ಹೊಸದಿಲ್ಲಿ/ಅಹಮದಾಬಾದ್: “ಜನಾದೇಶ ದೊಡ್ಡದಾದಷ್ಟೂ ಹೊಣೆಗಾರಿಕೆ ಹೆಚ್ಚಾಗುತ್ತದೆ. ಮುಂದಿನ 5 ವರ್ಷವು ಜನ ಭಾಗೀದಾರಿ (ಜನರ ಭಾಗವಹಿಸುವಿಕೆ) ಮತ್ತು ಜನ ಚೇತನದ (ಸಾರ್ವಜನಿಕ ಜಾಗೃತಿ) ವರ್ಷವಾಗಬೇಕು ಎಂಬುದು ನಮ್ಮ ಧ್ಯೇಯ. ಆ 5 ವರ್ಷಗಳು 1942ರಿಂದ 1947ರ ಅವಧಿಯಂತೆ ಅತ್ಯಂತ ಮಹತ್ವದ ಕಾಲಘಟ್ಟವಾಗಿರುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರವಿವಾರ ತಮ್ಮ ತವರು ರಾಜ್ಯ ಗುಜರಾತ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಅಹಮದಾಬಾದ್‌ನ ಪಕ್ಷದ ಕಚೇರಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. “ನಾವು 5 ವರ್ಷಗಳನ್ನು ಜನರ ಸಮಸ್ಯೆ ಪರಿಹರಿಸಲು ಬಳಸಬೇಕು. ಈ ಅವಧಿಯಲ್ಲಿ ಪರಿಪೂರ್ಣ ಅಭಿವೃದ್ಧಿ ಆಗಬೇಕು. ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನವನ್ನು ಎತ್ತರಕ್ಕೇರಿಸಬೇಕು’ ಎಂದು ಅವರು ಹೇಳಿದ್ದಾರೆ.
6ನೇ ಹಂತದ ಮತದಾನ ಮುಗಿದಾಗಲೇ ನಾನು ನಮಗೆ 300ಕ್ಕೂ ಹೆಚ್ಚು ಸ್ಥಾನ ದೊರೆಯುತ್ತದೆ ಎಂದಿದ್ದೆ. ಆದರೆ, ಜನರು ನನ್ನನ್ನು ವ್ಯಂಗ್ಯವಾಡಿದರು. ಈಗ ಫಲಿತಾಂಶವೇ ನನ್ನ ಮಾತನ್ನು ನಿಜವಾಗಿಸಿದೆ. ಈ ಬಾರಿಯ ಚುನಾವಣೆಯು ಆಡಳಿತ ಪರ ಅಲೆಯನ್ನು ತೋರಿಸಿದೆ ಎಂದೂ ತಿಳಿಸಿದ್ದಾರೆ.
ನಾನು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ನೋಡಿದೆ. ಅದರಲ್ಲಿ ಬಂಗಾಳದ ಮಹಿಳೆ ಯೊಬ್ಬರು “ಮೋದಿ, ಮೋದಿ’ ಎಂದು ಘೋಷಣೆ ಕೂಗುತ್ತಿರುತ್ತಾಳೆ. ಯಾಕೆಂದು ಕೇಳಿದಾಗ ಆಕೆ, ನಾನು ಗುಜರಾತ್‌ಗೆ ತೆರಳಿದಾಗ ಅಲ್ಲಿನ ಅಭಿವೃದ್ಧಿ ನೋಡಿ ದ್ದೇನೆ ಎನ್ನುತ್ತಾಳೆ. ನನಗೆ ಪ.ಬಂಗಾಳವನ್ನೂ ಗುಜರಾತ್ ಮಾದರಿಯಲ್ಲೇ ಅಭಿವೃದ್ಧಿ ಮಾಡಲು ಮನಸ್ಸಿದೆ ಎಂದೂ ಮೋದಿ ಹೇಳಿದ್ದಾರೆ.
ನರೇಂದ್ರ ಭಾಯಿ ಗುಜರಾತ್‌ನ ಹೆಮ್ಮೆ: ಕಾರ್ಯ ಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಗುಜರಾತ್‌ನಲ್ಲಿ ಎಲ್ಲ 26 ಸೀಟುಗಳನ್ನು ಗೆದ್ದ ಬಳಿಕ ನರೇಂದ್ರ ಭಾಯಿ ಇಲ್ಲಿಗೆ ಬಂದಿದ್ದಾರೆ. ಎಲ್ಲರೂ ಜೋರಾಗಿ ಘೋಷಣೆ ಕೂಗಿ, ನಿಮ್ಮ ಘೋಷಣೆಯು ಪಶ್ಚಿಮ ಬಂಗಾಳದ ವರೆಗೂ ತಲುಪಬೇಕು. ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಕೇವಲ ಒಂದು ಪಕ್ಷವಾಗಿ ಬೆಳೆದಿಲ್ಲ, ನಾವು ನಮ್ಮ ಮತದಾರರ ಸಂಖ್ಯೆಯನ್ನೂ ಹೆಚ್ಚಿಸಿದ್ದೇವೆ. ನರೇಂದ್ರ ಭಾಯಿ ಅವರು ಗುಜರಾತ್‌ನ ಹೆಮ್ಮೆ. ಅವರಿಂದಾಗಿಯೇ ಇಡೀ ಜಗತ್ತು ಗುಜರಾತನ್ನು ಗುರುತಿಸುತ್ತದೆ ಎಂದು ಹೇಳಿದ್ದಾರೆ.
ಜೂ.7-8ಕ್ಕೆ ಮಾಲ್ಡೀವ್ಸ್‌ಗೆ: 2ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಲಿರುವ ಮೋದಿ ಅವರು ಜೂ.7 ಮತ್ತು 8ರಂದು ಮಾಲ್ಡೀವ್ಸ್ ಪ್ರವಾಸ ಮಾಡಲಿದ್ದಾರೆ. ಹೊಸದಾಗಿ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಮೊದಲ ವಿದೇಶ ಪ್ರವಾಸ ಇದಾಗಿರಲಿದೆ ಎಂದು ಮೂಲಗಳು ತಿಳಿಸಿವೆ.
ನೀತಿ ಸಂಹಿತೆ ವಾಪಸ್: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾ. 10ರಂದು ಜಾರಿಗೊಂಡಿದ್ದ ಚುನಾವಣಾ ನೀತಿ ಸಂಹಿತೆಯನ್ನು ಕೇಂದ್ರ ಚುನಾವಣಾ ಆಯೋಗ (ಇ.ಸಿ) ಹಿಂಪಡೆದಿದೆ. ಈ ಕುರಿತಂತೆ, ಎಲ್ಲಾ ರಾಜ್ಯಗಳ ಸಂಪುಟ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಇ.ಸಿ, ನೀತಿ ಸಂಹಿತೆಯನ್ನು ಹಿಂಪಡೆದಿರುವುದಾಗಿ ತಿಳಿಸಿದೆ.