ತಿ.ನರಸೀಪುರ: ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಸಮಗ್ರ ಅಭಿವೃದ್ಧಿಗೆ ವಿವಿಧ ಯೋಜನೆಗಳ ಮೂಲಕ ಕಾರ್ಯಕ್ರಮಗಳನ್ನು ನೀಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ತಾಲೂಕಿನ ಸೋಸಲೆ ಹೋಬಳಿ ವೀರಪ್ಪ ಒಡೆಯರಹುಂಡಿ ಗ್ರಾಮದಲ್ಲಿ ಸಾಮಾನ್ಯ ವರ್ಗದ ಬಡಾವಣೆಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನಮ್ಮ ಸರ್ಕಾರ ಬಂದ ಮೇಲೆ ಶಿಕ್ಷಣ, ನೀರಾವರಿ, ಆರೋಗ್ಯ, ಹಾಗೂ ಮೂಲಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ.
ತಿ.ನರಸೀಪುರ ಮತ್ತು ವರುಣಾ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದೇವೆ. ಎಸ್‌ಸಿ, ಎಸ್‌ಟಿ ವರ್ಗದ ಜನರ ಬಡಾವಣೆಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿಗೆ 37 ಕೋಟಿ ನೀಡಲಾಗಿತ್ತು. ಈಗ ಹಿಂದುಳಿದ ಸಾಮಾನ್ಯ ವರ್ಗಗಳ ಬಡಾವಣೆಗಳಿಗೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇವೆಂದರು.
ಇದೇ ವೇಳೆ ಹಸುವಟ್ಟಿ ಗ್ರಾಮದಲ್ಲಿ ಅಪೂರ್ಣಗೊಂಡಿರುವ ಅಂಬೇಡ್ಕರ್ ಭವನದ ನಿರ್ಮಾಣ ಕೈಗೊಳ್ಳುವಂತೆ ಜಿಪಂ ಇಇ ರಂಗಯ್ಯ ಅವರಿಗೆ ಸಚಿವರು ಸೂಚಿಸಿದರು. ಬಳಿಕ, ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮದಡಿ ರಾಜ್ಯ ಸರ್ಕಾರ ಕಳೆದ 4 ವರ್ಷಗಳಲ್ಲಿ ಜಾರಿಗೊಳಿಸಿದ ಕಾರ್ಯಕ್ರಮಗಳ ಕೈಪಿಡಿಯನ್ನು ಜನರಿಗೆ ವಿತರಿಸಿ ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.
ವಸತಿ ಯೋಜನೆಗಳ ಜಾಗೃತ ಸಮಿತಿ ಅಧ್ಯಕ್ಷ ಸುನಿಲ್‌ಬೋಸ್, ಜಿಪಂ ಸದಸ್ಯರಾದ ಮಂಗಳಮ್ಮ ಮಹಾದೇವಸ್ವಾಮಿ, ಟಿ.ಎಚ್.ಮಂಜುನಾಥ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ವಜ್ರೆಗೌಡ, ಪುರಸಭಾಧ್ಯಕ್ಷ ಸಿ.ಉಮೇಶ್ ಪಾಪು, ತಾಪಂ ಮಾಜಿ ಅಧ್ಯಕ್ಷ ದೊಡ್ಡೇಬಾಗಿಲು ಮಲ್ಲಿಕಾರ್ಜುನಸ್ವಾಮಿ, ಸೋಸಲೆ ಗ್ರಾಪಂ ಉಪಾಧ್ಯಕ್ಷ ರಾಮು, ತಾಪಂ ಸದಸ್ಯರಾದ ರಾಮಲಿಂಗಯ್ಯ,
ರಂಗಸ್ವಾಮಿ, ಕಿಯೋನಿಕ್ಸ್ ನಿರ್ದೇಶಕ ಉಕ್ಕಲಗೆರೆ ಮುಖಂಡರಾದ ಉಕ್ಕಲಗೆರೆ ರಾಜು, ಕೆಬ್ಬೆಹುಂಡಿ ಮಹೇಶ್, ಸಿದ್ದನಹುಂಡಿ ಸೋಮಣ್ಣ, ಶಿವಕುಮಾರ ಬಡ್ಡು, ಬಸವಣ್ಣ, ವೀರಪ್ಪೊಡೆಯರಹುಂಡಿ ಬಸವರಾಜು, ಮೃಗಾಲಯ ಪ್ರಾಧಿಕಾರದ ನಿರ್ದೇಶಕಿ ಲತಾ, ಜಿಲ್ಲಾ ಅಹಿಂದ ಅಧ್ಯಕ್ಷ ಅನೂಪ್‌ಗೌಡ, ನರಸಿಂಹಮಾದನಾಯಕ, ಸತೀಶ್‌ನಾಯಕ ಪುರಸಭಾ ಸದಸ್ಯ ರಾಘವೇಂದ್ರ ಮತ್ತಿತರರಿದ್ದರು.
ತಾಲೂಕಿನ ರೈತರು ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲು ನಾಲೆಗಳ ಆಧುನೀಕರಣ, ಏತ ನೀರಾವರಿ ಯೋಜನೆಗಳಿಗೆ ನೂರಾರು ಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕಾರಣ ಅಗತ್ಯವಿಲ್ಲ. ಪಕ್ಷ ಭೇದ ಮರೆತು ಅಭಿವೃದ್ಧಿಗಾಗಿ ಕೈಜೋಡಿಸೋಣ.
-ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ