಿದೆ. ಮುಂಗಾರು ಆರಂಭಗೊಳ್ಳಲಿದ್ದು, ಮಳೆ ನೀರು ಹರಿದು ಕೆರೆಯಲ್ಲಿ ಸಂಗ್ರಹಗೊಳ್ಳಲಿದೆ. ಇಂಥ ಸಂದರ್ಭದಲ್ಲಿ ಕೊಳಚೆ ನೀರು ಸಂಗ್ರಹಗೊಂಡರೆ ನೀರೆಲ್ಲ ಮಲಿನವಾಗುವುದರಲ್ಲಿ ಸಂಶಯವಿಲ್ಲ.

ಕೆರೆಗೆ ವಿವಿಧ ಬಗೆಯ ಪಕ್ಷಿಗಳು ಆಗಮಿಸುತ್ತಿದ್ದು, ಇವುಗಳನ್ನು ನೋಡಲೆಂದೇ ಪಕ್ಷಿ ಪ್ರೇಮಿಗಳು ಇಲ್ಲಿಗೆ ಬರುತ್ತಿದ್ದಾರೆ. ಆದರೆ ಚರಂಡಿ ನೀರು ಕೆರೆಗೆ ಸೇರಿದರೆ ಪಕ್ಷಿಗಳ ಸಂಖ್ಯೆ ಕಡಿಮೆಯಾಗುವುದು ಖಚಿತ.

Advertisement

ಮುಂದಿನ ದಿನಗಳಲ್ಲಿ ಟೆಂಡರ್‌ ಶ್ಯೂರ್‌ ರಸ್ತೆ ಪೂರ್ಣಗೊಂಡ ನಂತರ ಈ ಭಾಗದ ಜನರಿಗೆ ಅಧ್ಯಾಪಕ ನಗರ ಮೂಲಕ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇಲ್ಲಿ ನಿರ್ಮಾಣವಾಗುತ್ತಿದ್ದು, ಭವಿಷ್ಯದ ಹಲವು ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಕೆರೆ ಅಭಿವೃದ್ಧಿ ಪಡಿಸಲಾಗುತ್ತಿದೆ.

ಸ್ಥಳಿಯರ ಸಹಕಾರ, ಸಲಹೆ ಸೂಚನೆ ಕಡೆಗಣಿಸಲಾಗುತ್ತಿದೆ. ಕೊಳಚೆ ನೀರು ಕೆರೆ ಸೇರುತ್ತಿರುವ ಬಗ್ಗೆ ಪಾಲಿಕೆಗೆ ಇಲ್ಲಿನ ನಿವಾಸಿಗಳು ದೂರು ನೀಡಿ 4 ದಿನಗಳಾದರೂ ಕ್ರಮ ಕೈಗೊಂಡಿಲ್ಲ. ಚರಂಡಿ ನೀರು ಕೆರೆಗೆ ಸೇರುತ್ತ ಹೋದರೆ ವಾತಾವರಣ ಕಲುಷಿತಗೊಳ್ಳುವುದರಲ್ಲಿ ಸಂಶಯವಿಲ್ಲ. ಆರೋಗ್ಯ ಸುಧಾರಿಸಿಕೊಳ್ಳಲು ಉದ್ಯಾನಕ್ಕೆ ಬರುವವರು ರೋಗಗಳನ್ನು ಅಂಟಿಸಿಕೊಳ್ಳಲು ಇಲ್ಲಿಗೆ ಬರಬೇಕಾಗುತ್ತದೆ ಎಂಬ ಆತಂಕ ಇಲ್ಲಿನ ಜನರದ್ದಾಗಿದೆ.

ಸಮಸ್ಯೆಯನ್ನು ಬಗೆಹರಿಸಲು ಆರಂಭಿಕ ಹಂತದಲ್ಲೇ ಮಹಾನಗರ ಪಾಲಿಕೆ ಮುಂದಾಗಬೇಕು. ಚರಂಡಿ ನೀರು ಕೆರೆಗೆ ಸೇರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ. ಒಂದು ವೇಳೆ ಚರಂಡಿ ನೀರು ಕೆರೆ ಆವರಣ ಸೇರುವುದನ್ನು ತಡೆಯದಿದ್ದರೆ ಇಲ್ಲಿಯ ಜನರು ಹೋರಾಟ ಮಾಡಲು ಸಜ್ಜಾಗಿದ್ದಾರೆ.

ಕಳೆದ ಮಾರ್ಚ್‌ ತಿಂಗಳಲ್ಲಿ ತೋಳನ ಕೆರೆಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ್ದರು. ಮಳೆ ನೀರು ಸರಾಗವಾಗಿ ಹರಿದು ಬರಬೇಕು ಆದರೆ ಯಾವುದೇ ಕಾರಣಕ್ಕೂ ಚರಂಡಿ ಕೊಳಚೆ ಕೆರೆಗೆ ಸೇರದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದರು. ಕೆರೆಯನ್ನು ಪಕ್ಷಿಗಳ ತಾಣವನ್ನಾಗಿ ರೂಪಿಸುವಂತೆ ಸೂಚಿಸಿದ್ದರು. ಸೂಚನೆ ಹೊರತಾಗಿಯೂ ಈಗ ತ್ಯಾಜ್ಯ ಕೆರೆ ಆವರಣಕ್ಕೆ ಸೇರುತ್ತಿರುವುದು ದುರ್ದೈವ ಸಂಗತಿ.
Advertisement

Udayavani is now on Telegram. Click here to join our channel and stay updated with the latest news.

Next