Advertisement

ಮದ್ದಳೆಗಾರ ಎ.ಪಿ.ಪಾಠಕ್‌ಗೆ ಮಲೆನಾಡ ಸಿರಿ ಪ್ರಶಸ್ತಿ 

03:03 PM Feb 02, 2018 | Team Udayavani |

ಬಡಗುತಿಟ್ಟಿನ ಮದ್ದಳೆ ವಾದಕ ಅನಂತ ಪದ್ಮನಾಭ ಪಾಠಕ್‌ ಸೋಮೇಶ್ವರದ ಮಲೆನಾಡ ಸಿರಿ ಚಾರಿಟೇಬಲ್‌ ಟ್ರಸ್ಟ್‌ನ “ಮಲೆನಾಡ ಸಿರಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಫೆ.3ರಂದು ಸೋಮೇಶ್ವರ ಸಮೀಪ ನಾಡಾ³ಲುನಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು.ಬಳಿಕ ಪ್ರಸಿದ್ದ ಕಲಾವಿದರಿಂದ “ಮಾರುತಿ ಪ್ರತಾಪ’ ಎಂಬ ಬಯಲಾಟ ನಡೆಯಲಿದೆ.

Advertisement

 ಪಾಠಕ್‌ ಅವರು ಬಡಗುತಿಟ್ಟಿನ ಮದ್ದಳೆವಾದನದ ಜತೆಗೆ ಭಾಗವತಿಕೆ ಮಾಡಬಲ್ಲರು ಮತ್ತು ಚಂಡೆಯನ್ನೂ ನುಡಿಸಬಲ್ಲರು.ನಿಧಾನ ಲಯದಲ್ಲೂ ಬಾರಿಸಬಲ್ಲವರಾದ ಇವರು ವಿದ್ವಾನ್‌ ಗಣಪತಿ ಭಟ್‌,ನೆಬ್ಬೂರು ನಾರಾಯಣ ಬಾಗವತ್‌,ಕೆಪ್ಪೆಕೆರೆ ಸುಬ್ರಾಯ ಭಾಗವತರಂತವರಿಗೆ ಮದ್ದಳೆಗಾರರಾಗಿ ಗುರುತಿಸಿಕೊಂಡಿದ್ದಾರೆ.

ಕಾರ್ಕಳದಲ್ಲಿ 1968ರಲ್ಲಿ ಶ್ರೀಕಾಂತ ಪಾಠಕ್‌ ಮತ್ತು ಗಿರಿಜಾ ಪಾಠಕ್‌ ದಂಪತಿಯ ಪುತ್ರನಾಗಿ ಜನಿಸಿದ ಇವರಿಗೆ ಯಕ್ಷಗಾನ ಬಾಲ್ಯದಲ್ಲೇ ಕರಗತ.ತೆಂಕುತಿಟ್ಟು ಯಕ್ಷಗಾನವನ್ನು ಅಭ್ಯಾಸಮಾಡಿ ಅನಂತರ 1986ರಲ್ಲಿ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಕೋಟ ಮಹಾಬಲ ಕಾರಂತರಿಂದ ಮದ್ದಳೆ ವಾದನ ಅಭ್ಯಸಿಸಿ ಅಲ್ಲಿಯೇ ಅಧ್ಯಾಪಕರಾಗಿ ನೇಮಕಗೊಂಡರು.ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯಲ್ಲಿ ಮದ್ದಳೆ ವಾದಕರಾಗಿ ದುಡಿದಿದ್ದಾರೆ.ಇಡಗುಂಜಿ ಮೇಳದಲ್ಲಿ ತಿರುಗಾಟ ಮಾಡಿದ್ದಾರೆ.ಗುಣವಂತೆಯ ಶ್ರೀಮಯ ಯಕ್ಷಗಾನ ಕೇಂದ್ರದಲ್ಲಿ ಅಧ್ಯಾಪಕರಾಗಿ ಸೇವೆಸಲ್ಲಿಸಿದ್ದಾರೆ.ಮಂಟಪ ಉಪಾಧ್ಯರ “ಮೋಹಮೇನಕೆ’ಗೆ ನಿರ್ದೇಶಕರಾಗಿಯೂ, ಏಕವ್ಯಕ್ತಿ ಯಕ್ಷಗಾನ ಪ್ರಯೋಗದಲ್ಲಿ ವಿದ್ವಾನ್‌ ಗಣಪತಿ ಭಟ್ಟರ ಭಾಗವತಿಕೆಗೆ ಮದ್ದಳೆವಾದಕನಾಗಿ ಕಾಣಿಸಿಕೊಂಡಿದ್ದಾರೆ.ಪೂರ್ಣಚಂದ್ರ ಯಕ್ಷಗಾನ ಮೇಳದಲ್ಲಿ ಮದ್ದಳೆಗಾರರಾಗಿ ವಿದೇಶಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನಗರ ಸುಬ್ರಮಣ್ಯ ಆಚಾರ್ಯರ ನಡುಮನೆ ಗಾಯನದಲ್ಲೂ ಮದ್ದಳೆಗಾರರಾಗಿ ಅನೇಕ ಕಾರ್ಯಕ್ರಮದಲಿ ಭಾಗವಹಿಸಿದ್ದಾರೆ. ಹೀಗೆ ನಿರಂತರ 28 ವರ್ಷಗಳಿಂದ ಕಲಾಸೇವೆ ಮಾಡುತ್ತಾ ಬರುತ್ತಿರುವ ಇವರು ಸದ್ಯ ಬೆಂಗಳೂರಿನ ನಾದ ಸೌರಭ ಕಲಾಶಾಲೆಯಲ್ಲಿ ಹಿಮ್ಮೇಳದ ಗುರುವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 ಮದ್ದಳೆ ಮಹಾಬಲ ಕಾರಂತ ಪ್ರಶಸ್ತಿ,ಕವಿ ಮುದ್ದಣ್ಣ ಪುರಸ್ಕಾರ,ಕಲಾಶಾಲೆ ಪುರಸ್ಕಾರ ಸಹಿತ ಅನೇಕ ಸನ್ಮಾನಗಳಿಗೆ ಪಾತ್ರರಾಗಿರುವ ಇವರಿಗೆ ಹುಟ್ಟೂರ ಮಲೆನಾಡ ಸಿರಿ ಪ್ರಶಸ್ತಿ ಯೋಗ್ಯವಾಗಿಯೇ ದೊರೆಯುತ್ತಿದೆ.

ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next