Advertisement

ಇರುಳು ಕಂಡ ಬಾವಿ

12:45 PM May 07, 2018 | |

ಗೊತ್ತಿದ್ದೂ ಗೊತ್ತಿದ್ದೂ ಮೋಸ ಹೋಗುತ್ತೇವೆ. ಆದರೆ ಮೋಸ ಹೋದದ್ದು ಗೊತ್ತಾಗುವುದು ಮಾತ್ರ ಮೋಸ ಹೋದ ನಂತರವೇ. ದಾರಿ ತಪ್ಪುವುದು ಗೊತ್ತಾಗುವುದು ಅದು ತಪ್ಪಿದ ನಂತರ ಅಲ್ಲವೇ? ಹಾಗೇ. 

Advertisement

ಅದೊಂದು ಸಮಾರಂಭ. ಪರಿಚಿತರೊಬ್ಬರು ಆ ಅಪರಿಚಿತ ವ್ಯಕ್ತಿಯನ್ನು ಪರಿಚಯಿಸಿಕೊಡುತ್ತ, ಇವರ ಸಂಸ್ಥೆ ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. ಇವರು ಸಾಲವನ್ನೂ ಕೊಡುತ್ತಾರೆ. ಡಿಪಾಸಿಟ್‌ ಮೇಲೆ ಒಳ್ಳೆ ಬಡ್ಡಿಯೂ ಬರತ್ತೆ ಎಂದರು. ಅವರಿಗೆ ಮಾತನಾಡಲು ಇಷ್ಟು ಪೀಠಿಕೆ ಸಾಕಾಗಿತ್ತು. ತಮ್ಮ ಸಂಸ್ಥೆಯ ಬಗೆಗೆ ಹೇಳತೊಡಗಿದರು “ನಾವು ಶೇ. 12ರಷ್ಟು ಬಡ್ಡಿ ಕೊಡುತ್ತೇವೆ.

ಯಾವ ಬ್ಯಾಂಕ್‌ ಇಷ್ಟು ಬಡ್ಡಿ ಕೊಡತ್ತೆ ಹೇಳಿ? ಠೇವಣಿ ಇಡಿ ಮೇಡಂ’ ಎಂದು ಹೇಳತೊಡಗಿದರು. ನಾನೋ “ಇಲ್ಲ ಸರ್‌, ನನಗೆ ಯಾಕೋ ಇಂಥ ಸಂಸ್ಥೆಗಳ ಬಗೆಗೆ ನಂಬಿಕೆ ಕಡಿಮೆ’ ಎಂದುಬಿಟ್ಟೆ. ಅವರು ಕೋಪಿಸಿಕೊಳ್ಳಲಿಲ್ಲ, ಅಷ್ಟೇ ಸಹಜವಾಗಿ ಹೇಳಿದರು? ನೀವು ಇಡದಿದ್ದರೂ ನಿಮ್ಮ ಸ್ನೇಹಿತರಿಗೆ, ಪರಿಚಿತರಿಗೆ ಹೇಳಿ’ ನನಗೇ ಬೇಡ ಎಂದ ಮೇಲೆ ನಾನು ಬೇರೆಯವರಿಗೆ ರೆಕಮಂಡ್‌ ಮಾಡುವುದು ಯಾವ ನ್ಯಾಯ?

 ಕಷ್ಟಪಟ್ಟು ದುಡಿದು, ಹಣ ಉಳಿಸಿರುತ್ತೇವೆ. ಆದರೆ ಅದನ್ನು ಹೂಡುವ ವಿಷಯದಲ್ಲಿ ಒಮ್ಮೊಮ್ಮೆ ದುರಾಸೆಗೆ ಇಳಿಯುತ್ತೇವೆ. ಸ್ವಲ್ಪ ಜಾಸ್ತಿ ಬಡ್ಡಿ ಸಿಗತ್ತೆ ಎನ್ನುವುದು ಸಹಜವಾದ ಆಕಾಂಕ್ಷೆ. ಇದು ನಮ್ಮ ವಿವೇಕವನ್ನು ಮರೆಮಾಚುತ್ತದೆ. ಹೆಚ್ಚಿನ ಬಡ್ಡಿಗೆ ಎಲ್ಲೋ ದುಡ್ಡು ಇಡುವುದು, ಚೀಟಿ ಹಾಕುವುದು, ಕಡಿಮೆ ಬೆಲೆಗೆ ನಿವೇಶನ ಸಿಗುತ್ತಿರುವುದೇ ಅದೃಷ್ಟ ಎಂದು ಭಾವಿಸಿ ಹಿಂದೆ ಮುಂದೆ ಯೋಚಿಸದೆ, ದಾಖಲೆಗಳನ್ನು ನೋಡದೆ ಮುಂಗಡವಾಗಿ ಹಣ ನೀಡುವುದು ಹೀಗೆ.

ಇಷ್ಟೇ ಅಲ್ಲ, ಇವರು ನಮಗೆ ತುಂಬಾ ಪರಿಚಿತರು. ಹಾಗಾಗಿ, ಇವರು ನಮಗೆ ಮೋಸ ಮಾಡುವುದೇ ಇಲ್ಲ ಎಂದು ಕಣ್ಣುಮುಚ್ಚಿ ನಂಬುವುದು. ಇದೆಲ್ಲವೂ ಇರುಳು ಕಂಡ ಬಾವಿಯಲ್ಲಿ ಹಗಲು ಹೋಗಿ ಬೀಳುವುದು. ಕೆಲವರಿರುತ್ತಾರೆ, ಅವರಿಗೆ ತಮ್ಮ ಬಗೆಗಿಂತ ಬೇರೆಯವರ ಮೇಲೆ ನಂಬಿಕೆ ಜಾಸ್ತಿ. ಒಂದು ಪ್ರಸಂಗದ ಬಗ್ಗೆ ಕೇಳಿ; ನನಗೆ ಗೊತ್ತಿರುವವರು ಒಂದು ನಿವೇಶನ ಕೊಂಡರು.

Advertisement

ಆಗ ನಾನು, ನೀವು ಕಾಗದ ಪತ್ರ ಎಲ್ಲ ಸರಿಯಾಗಿ ನೋಡಿದಿರಾ? ಎಂದು ಕೇಳಿದೆ. ಅದಕ್ಕೆ ಅವರು ಕೊಟ್ಟ ಉತ್ತರ; ಮೇಡಂ, ನನ್ನ ಫ್ರೆಂಡ್‌ ತಗೊಂಡಿದ್ದಾನೆ. ಅವನು ಇಂತಹದುದರಲ್ಲಿ ತುಂಬಾ ಪಳಗಿದವನು. ಅವನು ಹೇಗಿದ್ದರೂ ನೋಡಿರುತ್ತಾನೆ. ಎಲ್ಲಾ ಪಕ್ಕಾ ಇದ್ದರೇನೇ ಅವನು ತೆಗೆದುಕೊಳ್ಳುವುದು. ಮೋಸ ಆಗುವುದು ಸಾಧ್ಯವೇ ಇಲ್ಲ ಅನ್ನಿಸಿತು. ಹಾಗಾಗಿ ನಾನು ಕೊಂಡುಕೊಂಡೆ… ಅರ್ಥವಾಯಿತು ತಾನೆ?  ನಾವು ನಿರ್ಧಾರದ ಜವಾಬ್ದಾರಿಗಳನ್ನು ಬೇರೆಯವರ ಹೆಗಲ ಮೇಲೆ ಹೊರಿಸುತ್ತೇವೆ.

ಯಾವುದಾದರೂ ಹೊಸ ಲೇಔಟ್‌ನಲ್ಲಿ ಸೈಟ್‌ಕೊಳ್ಳಲು ಹೋದರೆ, ಯಾವುದಾದರೂ ಸ್ಕೀಮ್‌ನಲ್ಲಿ ಹಣ ಹೂಡಲು ಹೋದರೆ ಅವರು ಹೇಳುವ ರೀತಿ ಹೇಗಿರುತ್ತದೆ ಎಂದರೆ-ಇಲ್ಲಿ ಡಾಕ್ಟರ್‌, ಎಂಜಿನಿಯರ್‌, ಲಾಯರ್‌ ಇವರೆಲ್ಲ ತಗೊಂಡಿದ್ದಾರೆ. ಅವರೆಲ್ಲರೂ ಈ ಸ್ಕೀಮ್‌ನಲ್ಲಿ ಇದ್ದಾರೆ. ಅವರೇ ಇರುವಾಗ ನಿಮ್ಮದೇನು ಎನ್ನುವ ಧೋರಣೆ. 

ನಿಜ ಹೇಳಬೇಕೆಂದರೆ ಅವರು ಡಾಕ್ಟರ್‌ ಆದ ಮಾತ್ರಕ್ಕೆ, ಎಂಜನಿಯರ್‌ ಆಗಿರುವ ಮಾತ್ರಕ್ಕೆ ಮೋಸ ಹೋಗಬಾರದು ಎಂದೇನು ಇಲ್ಲವಲ್ಲ. ಇಲ್ಲಿ ಇರಬೇಕಾದದ್ದು ಕಾಮನ್‌ ಸೆನ್ಸ್‌ ಮಾತ್ರ. ನಮ್ಮಿಂದ ಹಣ ಪಡೆಯುವವನು ಅದನ್ನು ಎಲ್ಲಿ ಹೂಡುತ್ತಾನೆ. ಅವನಿಗೆ ನಮಗೆ ಕೊಡಲು ಬೇಕಾದ ಹಣ ಅವನಿಗೆ, ಭಾರೀ ಮೊತ್ತದ ಬಡ್ಡಿಯೊಂದಿಗೆ ಬರುವುದು ಎಲ್ಲಿಂದ, ಜೊತೆಗೆ ನಿವೇಶನವೇ ಇರಲಿ,

ಯಾವುದೇ ಇರಲಿ ಇಲ್ಲಿ ಮಾರುವ, ಕೊಳ್ಳುವವರ ನಡುವೆ ಇರಬೇಕಾದದ್ದು ಪರಸ್ಪರ ಪ್ರಯೋಜನವೇ ಹೊರತು ಬೇರೆ ಅಲ್ಲ. ಯಾರು ಯಾರಿಗೂ ಸಹಾಯ ಮಾಡುತ್ತಿಲ್ಲ. ಬದಲಾಗಿ, ಪರಸ್ಪರ ಉಪಯುಕ್ತತೆಯ ಭಾವನೆ ಇರಬೇಕು. ಹಣ ಗಳಿಸಿ, ಉಳಿಸಿ ಅದನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳಲು ಹೊರಟಾಗ‡ ಭದ್ರತೆಗೆ ಮೊದಲ ಆದ್ಯತೆ ಇರಲೇ ಬೇಕು.

* ಸುಧಾಶರ್ಮ ಚವತ್ತಿ

Advertisement

Udayavani is now on Telegram. Click here to join our channel and stay updated with the latest news.

Next